ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ರಮಗಳ ಕುರಿತ ದಾಖಲೆ ಬಯಲು: ಯಡಿಯೂರಪ್ಪ
ಬೆಂಗಳೂರು, ಸೆ. 11: ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿರುವ ಭ್ರಷ್ಟಾಚಾರ, ಅಕ್ರಮ ಹಾಗೂ ಹಗರಣಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ನಾಲ್ಕೈದು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಹೇಳಿದ್ದಾರೆ.
ಸೋಮವಾರ ಬೆಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಸಾಚಾ ಎಂದು ಜನರ ಮುಂದೆ ಬಿಂಬಿಸಿಕೊಳ್ಳುತ್ತಿದ್ದಾರೆ. ಅವರು ಏನೇನು ಅಕ್ರಮ ಮಾಡಿದ್ದಾರೆ ಎನ್ನುವುದನ್ನು ಜನರ ಮುಂದಿಡುತ್ತೇವೆ. ಇವರು ನಡೆಸಿರುವ ಅಕ್ರಮಗಳ ಬಗ್ಗೆ ಶೇ. 101ರಷ್ಟು ಖಚಿತ ದಾಖಲೆಗಳು ಸಿಕ್ಕಿವೆ. ಈ ಎಲ್ಲ ದಾಖಲೆಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಕೆಲ ದಾಖಲೆಗಳು ಸಿಗದಂತೆ ಈ ಸರಕಾರ ಅಡ್ಡಗಾಲು ಹಾಕುತ್ತಿದೆ. ಅಲ್ಲದೆ ಪ್ರಮಾಣೀಕೃತ ದಾಖಲೆಗಳನ್ನು ಪಡೆಯುವುದು ತಡವಾಗಿರುವುದರಿಂದ ದಾಖಲೆ ಬಿಡುಗಡೆಯೂ ವಿಳಂಬವಾಗಿದೆ. ಸಿದ್ದರಾಮಯ್ಯ ಹಾಗೂ ಅವರ ಸಚಿವರುಗಳ ವಿರುದ್ಧ ಖಚಿತ ದಾಖಲೆಗಳನ್ನು ಇಟ್ಟುಕೊಂಡೇ ಚಾರ್ಜ್ ಶೀಟ್ ಬಿಡುಗಡೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಬಿಬಿಎಂಪಿಯಲ್ಲಿ ಸಾವಿರಾರು ಕೋಟಿ ರೂ. ಹಗರಣ ನಡೆದಿದ್ದು, ಈ ಹಗರಣಗಳಲ್ಲಿ ನಾಲ್ವರು ಸಚಿವರು ಸೇರಿದಂತೆ ಶಾಸಕರ ಪಾಲು ಇದೆ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪುತ್ರ ಭಾಗಿಯಾಗಿದ್ದಾರೆ. ಈ ಎಲ್ಲ ದಾಖಲೆಗಳ ಕುರಿತು ಶೀಘ್ರದಲ್ಲಿ ಚಾರ್ಜ್ ಶೀಟ್ ಬಿಡುಗಡೆ ಮಾಡಲಾಗುವುದು ಎಂದು ಎಚ್ಚರಿಸಿದರು.
ತನಿಖೆಗೊಳಪಡಿಸಲಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದ ಮರುದಿನವೇ ರಾಹುಲ್ ಗಾಂಧಿ ಸಂಘಪರಿವಾರದ ಮೇಲೆ ಆರೋಪ ಹೊರಿಸಿದ್ದರು. ಅವರ ಬಳಿ ಸಾಕ್ಷ್ಯಾಧಾರಗಳಿದ್ದರೆ ಕೊಡಲಿ, ಅವರದೇ ಸರಕಾರವಿದೆ. ತನಿಖೆಯಲ್ಲಿ ಸತ್ಯಾಂಶ ಹೊರಬರಬೇಕು. ಹಾಗಾಗಿ, ರಾಹುಲ್ ಗಾಂಧಿಯವರನ್ನು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.