ದೇಶದ ಅನಿಲ ಕಂಪೆನಿಗಳು ಅತ್ಯಂತ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದೆ: ಸಂಸದ ವೀರಪ್ಪಮೊಯ್ಲಿ
ಚಿಕ್ಕಬಳ್ಳಾಪುರ, ಸೆ.11: ಭಾರತವನ್ನು ಹೊಗೆಮುಕ್ತ ದೇಶವನ್ನಾಗಿ ಮಾಡಲು ಕೇಂದ್ರದ ಯುಪಿಎ ಸರ್ಕಾರ ಮಾಡಿದ್ದ ಯೋಜನೆಯನ್ನು ಪ್ರಸ್ತುತ ಪ್ರಧಾನಿ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಮುಂದುವರಿತ್ತಿರುವುದು ಶ್ಲಾಘನೀಯ ಎಂದು ಕೇಂದ್ರ ಸಂಸದ ವೀರಪ್ಪಮೊಯ್ಲಿ ಅಭಿಪ್ರಾಯಪಟ್ಟರು.
ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಎನ್‍ಸಿ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಎಲ್ಲ ಮನೆಗಳಿಗೆ ಅನಿಲ ಸಂಪರ್ಕ ಕಲ್ಪಿಸುವ ಉದ್ಧೇಶದಿಂದ ಯೋಜನೆ ಪ್ರಾರಂಭಿಸಲಾಗಿದ್ದು, ಯುಪಿಎ ಸ್ರಾಕರ ಇಟ್ಟಿದ್ದ ಹೆಸರು ಬದಲಿಸಿ ಪ್ರಧಾನಮಂತ್ರಿ ಉಜ್ವಲ ಯೋಜನೆ ಎಂದು ಕರೆಯಲಾಗುತ್ತಿದೆ ಎಂದು ತಿಳಿಸಿದರು.
ದೇಶದ 286 ಜಿಲ್ಲೆಗಳ ಸುಮಾರು 5 ಕೋಟಿ ಕುಟುಂಬಗಳಿಗೆ ಅನಿಲ ಸಂಪರ್ಕ ಕಲ್ಪಿಸುತ್ತಿರುವುದು ಅಭಿನಂದನಾರ್ಹ, ಇದು ಸದುಪಯೋಗವಾಲು ಅನಿಲ ಸಂಪರ್ಕದ ಎಲ್ಲ ಅಧಿಕಾರಿಗಳು ಮತ್ತು ಏಜೆಂಟರು ಬದ್ಧತೆ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಈ ಯೋಜನೆ ಆಧಾರ್ ಸಂಪರ್ಕದೊಂದಿಗೆ ಅನುಷ್ಠಾನಗೊಳಿಸುವುದರಿಂದ ದುರುಪಯೋಗವಾಗಲು ಸಾಧ್ಯವಿಲ್ಲ. ಸರ್ಕಾರದ ಎಲ್ಲ ಯೋಜನೆಗಳಲ್ಲಿ ಪ್ರಥಮ ಬಾರಿಗೆ ಅನಿಲ ಕಂಪೆನಿಗಳು ಆಧಾರ್ ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದ್ದು, ತಮ್ಮ ಅಧಿಕಾರಾವಧಿಯಲ್ಲಿ ಎಂಬುದು ಹೆಮ್ಮೆಯ ವಿಷಯ ಎಂದರು.
ಸರ್ಕಾರ ಅನಿಲ ರಿಯಾಯಿತಿ ಕಡಿತಗೊಳಿಸುತ್ತಿಉರುವುದು ಸ್ವಾಗತಾರ್ಹ, ಅದರಲ್ಲಿ ಬರುವ ಆದಾಯ ನೇರವಾಗಿ ಗ್ರಾಹಕರಿಗೆ ತಲುಪಿಸಲು ಬದ್ಧತೆ ತೋರಬೇಕು. ಇದರಿಂದ ಹೆಚ್ಚಿನ ಲಾಭ ಬಡವರಿಗೆ ದೊರೆಯಲಿದೆ ಎಂದ ಅವರು, ಜಗತ್ತಿನಲ್ಲಿ ಸಾರ್ವಜನಿಕ ಕ್ಷೇತ್ರದ ಉದ್ಯಮಗಳಲ್ಲಿ ದೇಶದ ಅನಿಲ ಕಂಪೆನಿಗಳು ಅತ್ಯಂತ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದೇ ರೀತಿ ಮುಂದುವರಿಸುವಂತೆ ಕರೆ ನೀಡಿದರು.
ಕೋಲಾರ ಸಂಸದ ಕೆ.ಎಚ್. ಮುನಿಯಪ್ಪ ಅನಿಲ ಸಂಪರ್ಕಗಳನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿ, ಮುಂದಿನ ಆರು ತಿಂಗಳಲ್ಲಿ ಜಿಲ್ಲೆಯ ಎಲ್ಲ ಬಡ ಕುಟುಂಬಗಳಿಗೆ ಪ್ರಧಾನ ಮಂತ್ರಿಉಜ್ವಲ ಯೋಜನೆಯಡಿ ಅನಿಲ ಸಂಪರ್ಕ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದು, ಇದು ತ್ವರಿತಗತಿಯಲ್ಲಿ ಸಾಗಬೇಕು ಎಂದರು.
ಅನಿಲ ಕಂಪನಿಯ ಸ್ವಾಮಿನಾಥನ್ ಮಾತನಾಡಿ, ಜಿಲ್ಲೆಯಲ್ಲಿ ಅನಿಲ ಸಂಪರ್ಕವಿಲ್ಲದ ಸುಮಾರು 3 ಲಕ್ಷ ಕುಟುಂಬಗಳಿದ್ದು, ಇದರಲ್ಲಿ ಶೇ.61ರಷ್ಟು ಅಂದರೆ 2 ಲಕ್ಷ ಕುಟುಂಬಗಳಿಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ. ಉಳಿದ ಕುಟುಂಬಗಳಿಗೆ ಮುಂದಿನ ದಿನಗಳಲ್ಲಿ ಉಜ್ವಲ ಯೋಜನೆಯಡಿ ಸಂಪರ್ಕ ಕಲ್ಪಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ. ಸುಧಾಕರ್, ಶಿಡ್ಲಘಟ್ಟ ಶಾಸಕ ಎಂ. ರಾಜಣ್ಣ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ನಾಗೇಂದ್ರಪ್ಪ, ಅನಿಲ ಕಂಪನಿ ಅಧಿಕಾರಿಗಳಾದ ಪ್ರದೀಪ್‍ನಾಯರ್, ಗಣಪತಿ ಸುಬ್ರಹ್ಮಣ್ಯಂ, ಅಯ್ಯರ್, ನೂರ್‍ಫಾತೀಮ, ಆಫ್‍ತಾಬ್ ಸೇರಿದಂತೆ ಸ್ಥಳೀಯ ಏಜೆನ್ಸಿಗಳಾದ ಯೋಗೇಶ್ ಗ್ಯಾಸ್‍ನ ಬಿ.ಆರ್. ಶಾರದ , ಮಹೇಶ್ವರಿ ಗ್ಯಾಸ್ ಏಜೆನ್ಸಿಯ ಎಂ. ಶಿವಾನಂದ, ಶಿಡ್ಲಘಟ್ಟದ ವೆಂಕಟೇಶ್ವರ ಗ್ಯಾಸ್ ಏಜೆನ್ಸಿಯ ಸಿ.ವಿ. ನಾಗರಾಜ್ ಸೇರಿದಂತೆ ಜಿಲ್ಲೆಯ ಗೌರಿಬಿದನೂರು, ಬಾಗೇಪಲ್ಲಿ, ಗುಡಿಬಂಡೆ, ಚಿಂತಾಮಣಿ ಏಜೆನ್ಸಿಗಳ ಮಾಲೀಕರು ಉಪಸ್ಥಿತರಿದ್ದರು.