×
Ad

ವಿಶೇಷ- ಚೇತನ ಮಕ್ಕಳಿಗೆ ಶಿಕ್ಷಣ ಬೋಧಿಸುವುದು ಬಹು ಕಠಿಣ: ಪಿ.ರಾಜೇಂದ್ರ ಪ್ರಸಾದ್

Update: 2017-09-11 22:56 IST

ಸುಂಟಿಕೊಪ್ಪ, ಸೆ.11; ಸಾಮಾನ್ಯ ಮತ್ತು ವಿಶೇಷ- ಚೇತನ ಮಕ್ಕಳಿಗೆ  ಶಿಕ್ಷಣ ಕೊಡುವುದು ಬಹಳಷ್ಟು ವ್ಯತ್ಯಾಸವಿದೆ. ಸಾಮಾನ್ಯ ಮಕ್ಕಳಿಗೆ  ಬೋಧಿಸುವ ಶಿಕ್ಷಣಕ್ಕಿಂತ ವಿಶೇಷ-ಚೇತನ ಮಕ್ಕಳಿಗೆ ಶಿಕ್ಷಣ ಬೋಧಿಸುವುದು ಬಹು ಕಠಿಣ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಹೇಳಿದರು.

ಸುಂಟಿಕೊಪ್ಪ 'ಸ್ವಸ್ಥ'ವಿಶೇಷ  ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದ ವತಿಯಿಂದ ಭಾನುವಾರ ನಡೆದ ವಿಶೇಷ-ಚೇತನ ಮಕ್ಕಳು ಮತ್ತು ಭಾರತೀಯ ವಿದ್ಯಾಭವನದ ಕಲಾಭಾರತಿಯಲ್ಲಿ ಕಲೆಯನ್ನು ಅಭ್ಯಾಸ ಮಾಡುತ್ತಿರುವ ಸಾಮಾನ್ಯ ಮಕ್ಕಳ ನಡುವೆ ಸೃಜನಾತ್ಮಕವಾದ ಪತ್ರಿಭೆಯನ್ನು ಹೊರಹಾಕುವ "ಎಸಳುಗಳು" ಎಂಬ ಕಲಾ ಸ್ಪಂದನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಎಲ್ಲರಲ್ಲೂ ಪ್ರತಿಭೆ ಅಡಗಿದೆ. ಅದರಲ್ಲಿ ವಿಕಲಚೇತನರು ಮತ್ತು ಸಾಮಾನ್ಯ ಕಲೆಗಾರರು ಎಂಬ ಬೇಧ ಮಾಡದೇ ಕಲೆಯನ್ನು ಗುರುತಿಸುವಂತಹ ಕೆಲಸವನ್ನು ಸಂಘ ಸಂಸ್ಥೆಗಳು, ಸಮಾಜ ಮಾಡಬೇಕಾಗಿದೆ. ಕಲೆ ಅನ್ನುವಂತದ್ದು ಎಲ್ಲರಲ್ಲೂ ಅಡಗಿರುವಂತದ್ದು ಅದು ಕಿರಿಯರು, ಹಿರಿಯರು ಅನ್ನುವ ತಾತ್ಸಾರವಿರದೇ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕಾಗಿದೆ ಎಂದು ಅವರು ಹೇಳಿದರು.

ಕೊಡಗಿನ ಹಿರಿಯ ಕಲಾವಿದ ಪ್ರಸನ್ನ ಕುಮಾರ್ ಮಾತನಾಡಿ, ಮಕ್ಕಳಿಗೆ ವಸ್ತುಗಳನ್ನು ತೋರಿಸಿ ಆ ಮೂಲಕ ಚಿತ್ರಕಲೆಯನ್ನು ಬಿಡಿಸಲು ಉತ್ತೇಜಿಸಬೇಕು. ಕಲೆ ಎನ್ನುವುದು ಎಲ್ಲರಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಅಡಗಿದೆ. ಅವುಗಳನ್ನು ಗುರುತಿಸುವುದು ಶಾಲಾ ಶಿಕ್ಷಕರ, ಪೋಷಕರ ಜವಾಬ್ಧಾರಿಯಾಗಿದೆ ಎಂದರು.

ಬೆಂಗಳೂರು ಕೃಷಿ ವಿದ್ಯಾಲಯದ ನಿವೃತ್ತ ಉಪಕುಲಪತಿಗಳು, ಟಾಟಾ ಕಂಪನಿಯ ಪಕ್ಷೇತರ ನಿರ್ದೇಶಕ, ಸ್ವಸ್ಥ ಸಂಸ್ಥೆಯ ಬಟರ್ ಪ್ಲೈ ಯೋಜನೆಯ ರೂವಾರಿ ಪಿ.ಜಿ.ಚಂಗಪ್ಪ ಮಾತನಾಡಿ, ಕೇವಲ ಸಂಘ ಸಂಸ್ಥೆಗಳು ಮಾತ್ರ ಮಕ್ಕಳ ಕಲೆಯನ್ನು ಗುರುತಿಸುವುದು ಸರಿಯಲ್ಲ. ಇದಕ್ಕೆ ಪೋಷಕರು, ಸಾರ್ವಜನಿಕರ ಸಹಕಾರ, ಪ್ರೋತ್ಸಾಹ ಬೇಕಾಗಿದೆ. ಅಂತಹ ನಿಲುವುಗಳನ್ನು ಪ್ರತಿಯೊಬ್ಬ ವ್ಯಕ್ತಿಯು ಬೆಳೆಸಿಕೊಂಡರೆ ಮಕ್ಕಳ ಪ್ರತಿಭೆಯನ್ನು ಹೊರಹಾಕಲು ಸಾದ್ಯವಿದೆ. ಈ ನಿಟ್ಟಿನಲ್ಲಿ ಟಾಟಾ ಸಂಸ್ಥೆ ಸಂಪೂರ್ಣವಾದ ಸಹಕಾರವನ್ನು ನೀಡಲಿದೆ ಎಂದರು.

ಸ್ವಸ್ಥ ಸಂಸ್ಥೆಯ ಉಪನಿರ್ದೇಶಕಿ ಆರತಿ ಸೋಮಯ್ಯ ಮಾತನಾಡಿ, ಸಾಮಾನ್ಯ ಮತ್ತು ವಿಶೇಷ-ಚೇತನ ಮಕ್ಕಳ ಜ್ಞಾನವನ್ನು ವೃದ್ಧಿಸುವ ನಿಟ್ಟಿನಲ್ಲಿ ಅವರೊಳಗಿನ ಕಲೆಯ ಹೋಲಿಕೆಯನ್ನು ಕಂಡುಕೊಳ್ಳಲು ಈ ಕಲಾಸ್ಪಂದನ ಕಾರ್ಯಕ್ರಮವನ್ನು ಆಯೋಜಿಸಿದ್ದು ಇದು ಯಶಸ್ವಿಯಾಗಿದ್ದು ಸಂತಸ ತಂದಿದೆ ಎಂದರು.

ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಗಂಗಾಚಂಗಪ್ಪ, ಸ್ವಸ್ಥ ಸಂಸ್ಥೆಯ ಕಲಾ ಸಂಘಟಕ ರಾಮ್ ಗೌತಮ್, ಮಡಿಕೇರಿಯ ಭಾರತೀಯ ವಿದ್ಯಾಭವನ,ಕೊಡಗು ವಿದ್ಯಾಲಯದ ಪ್ರಾಚಾರ್ಯ ಶ್ರೀನಿವಾಸನ್, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಜಯರಾಮ್, ಮಡಿಕೇರಿ ಸೌರಭ ಕಲಾಪರಿಷತ್ತಿನ ಸಂಸ್ಥಾಪಕಿ ಶಾರದಾ ರಾಮನ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News