×
Ad

ಅರಣ್ಯ ರಕ್ಷಣೆ ಸವಾಲಿನ ಸೇವೆ: ಕೆ.ಸಿ.ಕಾರ್ಯಪ್ಪ

Update: 2017-09-11 22:44 IST

ಮಡಿಕೇರಿ, ಸೆ.11: ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವುದು ಹೆಚ್ಚಿನ ಹೊಣೆಗಾರಿಕೆ ಜೊತೆಗೆ ಕಠಿಣ ಸವಾಲಾಗಿದೆ ಎಂದು ಏರ್ ಮಾರ್ಷಲ್ (ನಿವೃತ್ತ) ಕೆ.ಸಿ.ಕಾರ್ಯಪ್ಪ ಅವರು ಅಭಿಪ್ರಾಯಪಟ್ಟಿದ್ದಾರೆ.   

ನಗರದ ಅರಣ್ಯ ಭವನದಲ್ಲಿ ಅರಣ್ಯ ಇಲಾಖೆ ವತಿಯಿಂದ ಸೋಮವಾರ ನಡೆದ ‘ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ’ ಕಾರ್ಯಕ್ರಮದಲ್ಲಿ ಅರಣ್ಯ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.  

ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಾರ್ವಜನಿಕರ ಜೊತೆ ಉತ್ತಮ ಒಡನಾಟ ಹೊಂದಿ ಅರಣ್ಯ ರಕ್ಷಣೆ ಮಾಡುವತ್ತ ವಿಶೇಷ ಗಮನಹರಿಸಬೇಕು. ಆ ನಿಟ್ಟಿನಲ್ಲಿ ಅರಣ್ಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ಸರ್ಕಾರದಿಂದ ಪ್ರಶಸ್ತಿ ನೀಡುವಂತಾಗಬೇಕು. ಈ ಸಂಬಂಧ ಮುಖ್ಯಮಂತ್ರಿಯವರ ಗಮನ ಸೆಳೆಯಲಾಗುವುದು ಎಂದು ಹೇಳಿದರು. 

ದೇಶದ ರಕ್ಷಣೆ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಸೈನಿಕರು, ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಸಮವಸ್ತ್ರ ಧರಿಸಿ ಕಾರ್ಯ ನಿರ್ವಹಿಸುತ್ತಾರೆ. ಈ ಮೂರು ಕ್ಷೇತ್ರದಲ್ಲಿಯೂ ಸಮಾಜದ ರಕ್ಷಣೆ, ಹೊಣೆಗಾರಿಕೆ ಮಹತ್ತರವಾಗಿದೆ ಎಂದು ಕೆ.ಸಿ.ಕಾರ್ಯಪ್ಪ ಅವರು ನುಡಿದರು. 

ಕಾರ್ಯಕ್ರಮಕ್ಕೂ ಮೊದಲು ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್.ಲಿಂಗರಾಜ, ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪುರುಷೋತ್ತಮ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಂ.ಎಂ.ಜಯ, ಎ.ವಿ.ಸೂರ್ಯಸೇನ್, ಡಿ.ಮರಿಯಾ ಕ್ರಿಸ್ತರಾಜ ಇತರರು ಅರಣ್ಯ ಹುತಾತ್ಮರಿಗೆ ಹೂಗುಚ್ಛ ಸಮರ್ಪಣೆ ಮಾಡಿದರು.   

ಅರಣ್ಯ ಹುತಾತ್ಮರ ದಿನಾಚರಣೆಯ ಪಕ್ಷಿನೋಟ ಮತ್ತು ಅರಣ್ಯ ಹುತಾತ್ಮರ ಹೆಸರುಗಳನ್ನು 1966 ರಿಂದ 2017ರವರೆಗೆ ರಾಜ್ಯದ ನಾನಾ ಭಾಗಗಳಲ್ಲಿ ಅರಣ್ಯ ರಕ್ಷಣೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಸುಮಾರು 41 ಮಂದಿ ಹುತಾತ್ಮರಾದ ಹೆಸರನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ.ಜಯ ಅವರು ಓದಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News