×
Ad

ಶಾಶ್ವತ ಏತ ನೀರಾವರಿ ಯೋಜನೆಗೆ ಆಗ್ರಹಿಸಿ ವಿವಿಧ ರೈತ ಸಂಘದಿಂದ ಧರಣಿ

Update: 2017-09-11 21:59 IST

ಶಿಕಾರಿಪುರ, ಸೆ.11: ರೈತರ ಪರ ಹೋರಾಟ ಪಾದಯಾತ್ರೆ ಮೂಲಕ ಅಧಿಕಾರದ ಗದ್ದುಗೆಗೇರಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಸ್ವಕ್ಷೇತ್ರದಲ್ಲಿನ ರೈತರು ಬೆಳೆ ವಿಮೆ, ಬೆಳೆ ಪರಿಹಾರಕ್ಕಾಗಿ ಹೋರಾಟ, ಬಂದ್ ಮತ್ತಿತರ ಧರಣಿ ಹಮ್ಮಿಕೊಳ್ಳಬೇಕಾಗಿರುವುದು ರೈತ ವರ್ಗದ ದುರಂತವಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಟಿ ಗಂಗಾಧರ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ವತಿಯಿಂದ ಜನಜಾನುವಾರುಗಳಿಗೆ ಹಾಗೂ ಕುಡಿಯುವ ನೀರಿಗಾಗಿ ಶಾಶ್ವತ ಏತ ನೀರಾವರಿ ಯೋಜನೆಗೆ ಆಗ್ರಹಿಸಿ ತಾಲೂಕು ಕಚೇರಿ ಮುಂಭಾಗ ನಡೆದ ರೈತರ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ದೇಶಕ್ಕೆ ಆಹಾರದ ಭದ್ರತೆಯನ್ನು ನೀಡುವ ರೈತ ನೀರಿಗಾಗಿ ಹೋರಾಡಬೇಕಾದ ದಯನೀಯ ಸ್ಥಿತಿಯನ್ನು ತಲುಪಿದ್ದು, ದೇಶದ 130 ಕೋಟಿ ಜನತೆಗೆ ಅನ್ನ ನೀಡುವುದು ರೈತನಾಗಿದ್ದು ದೊಡ್ಡ ಉದ್ಯಮಿಗಳಲ್ಲ ಎಂದ ಅವರು ಪ್ರಧಾನಿ ಮೋದಿ ಚುನಾವಣಾ ಪೂರ್ವದಲ್ಲಿ ಅಧಿಕಾರ ದೊರೆತಲ್ಲಿ ದೇಶದ ಜನತೆಯ ಆದಾಯ ದುಪ್ಪಟ್ಟುಗೊಳಿಸುವುದಾಗಿ ಭರವಸೆ ನೀಡಿದ್ದು ಇದೀಗ ರೈತರಿಗೆ ಕೇವಲ ನೀರು ನೀಡುವ ಜವಾಬ್ದಾರಿ, ಕರ್ತವ್ಯವನ್ನು ನಿಭಾಯಿಸುವಂತೆ ಸವಾಲು ಹಾಕಿದರು.

ತಾಲೂಕು ರೈತ ಸಂಘದ ಗೌರವಾಧ್ಯಕ್ಷ ಈರಣ್ಣ ಪ್ಯಾಟಿ ಮಾತನಾಡಿ, ಭೀಕರ ಬರಗಾಲದಿಂದ ತತ್ತರಿಸಿರುವ ತಾಲೂಕಿನ ತಾಳಗುಂದ ಉಡುಗಣಿ ಹೋಬಳಿ ರೈತರು ಸಮಸ್ಯೆಯ ಪರಿಹಾರಕ್ಕೆ ಶಾಶ್ವತ ನೀರಾವರಿಗಾಗಿ ಸಚಿವ,ಸಂಸದ, ಶಾಸಕರ ಸಹಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ರೈತರ ಕಣ್ಣೀರು ಒರೆಸುವ ನಿರೀಕ್ಷೆ ಹುಸಿಯಾಗಿ ಪರಿಹಾರ ಮಾತ್ರ ಶೂನ್ಯ ಎಂದು ಕಿಡಿಕಾರಿದರು.

ರಾಜ್ಯ ಘಟಕದ ಮಹಿಳಾ ಸಂಚಾಲಕಿ ಪ್ರೇಮಾ ಮಾತನಾಡಿ, ಹಸಿರು ಶಾಲು ಶಕ್ತಿಯ ಸಂಕೇತವಾಗಿದ್ದು ರೈತ ಆಹಾರ ಬೆಳೆಯಲು ನೀರನ್ನು ಕೇಳುತ್ತಿದ್ದು ರಸ್ತೆ ಚರಂಡಿ ಮತ್ತಿತರ ಕಾಮಗಾರಿಗೆ ಪದೇಪದೇ ಕೋಟ್ಯಾಂತರ ಅನುದಾನ ನೀಡುವ ಸರ್ಕಾರ ನೀರಾವರಿ ಯೋಜನೆಯನ್ನು ನಿರ್ಲಕ್ಷಿಸಿ ರೈತರನ್ನು ಶೋಷಿಸುತ್ತಿದೆ ಎಂದ ಅವರು ರೈತ ವರ್ಗ ತಿರುಗಿಬಿದ್ದರೆ ಎಲ್ಲ ಪರಿಸ್ಥಿತಿಯನ್ನು ಎದುರಿಸಲು ಸಿದ್ಧ ಎಂದು ಎಚ್ಚರಿಸಿದರು.
  
ಬಳಿಕ ಬೇಡಿಕೆ ಈಡೇರಿಕೆಗಾಗಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಶಾಶ್ವತ ನೀರಾವರಿ ಯೋಜನೆಗೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಕ್ಕೂ ಮುನ್ನಾ ತಾಲೂಕಿನ ಬಂದಳಿಕೆ ಶ್ರೀ ಬನಶಂಕರಿ ದೇವಸ್ಥಾನದಿಂದ ಶಿರಾಳಕೊಪ್ಪ ಮೂಲಕ ಬೃಹತ್ ಬೈಕ್ ರ್ಯಾಲಿಯಲ್ಲಿ ಸರ್ಕಾರದ ವಿರುದ್ದ ಘೋಷಣೆ ಹಾಕಿ ರೈತ ವರ್ಗ ತಾಲೂಕು ಕಚೇರಿ ಮುಂಭಾಗದಲ್ಲಿ ಜಮಾವಣೆಗೊಂಡರು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಜಯಪ್ಪ, ಸಂಘಟನಾ ಕಾರ್ಯದರ್ಶಿ ಶಿವಯೋಗಿ, ತಾ.ಘಟಕದ ಉಪಾಧ್ಯಕ್ಷ ಪುಟ್ಟನಗೌಡ,ರಾಜು,ಕೊಟ್ರೇಶ್,ಎನ್ ಅರುಣ ಮತ್ತಿತರರು ಹಾಜರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News