×
Ad

ಸರ್ಕಾರದ ಯೋಜನೆಗಳನ್ನು ಪ್ರತಿಶತ ನೂರರಷ್ಟು ಅನುಷ್ಠಾನಗೊಳಿಸಿ: ಚೈತ್ರ ಶ್ರೀ

Update: 2017-09-11 22:27 IST

ಚಿಕ್ಕಮಗಳೂರು, ಸೆ.11:  ಸರ್ಕಾರದ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಪ್ರತಿಶತ ನೂರರಷ್ಟು ಅನುಷ್ಟಾನಗೊಳಿಸಬೇಕೆಂದು ಅಧಿಕಾರಿಗಳಿಗೆ ಜಿಪಂ ಅಧ್ಯಕ್ಷೆ ಬಿ.ಎಸ್.ಚೈತ್ರಶ್ರೀ ಮಾಲತೇಶ್ ಸೂಚನೆ ನೀಡಿದರು.

ಅವರು ಸೋಮವಾರ ನಗರದ ಜಿಲ್ಲಾ ಪಂಚಾಯತ್‍ನ ಅಬ್ದುಲ್ಲ ನಜೀರ್‍ಸಾಬ್ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ಕೆ.ಆರ್.ಐ.ಡಿ ಸೇರಿದಂತೆ ಇತರೆ ಅಭಿಯಂತರರ ಕಛೇರಿಗಳ ವತಿಯಿಂದ ಕೈಗೊಂಡಿರುವ ಕಟ್ಟಡ ಕಾಮಗಾರಿ ಸೇರಿದಂತೆ ಮತ್ತಿತರ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿರುವುದಿಲ್ಲ ಅವುಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತರೀಕೆರೆ ಭಾಗದಲ್ಲಿ ಕೈಗೊಂಡಿರುವ ಕುಡಿಯುವ ನೀರಿನ ಯೋಜನೆಗಳನ್ನು ಆದಷ್ಟು ಶೀಘ್ರದಲ್ಲಿ ಆದ್ಯತೆ ಮೇಲೆ ಕೈಗೊಳ್ಳಬೇಕು ಮುಂದಿನ ದಿನಗಳಲ್ಲಿ ಸ್ಥಳ ಭೇಟಿ ಮಾಡಿ ಪರಿಶೀಲನೆ ಮಾಡಲಾಗುವುದು. ಕುಡಿಯುವ ನೀರಿನ ಕಾಮಗಾರಿಗಳಿಗೆ ವಿದ್ಯುತ್‍ಶಕ್ತಿ ಕಲ್ಪಿಸುವ ಕಾರ್ಯಗಳು ಒಂದು ತಿಂಗಳೊಳಗಾಗಬೇಕು ಮೂಡಿಗೆರೆ ಭಾಗದಲ್ಲಿ ಜಂಗಲ್ ಕ್ಲೀಯರೆನ್ಸ್ ವ್ಯವಸ್ಥಿತವಾಗಿ ಕೈಗೊಳ್ಳಬೇಕು. ಅಂಗನವಾಡಿ ಕಟ್ಟಡಗಳ ದುರಸ್ತಿ ಕಾರ್ಯಗಳನ್ನು ಆದ್ಯತೆ ಮೇಲೆ ಕೈಗೊಳ್ಳಬೇಕು. ಹೊಸ ಕಟ್ಟಡಗಳ ನಿರ್ಮಾಣ ತ್ವರಿತಗತಿಯಲ್ಲಿ ಕೈಗೊಳ್ಳಬೇಕು ಎಂದರು.

ಜಿಪಂ ಸಿಇಒ ಜಿ.ಸತ್ಯವತಿ ಮಾತನಾಡಿ, ಮುಂಬರುವ ಅ.2 ರೊಳಗಾಗಿ ಜಿಲ್ಲೆಯನ್ನು ಬಯಲು ಶೌಚಾಲಯ ಮುಕ್ತವನ್ನಾಗಿಸಬೇಕು. ಈ ಹಿನ್ನಲೆಯಲ್ಲಿ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ ಅವರು, ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತಿದ್ದು ಇಗಾಗಲೇ ಮುಂಗಾರು ಬಿತ್ತನೆ ಸಮಯ ಮುಗಿದಿದೆ. ಇಂಗಾರು ಬಿತ್ತನೆಗೆ ರೈತರಿಗೆ ಅವಶ್ಯವಿರುವ ಬಿತ್ತನೆ ಬೀಜಗಳ ದಾಸ್ತಾನು ಇಟ್ಟುಕೊಂಡು ಸಮರ್ಪಕವಾಗಿ ವಿತರಣೆಗೆ ಸಿದ್ಧತೆಯೊಂದಿರಬೇಕು. ಬೆಳೆ ವಿಮೆ ಪರಿಹಾರ ಹಣವು ಎಲ್ಲಾ ರೈತರಿಗೂ ನೀಡಿರುವುದಿಲ್ಲ ಇದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದರು.

ಜಿಪಂ ಉಪಾಧ್ಯಕ್ಷ ರಾಮಸ್ವಾಮಿ ಶೆಟ್ಟ್ಟಿಗದ್ದೆ ಮಾತನಾಡಿ, ಜಿಲ್ಲ್ಲೆಯ ಇಪ್ಪತ್ತೆರಡು  ಆಂಗ್ಲ ಮಾಧ್ಯಮ ಶಾಲೆಗಳಿಗೆ ನವೀಕರಣವನ್ನು ಈ ಹಿಂದಿನ ಅಧಿಕಾರಿಗಳು ನಿಯಮಾನುಸಾರವಾಗಿ ಮಾಡಿರುವುದಿಲ್ಲ ಈ ಬಗ್ಗೆ ಅಗತ್ಯ ಕ್ರಮವಹಿಸಬೇಕು ಎಂದರು.

ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರ ಬೆಳವಾಡಿ ಮಾತನಾಡಿ, ಉಜ್ವಲ ಯೋಜನೆಯಡಿಯಲ್ಲಿ ಪಲಾನುಭವಿಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸುವಾಗ ಹಣವನ್ನು ಕೇಳುತ್ತಿದ್ದಾರೆ ಎಂಬ ದೂರುಗಳು ಬರುತ್ತಿವೆ ಹೀಗಾಗದಂತೆ ಎಚ್ಚರವಹಿಸಬೇಕು ಎಂದು ನುಡಿದರು.


ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಬಣಕಲ್ ಶಾಮಣ್ಣ ಮಾತನಾಡಿ, ಜಿಲ್ಲೆಗೆ ಹೊರರಾಜ್ಯಗಳಾದ ಅಸ್ಸಾಂನಿಂದ ಕಾಫಿ ತೋಟಗಳ ಕೆಲಸಕ್ಕೆ ಬರುತ್ತದ್ದಾರೆ ಇವರುಗಳ ಬಗ್ಗ ಮಾಹಿತಿಯನ್ನು ಕಾರ್ಮಿಕ ಇಲಾಖೆ ಕ್ರೋಡಿಕರಿಸಬೇಕು ಎಂದು ತಿಳಿಸಿದರು.

ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಲಿಂಗರಾಜ್ ಮಾತನಾಡಿ ಬಿದರೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಪಿ.ಎಂ.ವೈ.ಜಿ.ಸಿ ವತಿಯಿಂದ ಕೈಗೊಂಡಿರುವ ರಸ್ತೆ ಕಾಮಗಾರಿ ಒಂದು ತಿಂಗಳ ಒಳಗಾಗಿ ಹಾಳಾಗಿದೆ. ಈ ಬಗ್ಗೆ ಗಮನ ಹರಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.


ಸಭೆಯಲ್ಲಿ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News