×
Ad

ಕೌಶಲ್ಯ ವೃದ್ಧಿಯೇ ಉದ್ಯೋಗಕ್ಕೆ ದಾರಿ: ಶಾಸಕ ಬಿ.ಬಿ.ನಿಂಗಯ್ಯ

Update: 2017-09-11 20:12 IST

ಮೂಡಿಗೆರೆ, ಸೆ.11: ಸರ್ಕಾರಿ ಉದ್ಯೋಗವನ್ನು ಎಲ್ಲರಿಗೂ ನೀಡಲು ಸಾಧ್ಯವಿಲ್ಲ ಎಂಬ ಕಾರಣದಿಂದ  ಉದ್ಯೋಗ ಕೌಶಲ್ಯ ಮೇಳಗಳನ್ನು ಆಯೋಜಿಸುತ್ತಿದೆ. ಕೌಶಲ್ಯ ವೃದ್ಧಿಯೇ ಉದ್ಯೋಗಕ್ಕೆ ದಾರಿದೀಪವಾಗಿದ್ದು, ಇದರ ಉಪಯೋಗವನ್ನು ಪ್ರತಿಭಾವಂತರು ಪಡೆದುಕೊಳ್ಳಬೇಕು ಎಂದು ಶಾಸಕ ಬಿ,ಬಿ ನಿಂಗಯ್ಯ ತಿಳಿಸಿದರು.

ಅವರು ಸೋಮವಾರ ಜಿಪಂ, ತಾಪಂ ಹಾಗೂ ವಿವಿಧ ಗ್ರಾಪಂಗಳ ಸಹಯೋಗದಲ್ಲಿ ಪಟ್ಟಣದ ಡಿಎಸ್‍ಬಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಪಂಡಿತ್ ದೀನ್ ದಯಾಳು ಉಪಧ್ಯಾಯ, ಕೌಶಲ್ಯ ಯೋಜನೆ ಮತ್ತು ರಾಜೀವ್ ಗಾಂಧಿ ಚೈತನ್ಯ ಕೌಶಲ್ಯ ಯೋಜನೆಯಡಿ ನಿರುದ್ಯೋಗ ಅಭ್ಯರ್ಥಿಗಳ, ಪಾಲಕ, ಪೋಷಕರ 1 ದಿನದ ಸಮಾಲೋಚನ ಸಭೆಯಲ್ಲಿ ಮಾತನಾಡಿದರು.

ಎಲ್ಲರಿಗೂ ಸಕಾರಿ ಉದ್ಯೋಗ ನೀಡಲು ಸಾದ್ಯವಿಲ್ಲ. ಸರ್ಕಾರ ನಿರುದ್ಯೋಗಿಗಳಿಗಾಗಿ ಕೌಶಲ್ಯ ವೃದ್ಧಿಸಿಕೊಳ್ಳಲು ಪ್ರತಿ ಗ್ರಾಪಂ ನಿಂದ 50 ಜನರನ್ನು ಆಯ್ಕೆ ಮಾಡುತ್ತಿದೆ. ತಾಲೂಕಿನಿಂಧ 1500 ಯುವಕ ಯುವತಿಯರನ್ನು ಸೇರಿಸಿ ಇವರ ಅಗತ್ಯಕ್ಕೆ ತಕ್ಕಂತೆ 3 ತಿಂಗಳಿಂದ 1 ವರ್ಷದ ವರೆಗೆ ತರಬೇತಿ ನೀಡುತ್ತಿದೆ. ಇದರಲ್ಲಿ ಆಯ್ಕೆಯಾದ 25 ಜನರಿಗೆ ವಿವಿಧ ಕಂಪೆನಿಗಳಲ್ಲಿ ಉದ್ಯೋಗ ನೀಡುವ ಜೊತೆಗೆ ಪ್ರತಿಭಾವಂತರಿಗೆ ಉದ್ಯೋಗ ಮೇಳ ನಡೆಸಿ ಉದ್ಯೋಗ ಕೊಡಿಸುವ ಯೋಜನೆಯಾಗಿದೆ ಎಂದು ಹೇಳಿದರು.

ಎಂಎಲ್‍ಸಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಉದ್ಯೋಗ ಎಲ್ಲರಿಗೂ ಅತಿಮುಖ್ಯವಾಗಿದ್ದು, ಶಾಲಾ-ಕಾಲೇಜುಗಳಿಂದ ಕೇವಲ ಶಿಕ್ಷಣದ ಕಲಿಕೆ ನಡೆಯುತ್ತದೆ ಎಂಬುದನ್ನು ಇಂದಿನ ಯುವಕರು ಮನಗಾಣಬೇಕು. ಅಧುನಿಕ ಜಗತ್ತಿನಲ್ಲಿ ಕೌಶಲ್ಯ ಪಡೆಯಲು ತರಬೇತಿ ಅತೀ ಮುಖ್ಯ. ಹಾಗಾದರೆ ಸ್ವಉಧ್ಯೋಗ ಇಲ್ಲವೆ ಉತ್ತಮ ಕಂಪೆನಿಗಳಲ್ಲಿ ಸ್ಪರ್ಧಿಸಲು ಸಾದ್ಯ. ತಮ್ಮಲ್ಲಿರುವ ಪ್ರತಿಭೆ, ಕೌಶಲ್ಯಗಳನ್ನು, ಹೆಚ್ಚಿಸಿಕೊಂಡು ಕಂಪನಿಗಳ ಅಗತ್ಯಗಳನ್ನು ಪೂರೈಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಎಂಎಲ್‍ಸಿ ಶ್ರೀಮತಿ ಡಾ.ಮೋಟಮ್ಮ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಉತ್ತಮ ಪ್ರತಿಭೆಗಳಿದ್ದರೂ ತರಬೇತಿ ಇಲ್ಲದೆ  ಆಧುನಿಕ ಯುಗದಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇಂತಹರನ್ನು ಗುರುತಿಸಿ ತರಬೇತಿ ನೀಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸರ್ಕಾರ ಸಹಕರಿಸಬೇಕು ಎಂದು ಕರೆ ನೀಡಿದರು. 

ಈ ವೇಳೆ ತಾಪಂ ಅಧ್ಯಕ್ಷ ಕೆ.ಸಿ.ರತನ್ ಮಾತನಾಡಿದರು. ಸುಮಾರು 12ಕ್ಕೂ ಅಧಿಕ ಕಂಪೆನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದು, 600 ಕ್ಕೂ ಅಧಿಕ ಯುವಕ-ಯುವತಿಯರು ಹೆಸರು ನೋಂದಾಯಿಸಿಕೊಂಡರು.

ಕಾರ್ಯಕ್ರಮದಲ್ಲಿ ತಾಪಂ ಉಪಾಧ್ಯಕ್ಷೆ ಸವಿತಾರಮೇಶ್, ಸದಸ್ಯರಾದ ದೇವರಾಜ್, ಭಾರತೀರವೀಂದ್ರ, ವೀಣಾಉಮೇಶ್, ಸುಂದರ್‍ಕುಮಾರ್, ತಾಪಂ ಇಒ ತಾರನಾಥ್, ಕಾಲೇಜು ಪ್ರಾಶುಪಾಲ ಬಸವರಾಜಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News