ಆತ್ಮಹತ್ಯೆಗೆ ವಿಭಕ್ತ ಕುಟುಂಬವೂ ಕಾರಣ: ಬಿ.ಶರತ್
ಮಂಡ್ಯ, ಸೆ.11: ಅವಿಭಕ್ತ ಕುಟುಂಬಗಳಲ್ಲಿ ಆತ್ಮಹತ್ಯೆ ಕಡಿಮೆ ಇತ್ತು. ಆದರೆ, ಇಂದು ವಿಭಕ್ತ ಕುಟುಂಬಳಿಂದಾಗಿ ಆತ್ಮಹತ್ಯೆ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಬಿ.ಶರತ್ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಸಂಘ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಸೋಮವಾರ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನಡೆದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅವಿಭಕ್ತ ಕುಟುಂಬಗಳಲ್ಲಿ ಸಮಸ್ಯೆ ಎದುರಾದಾಗ ಯಾವುದೇ ಒಬ್ಬ ವ್ಯಕ್ತಿಗೆ ತೊಂದರೆಯಾಗುತ್ತಿರಲಿಲ್ಲ. ಅದು ಇಡೀ ಕುಟುಂಬದ ಸಮಸ್ಯೆಯಾಗಿರುತಿತ್ತು. ಇದರಿಂದ ವೈಯಕ್ತಿಕ ಆತ್ಮಹತ್ಯೆ ನಡೆಯುತ್ತಿರಲಿಲ್ಲ ಎಂದು ಅವರು ವಿವರಿಸಿದರು.
ವೇಗದ ಬದುಕಿಗೆ ಬ್ರೇಕ್ ಹಾಕಬೇಕಾಗಿದೆ. ಅವಿಭಕ್ತ ಕುಟುಂಬ ವ್ಯವಸ್ಥೆ ಪುನರ್‍ರೂಪುಗೊಳ್ಳಬೇಕಾಗಿದೆ. ಒತ್ತಡ, ಸಮಸ್ಯೆಗೆ ಸಿಲುಕಿದ ವ್ಯಕ್ತಿಗೆ ಆತ್ಮಸ್ಥೈರ್ಯ ತುಂಬುವ ಮೂಲಕ ಆತ್ಮಹತ್ಯೆ ತಡೆಯಬೇಕಾಗಿದೆ ಎಂದು ಅವರು ಸಲಹೆ ಮಾಡಿದರು.
ಹತಾಶೆ ಇರುವಂತಹ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಸಾಂತ್ವನ ಹೇಳುವ ಕಾರ್ಯವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತರು ಮಾಡಬೇಕು. ತಕ್ಷಣ ಮನೋವೈದ್ಯರ ಬಳಿಗೆ ಕರೆತಂದು ಖಿನ್ನತೆಗೆ ಚಿಕಿತ್ಸೆ ಕೊಡಿಸಬೇಕು ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಮನ್ಸೂರ್ ಅಹಮದ್ ಜಮಾನ್, ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಕೆ.ಪಿ. ಅಶ್ವತ್ಥ್, ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ. ಎಂ.ನಾಗರಾಜು, ಡಾ.ಎಚ್.ವಿ.ಶಶಾಂಕ್, ಬಿ. ಶಿವಾನಂದ, ಡಾ. ಭವಾನಿ ಶಂಕರ್, ಡಾ.ಶಶಿಧರ್ ಬಸವರಾಜ್ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ನಡೆದ ಜಾಗೃತಿ ಜಾಥಾದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.