ಪತ್ರಕರ್ತನಿಗೆ ಸಂಕಷ್ಟ ಎದುರಾದರೆ ಜನಸಾಮಾನ್ಯರ ಪಾಡೇನು: ಡಿ.ಎಲ್.ಶಂಕರಲಿಂಗೇಗೌಡ
ಮಂಡ್ಯ, ಸೆ.11: ವಾರ್ತಾಭಾರತಿ ದಿನಪತ್ರಿಕೆ ಕನ್ನಡದ ಮುದ್ರಣ ಮಾಧ್ಯಮದಲ್ಲಿ ತನ್ನದೇ ಆದ ಪ್ರಗತಿಪರ ಚಿಂತನೆಗಳು ಹಾಗೂ ಆಶಯಗಳನ್ನು ಹೊತ್ತು ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ಇಂತಹ ಪತ್ರಿಕೆಯ ಬಂಟ್ವಾಳ ವರದಿಗಾರರನ್ನು ಏಕಾಏಕಿ ತಿಳಿವಳಿಕೆ ನೊಟೀಸ್ ಸಹ ನೀಡದೆ ಬಂಧಿಸಿ ಬಂಧನದಲ್ಲಿಟ್ಟಿರುವ ನಮ್ಮ ವ್ಯವಸ್ಥೆ ಎತ್ತ ಸಾಗುತ್ತಿದೆ ಎಂದು ಗ್ರಾ.ಪಂ ಮಾಜಿ ಸದಸ್ಯ ಡಿ.ಎಲ್.ಶಂಕರಲಿಂಗೇಗೌಡ ಪ್ರಕಟನೆಯಲ್ಲಿ ಪ್ರಶ್ನಿಸಿದ್ದಾರೆ.
ಶರತ್ ಮಡಿವಾಳ ಹತ್ಯೆಯ ಸಂಬಂಧ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳುವಾಗ ನಡೆದುಕೊಂಡ ರೀತಿಯ ಬಗ್ಗೆ ವರದಿಗಾರರು ಸ್ಪಷ್ಟವಾಗಿ ವರದಿ ಮಾಡಿದ್ದು, ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದೇ ಪತ್ರಿಕೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸ್ಪಷ್ಟನೆಯೂ ಪ್ರಕಟವಾಗಿದೆ. ಆದಾಗ್ಯೂ ವರದಿಗಾರನನ್ನು ಏಕಾಏಕಿ ಬಂಧಿಸಿದ್ದು ದುರಂತವೇ ಸರಿ. ಒಬ್ಬ ಜವಾಬ್ಧಾರಿ ಸ್ಥಾನದಲ್ಲಿರುವ ಪತ್ರಕರ್ತನ ಕತೆಯೇ ಇಷ್ಟಾದರೆ ಜನಸಾಮಾನ್ಯರ ಪಾಡೇನು ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
----