ಹುತಾತ್ಮ ಅರಣ್ಯ ಸಿಬ್ಬಂದಿ ಮಕ್ಕಳಿಗೆ ವಿದ್ಯಾರ್ಥಿ ವೇತನ: ಸಚಿವ ರಮಾನಾಥ ರೈ
ಬೆಂಗಳೂರು, ಸೆ. 11: ಅರಣ್ಯ ಮತ್ತು ವನ್ಯಜೀವಿ ಸಂರಕ್ಷಿಸಲು ಪ್ರಾಣತ್ಯಾಗ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿಯ ಮಕ್ಕಳಿಗೆ ಪ್ರಸಕ್ತ ಸಾಲಿನಿಂದ ವಿದ್ಯಾರ್ಥಿ ವೇತನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ರಮಾನಾಥ ರೈ ತಿಳಿಸಿದ್ದಾರೆ.
ಸೋಮವಾರ ಇಲ್ಲಿನ ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಅಂಗವಾಗಿ ನಾಡಿನ ಅರಣ್ಯ ಇಲಾಖೆಯ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದ ಅವರು, ಅರಣ್ಯ ರಕ್ಷಣೆ ಮಾಡುವಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ ಹುತಾತ್ಮರ ಮಕ್ಕಳಿಗೆ ಪ್ರೌಢಶಾಲೆಯಿಂದ ಉನ್ನತ ಶಿಕ್ಷಣದವರೆಗೂ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ತಿಳಿಸಿದರು.
ಇದರಿಂದ ಅವರ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಈ ಸಂಬಂಧ ರಾಜ್ಯ ಅರಣ್ಯ ಇಲಾಖೆ ಹುತಾತ್ಮರ ದಿನಾಚರಣೆ ಸಮಿತಿ 20ಲಕ್ಷ ರೂ. ದೇಣಿಗೆ ಸಂಗ್ರಹ ಮಾಡಿದ್ದು, ಇದರ ಜೊತೆಗೆ ಸರಕಾರದ ಹಣವೂ ಸೇರಿಸಿ ಇದೇ ಸಾಲಿನಿಂದ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಇಲಾಖೆಯ ಹುತಾತ್ಮ ಅಧಿಕಾರಿ ಪಿ.ಶ್ರೀನಿವಾಸ್ ಹಾಗೂ ಸಿಬ್ಬಂದಿಗಳ ಕುರಿತ ‘ಕಾನನ ಸೇನಾನಿಗಳು’ ಚಿತ್ರದ ಧ್ವನಿಮುದ್ರಣ ತಯಾರಾಗಿದ್ದು, ಶೀಘ್ರದಲ್ಲೇ ವೀಡಿಯೊ ಸಿಡಿ ಬಿಡುಗಡೆ ಮಾಡಲಾಗುವುದು. ಅಲ್ಲದೆ, 50 ಲಕ್ಷ ರೂ. ನೆರವಿಗಾಗಿ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ವಿವರ ನೀಡಿದರು.
ಅರಣ್ಯ ನಮ್ಮ ನೈಸರ್ಗಿಕ ಸಂಪತ್ತು. ಅದನ್ನು ಉಳಿಸಲು ಇಲಾಖೆಯೊಂದಿಗೆ ಎಲ್ಲರೂ ಕೈ ಜೋಡಿಸಬೇಕು. ಅರಣ್ಯ ಹಾಗೂ ವನ್ಯಜೀವಿಗಳ ರಕ್ಷಣೆಗಾಗಿ ತಮ್ಮ ಬದುಕನ್ನು ತ್ಯಾಗ ಮಾಡಿದವರ ಸ್ಮರಣೆ ಅಗತ್ಯ. ವಿನಾಶದ ಅಂಚಿನಲ್ಲಿರುವ ವನ್ಯಜೀವಿ ಹಾಗೂ ಪರಿಸರವನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಪ್ರತಿಪಾದಿಸಿದರು.
ಸ್ಮರಣ ದಿನ: ಜೋಧಪುರ್‌ನ ಮಹಾರಾಜ ಅಭಯ ಸಿಂಗ್‌ನ ಸೈನಿಕರು ಕೇರ್ಜಲಿ ಪ್ರಾಂತ್ಯದಲ್ಲಿ ಬೆಳೆದಿದ್ದ ಮರಗಳನ್ನು ರಾಜನ ಹೊಸ ಅರಮನೆಗೆ ಅವಶ್ಯವಿದ್ದ ಕೇರ್ಜಲಿ ಮರಗಳನ್ನು ಕಡಿಯಲು ವಿರೋಧಿಸಿದ ಬಿಷ್ಣೊಯಿ ಸಮುದಾಯದ 363 ಪುರುಷ, ಮಹಿಳೆ ಹಾಗೂ ಮಕ್ಕಳನ್ನು ಕೊಲ್ಲಲಾಯಿತು. ಮರಗಳ ಸಂರಕ್ಷಣೆಗಾಗಿ ಬಲಿದಾನ ಹೊಂದಿದ ಬಿಷ್ಣೊಯಿಗಳ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಲು ಕೇಂದ್ರ ಸರಕಾರ ಸೆ.11ರಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವೆಂದು ಆಚರಿಸುತ್ತಿದೆ ಎಂದರು.
ಹುತಾತ್ಮರ ದಿನಾಚರಣೆ ಮೂಲಕ ನಮ್ಮ ಅರಣ್ಯಗಳ ಪ್ರಾಮುಖ್ಯತೆಯನ್ನು ಮಕ್ಕಳಿಗೆ ತಿಳಿಸುವ ಅಗತ್ಯವಿದೆ. ನಮ್ಮ ಅರಣ್ಯ ಪ್ರದೇಶಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಪ್ರಾಣ ನೀಡಿದ ಅನೇಕರ ಬಲಿದಾನಗಳನ್ನು ಸ್ಮರಿಸಬೇಕಾದ ಅಗತ್ಯವಿದೆ ಎಂದರು.
ಉಪ ಅರಣ್ಯ ಸಂರಕ್ಷಣಾಕಾರಿಯಾಗಿದ್ದ ದಿ.ಶ್ರೀನಿವಾಸ್ ಅವರು ದಂತ ಚೋರ ವೀರಪ್ಪನ್ ಅವರಿಂದ ಹುತಾತ್ಮರಾದರು. ಆ ದಿನವನ್ನು 21 ವರ್ಷಗಳಿಂದ ಅರಣ್ಯ ಇಲಾಖೆ ಹುತಾತ್ಮರ ದಿನವೆಂದು ಆಚರಣೆ ಮಾಡಿಕೊಂಡು ಬರುತ್ತಿದೆ. ಕೇಂದ್ರ ಸರಕಾರ ಇವರ ಕಾರ್ಯದಕ್ಷತೆ ಮೆಚ್ಚಿ ಕೀರ್ತಿ ಚಕ್ರ ಶೌರ್ಯ ಪ್ರಶಸ್ತಿ ಪ್ರದಾನಿಸಿದೆ ಎಂದು ಇದೇ ಸಂದರ್ಭದಲ್ಲಿ ಸ್ಮರಿಸಿದರು.
ಕಾರ್ಯಕ್ರಮ ಆರಂಭದಲ್ಲಿ ಅರಣ್ಯ ಭವನದ ಮುಂಭಾಗ ಅರಣ್ಯಾಧಿಕಾರಿ ಹಾಗೂ ಇಲಾಖೆ ಸಿಬ್ಬಂದಿ ಮೌನಾಚರಣೆ ಮೂಲಕ ತ್ಯಾಗ, ಬಲಿದಾನ ಮಾಡಿದವರನ್ನು ಸ್ಮರಿಸಿದರು. ಅಪರ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಅಪರ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್.ಮೂರ್ತಿ, ಅರಣ್ಯ ಪಡೆ ಮುಖ್ಯಸ್ಥ ಕೆ.ಎಸ್. ಸುಗಾರ, ಕೆಎರ್ಸ್ಸಾಪಿ ಎಡಿಜಿಪಿ ಭಾಸ್ಕರ್ ರಾವ್ ಹಾಜರಿದ್ದರು.