ಚಿಗುರನ್ನು ಚಿವುಟುವ ಶಾಲೆಗಳು

Update: 2017-09-12 03:43 GMT

ಅತ್ಯಂತ ಆಘಾತಕಾರಿಯಾದ ವರದಿಗಳು ದೇಶದ ರಾಜಧಾನಿಯಿಂದ ಹೊರ ಬೀಳುತ್ತಿವೆ. ಆದರೆ ಇತರ ಅಪರಾಧಗಳಂತೆ ಈ ವರದಿಗಳು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುತ್ತಿಲ್ಲ. ಗುರ್ಗಾಂವ್‌ನ ರ್ಯಾನ್ ಇಂಟರ್‌ನ್ಯಾಶನಲ್ ಸ್ಕೂಲ್‌ವೊಂದರಲ್ಲಿ ಬರ್ಬರ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದ ಆರು ವರ್ಷದ ಮಗುವೊಂದರ ಹೆಣ ಶಾಲೆಯ ಶೌಚಾಲಯದಲ್ಲಿ ಬಿದ್ದಿತ್ತು. ಮಗುವಿನ ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಇದೀಗ ಶಾಲಾ ಬಸ್‌ನ ನಿರ್ವಾಹಕನೇ ಕೊಲೆಗಾರ ಎನ್ನುವುದು ಬೆಳಕಿಗೆ ಬಂದಿದೆ. ಎರಡನೆ ತರಗತಿಯಲ್ಲಿ ಕಲಿಯುತ್ತಿದ್ದ ಮಗುವಿನ ಈ ಬರ್ಬರ ಕೊಲೆಯ ನಿಜವಾದ ಹೊಣೆಗಾರರು ಯಾರು ಎನ್ನುವುದರ ಕುರಿತಂತೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.

ಬರೇ ಬಸ್ ಕಂಡಕ್ಟರ್‌ನ್ನೇ ಹೊಣೆ ಮಾಡಿ ಪ್ರಕರಣವನ್ನು ಮುಗಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಘಟನೆ ಹೊರಬಿದ್ದ ಎರಡೇ ದಿನದಲ್ಲಿ ಶಾಲೆಯೊಂದರಲ್ಲಿ ಐದು ವರ್ಷದ ಬಾಲಕಿಯನ್ನು 40 ವರ್ಷ ಪ್ರಾಯದ ಜವಾನ ಅತ್ಯಾಚಾರಗೈದ. ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಜವಾನನನ್ನು ಬಂಧಿಸಲಾಗಿದೆ. ಇಲ್ಲಿಗೆ ಪ್ರಕರಣವೇನೋ ಮುಗಿದು ಹೋಯಿತು. ಆದರೆ ಈ ಗಾಯವನ್ನು ಹೊತ್ತುಕೊಂಡು ಆ ಎಳೆ ಮಗು ತನ್ನ ಉಳಿದ ಬದುಕನ್ನು ಸುದೀರ್ಘವಾಗಿ ಸವೆಸಬೇಕಾಗಿದೆ. ಈ ಬರ್ಬರ ಘಟನೆ ಆ ಮಗುವಿನ ಮನಸ್ಸಿನ ಮೇಲೆ ಬೀರುವ ಪರಿಣಾಮ ಅದೆಷ್ಟು ಘೋರವಾಗಿರಬಹುದು? ಯಾವ ಶಾಲೆಯಲ್ಲಿ ಒಂದು ಮಗು ತನ್ನ ಸುಂದರ ಭವಿಷ್ಯವನ್ನು ರೂಪಿಸಬೇಕಾಗಿತ್ತೋ ಅದೇ ಶಾಲೆ ಒಂದು ಮಗುವಿನ ಭವಿಷ್ಯವನ್ನೇ ಹೊಸಕಿ ಹಾಕಿತು.

ಇಂದು ಮಕ್ಕಳು ಅಂಬೆಗಾಲಿಕ್ಕಿ ನಡೆಯುವಷ್ಟರಲ್ಲಿ ಅವುಗಳನ್ನು ಶಾಲೆಗಳಿಗೆ ಸೇರಿಸಲು ಪಾಲಕರು ತಹತಹಿಸುತ್ತಾರೆ. ಮನೆಯೇ ಮೊದಲ ಪಾಠ ಶಾಲೆ ಎನ್ನುವ ಮಾತಿದೆ. ತನ್ನ ತಾಯಿ, ತಂದೆಯ ಬೆಚ್ಚಗಿನ ಪ್ರೀತಿಯಿಂದ ಒಂದು ಮಗು ಕಲಿಯುವಂತಹದ್ದನ್ನು, ನಾಲ್ಕು ಗೋಡೆಗಳ ಶಿಸ್ತಿನ ನಡುವೆ ಕಲಿಯಲು ಸಾಧ್ಯವಿಲ್ಲ. ಪಾಲಕರ ನಡುವಿನ ಸಂಬಂಧಗಳ ಬಳ್ಳಿಗಳು ಬಳಿಯುತ್ತಿರುವ ಹೊತ್ತಿನಲ್ಲಿ ಅದನ್ನು ಕತ್ತರಿಸಿ ಮಕ್ಕಳನ್ನು ಎಲ್‌ಕೆಜಿ, ನರ್ಸರಿಗೆ ಸೇರಿಸಲಾಗುತ್ತದೆ. ತಮ್ಮ ಮಕ್ಕಳು ಅತೀ ಬುದ್ಧಿವಂತರಾಗಬೇಕು, ಅಂಕಗಳನ್ನು ಗೋರಿ ಡಾಕ್ಟರ್, ಇಂಜಿಯರ್‌ಗಳಾಗಬೇಕು ಎನ್ನುವ ಪಾಲಕರ ಅತಿ ದುರಾಸೆಗೆ ಈ ಮಕ್ಕಳು ಬಲಿಯಾಗುತ್ತವೆ. ದುಬಾರಿ ಶುಲ್ಕಗಳನ್ನು ಕೊಟ್ಟು ಅತ್ಯುತ್ತಮ ಶಾಲೆಗಳಿಗೆ ಸೇರಿಸಿದ್ದೇವೆ ಎಂದು ಪಾಲಕರು ಹೆಮ್ಮೆ ಪಟ್ಟುಕೊಳ್ಳುತ್ತಾರೆ. ಪ್ರತೀ ರಾತ್ರಿ ಮಕ್ಕಳ ಪಠ್ಯ ಪುಸ್ತಗಳ ಕಡೆಗೆ ಗಮನ ಕೊಡುತ್ತಾರೆ. ಹೋಮ್‌ವರ್ಕ್‌ಗಳ ಬಗ್ಗೆ ವಿಚಾರಿಸುತ್ತಾರೆ.

ಮಗುವಿನ ಚೀಲದೊಳಗಿರುವ ಪುಸ್ತಕದ ಕಡೆಗೆ ನೀಡುವ ಗಮನವನ್ನು, ಮಕ್ಕಳ ಮನದೊಳಗಿರುವ ಅಳಲುಗಳಿಗೆ ನೀಡುವುದಿಲ್ಲ. ಕಾನ್ವೆಂಟ್‌ಗಳಿಗೆ ಬಸ್‌ನಲ್ಲಿ ಕಳುಹಿಸಲಾಗುತ್ತದೆ. ಅಲ್ಲಿಂದ ಮಕ್ಕಳು ಶಾಲೆಯೊಳಗೆ ತೆರಳುತ್ತಾರೆ. ಶಿಕ್ಷಕರು ಅವರನ್ನು ತಿದ್ದಿ ಬೆಳೆಸುತ್ತಾರೆ ಎನ್ನುವುದು ಪಾಲಕರ ನಂಬಿಕೆ. ಆದರೆ ಆ ನಂಬಿಕೆಯನ್ನು ಹುಸಿ ಮಾಡುವ ಘಟನೆಗಳು ನಡೆಯುತ್ತಲೇ ಇವೆಯಾದರೂ, ಪಾಲಕರು ಈ ಬಗ್ಗೆ ಎಚ್ಚರ ವಹಿಸಿದಂತೆ ಕಾಣುತ್ತಿಲ್ಲ. ತಮ್ಮ ಮಕ್ಕಳ ಮೇಲೆ ದೌರ್ಜನ್ಯಗಳು ನಡೆದ ಬಳಿಕವಷ್ಟೇ ಅವರು ಗದ್ದಲ ಎಬ್ಬಿಸುತ್ತಾರೆ. ಒಂದು ಮಗು ಶಾಲೆಯ ಬಸ್ ಏರಿದಾಕ್ಷಣದಿಂದ ಸವಾಲುಗಳನ್ನು ಎದುರಿಸಲು ಆರಂಭಿಸುತ್ತದೆ. ಹಿರಿಯ ವಿದ್ಯಾರ್ಥಿಗಳಿಂದ ಅದು ತೊಂದರೆಯನ್ನು ಅನುಭವಿಸಬಹುದು. ಅಥವಾ ಬಸ್ ಚಾಲಕ, ನಿರ್ವಾಹಕ ಮಗುವನ್ನು ದುರ್ಬಳಕೆ ಮಾಡುವ ಸಾಧ್ಯತೆಗಳಿರುತ್ತವೆ. ಶಾಲೆಯಲ್ಲಿ ಶಿಕ್ಷಕನೇ ಮಗುವಿನ ಮೇಲೆ ಅದಕ್ಕೆ ತಿಳಿಯದಂತೆ ದೌರ್ಜನ್ಯ ಎಸಗಬಹುದು.

ಇವನ್ನು ಪಾಲಕರಿಗೆ ತಿಳಿಸಲಾಗದೆ ಮಗು ಒಳಗೊಳಗೆ ಕೊರಗುತ್ತಿರಬಹುದು. ಈ ಬಗ್ಗೆ ಮೊದಲು ಎಚ್ಚರವಾಗಬೇಕಾದವರು ಪಾಲಕರು. ಶಾಲೆಯಿಂದ ಬರುವ ಮಗುವಿನ ಚೀಲದೊಳಗಿರುವ ಪುಸ್ತಕಗಳನ್ನು ತೆರೆಯುವ ಮೊದಲು, ಅದರ ಮನಸ್ಸನ್ನು ತೆರೆದು ಓದುವ ಕೆಲಸವನ್ನು ಪಾಲಕರು ಪ್ರತೀ ದಿನ ಮಾಡಬೇಕಾಗಿದೆ. ಬಸ್‌ನಲ್ಲಿ ಏನಾಯಿತು, ಶಾಲೆಯಲ್ಲಿ ಯಾರು ಇಷ್ಟ, ಯಾರನ್ನು ಕಂಡರೆ ಭಯ? ಯಾರು ಹೇಗೆ ವರ್ತಿಸುತ್ತಾರೆ? ಇವನ್ನೆಲ್ಲ ಸೂಕ್ಷ್ಮವಾಗಿ ಅವರಿಂದ ಹೊರಗೆಳೆಯುವುದು ಪಾಲಕರ ಕರ್ತವ್ಯವಾಗಿದೆ. ಒಂದು ವೇಳೆ ಯಾವುದಾದರೂ ಅಸಹಜ ವಿಷಯಗಳನ್ನು ಮಗು ಹೇಳಲು ಪ್ರಯತ್ನಿಸುತ್ತಿದ್ದರೆ ಅವುಗಳಿಗೆ ಕಿವಿಯಾಗಬೇಕೇ ಹೊರತು, ಬಾಯಿ ಮುಚ್ಚಿಸುವ ಪ್ರಯತ್ನವನ್ನು ಮಾಡಬಾರದು.

ನಮ್ಮ ಮನೆಯ ಮಕ್ಕಳನ್ನು ರಕ್ಷಿಸುವ ಮೊದಲ ಹಂತ ಇದು. ಹಾಗೆಯೇ ಆಗಾಗ ಶಾಲೆಗೆ ತೆರಳಿ ವಿವಿಧ ಉಪನ್ಯಾಸಕರ ಜೊತೆಗೆ ಮಾತನಾಡುವುದು, ಶಾಲಾ ವಾಹನಗಳ ಸಿಬ್ಬಂದಿಯ ವಿವರಗಳನ್ನು ಸಂಗ್ರಹಿಸುವುದು ಮಾಡುತ್ತಿರಬೇಕಾಗುತ್ತದೆ. ಅವೆಲ್ಲವೂ ಶಾಲೆಯ ಆಡಳಿತ ಮಂಡಳಿಯ ಕೆಲಸವೆಂದು ಸುಮ್ಮನಿದ್ದರೆ, ನಾವು ಕಳೆದುಕೊಳ್ಳುವುದು ನಮ್ಮ ಮಕ್ಕಳನ್ನು. ಶಾಲೆಯಲ್ಲಿ ಮಕ್ಕಳ ಮೇಲೆ, ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಾಗ, ಅದರ ಹೊಣೆಗಾರಿಕೆಯಿಂದ ಆಡಳಿತ ಮಂಡಳಿ ಜಾರಿಸಿಕೊಳ್ಳುತ್ತದೆ. ಇಂದು ಶಾಲೆಗಳು ಉದ್ಯಮವಾಗುತ್ತಿರುವುದೇ ಇಂತಹ ಬೇಜವಾಬ್ದಾರಿ ನಡವಳಿಕೆಗಳಿಗೆ ಕಾರಣ. ಶಾಲೆಯೆನ್ನುವುದು ಮಕ್ಕಳ ಭವಿಷ್ಯಕ್ಕೆ ನೀರೆರೆದು ಪೋಷಿಸುವ ಸ್ಥಳ. ಆ ಸ್ಥಳ ಮಾಲಿನ್ಯದಿಂದ ಕಲುಷಿತವಾಗದಂತೆ ನೋಡಿಕೊಳ್ಳುವುದು ಸಂಬಂಧಪಟ್ಟವರ ಕರ್ತವ್ಯ. ಪಾಲಕರಿಂದ ಹಣ ದೋಚುವುದರಲ್ಲಿ ಇರುವ ಆಸಕ್ತಿ, ಆ ಮಕ್ಕಳ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವ ಸಂದರ್ಭದಲ್ಲೂ ಇರಬೇಕು.

ಎಳೆಯ ಮಕ್ಕಳು ಈ ದೇಶದ ಅತ್ಯುನ್ನತವಾದ ಅಸ್ತಿ. ಒಮ್ಮೆ ಈ ಮಕ್ಕಳು ಶಾಲೆಯ ಕಾಂಪೌಂಡ್ ಪ್ರವೇಶಿಸಿದ ಬಳಿಕ ಅದರ ಸಂಪೂರ್ಣ ಹೊಣೆಗಾರಿಕೆ ಶಾಲೆಯನ್ನು ನಡೆಸುವ ಆಡಳಿತ ಮಂಡಳಿಯದ್ದಾಗಬೇಕು. ಶಾಲೆಗೆ ಸಂಬಂಧಿಸಿದ ಯಾವುದೇ ಸಿಬ್ಬಂದಿ ಮಕ್ಕಳೊಂದಿಗೆ ಅನುಚಿತವಾಗಿ ನಡೆದುಕೊಂಡರೆ ಮೊತ್ತ ಮೊದಲ ಆರೋಪಿಯಾಗಿ ಶಾಲೆಯನ್ನೇ ಗುರುತಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಸುತ್ತಮುತ್ತಲಿರುವ ಎಲ್ಲ ಶಾಲೆಗಳು ಕಡ್ಡಾಯವಾಗಿ ಸಿಸಿ ಕ್ಯಾಮರಾಗಳನ್ನು ಹೊಂದುವುದು ಅತ್ಯಗತ್ಯವಾಗಿದೆ. ಪ್ರತೀ ತರಗತಿಗಳೂ ಸಿಸಿ ಕ್ಯಾಮರಾವನ್ನು ಹೊಂದಬೇಕು. ಇದು ಆರ್ಥಿಕವಾಗಿ ಹೊರೆಯಾಗುತ್ತದೆ ಎನ್ನುವವರು ತಮ್ಮ ಶಾಲೆಯನ್ನು ಮುಚ್ಚುವುದೇ ವಾಸಿ. ಒಂದು ಮಗುವಿನ ಭವಿಷ್ಯಕ್ಕೆ ಹೋಲಿಸಿದರೆ ಈ ಹೊರೆ ದೊಡ್ಡದಾದುದೇನೂ ಅಲ್ಲ. ಹಾಗೆಯೇ ಎಲ್ಲ ಶಾಲಾ ವಾಹನಗಳೂ ಸಿಸಿ ಕ್ಯಾಮರಾಗಳನ್ನು ಹೊಂದಿರಬೇಕು.

ಸಿಬ್ಬಂದಿಯ ಚಾರಿತ್ರದ ಕುರಿತಂತೆ ಸಂಪೂರ್ಣ ತೃಪ್ತಿ ಹೊಂದಿದ ಬಳಿಕವಷ್ಟೇ ಅವರನ್ನು ನೇಮಿಸಬೇಕು. ಹೀಗೆ ಎಲ್ಲ ಹಂತದಲ್ಲೂ ಶಾಲೆಯ ಭದ್ರತೆ ಸರಿಯಾಗಿದೆ ಎಂದರೆ ಮಾತ್ರ ಅವುಗಳಿಗೆ ಇಲಾಖೆಗಳು ಅನುಮತಿ ನೀಡಬೇಕು. ಇದೇ ಸಂದರ್ಭದಲ್ಲಿ, ತಮ್ಮ ಮಕ್ಕಳನ್ನು ಸೇರಿಸುವ ಶಾಲೆ ಮತ್ತು ಅದರ ಸಿಬ್ಬಂದಿಯ ಕುರಿತಂತೆ ಪಾಲಕರೂ ಜಾಗೃತಿಯನ್ನು ಹೊಂದಿರಬೇಕು. ಇಲ್ಲವಾದರೆ, ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಬಹುದಾದ ಶಾಲೆಗಳೇ ಅವರ ಭವಿಷ್ಯವನ್ನು ಕತ್ತಲೆಗೆ ತಳ್ಳಬಹುದು. ಪಾಲಕರು, ಸಮಾಜ, ಶಾಲೆಯ ಅಡಳಿತ ಮಂಡಳಿ ಮತ್ತು ಸರಕಾರ ಈ ನಿಟ್ಟಿನಲ್ಲಿ ಒಂದಾಗಿ ಕೈ ಜೋಡಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News