ಗ್ರಾಮ ಲೆಕ್ಕಿಗರು, ಸಹಾಯಕರ ಮೇಲೆ ಹಲ್ಲೆ : ನೌಕರರ ಸಂಘದಿಂದ ಪ್ರತಿಭಟನೆ
ಮಡಿಕೇರಿ, ಸೆ.12 :ಇತ್ತೀಚೆಗೆ ನಾಪೋಕ್ಲು ವೃತ್ತದ ಗ್ರಾಮ ಲೆಕ್ಕಿಗರ ಹಾಗೂ ಗ್ರಾಮ ಸಹಾಯಕರ ಮೇಲೆ ನಡೆದಿರುವ ಹಲ್ಲೆ ಪ್ರಕರಣವನ್ನು ಖಂಡಿಸಿ ಕೊಡಗು ಜಿಲ್ಲಾ ಕಂದಾಯ ಇಲಾಖಾ ನೌಕರರ ಸಂಘ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿತು.
ಸರ್ಕಾರಿ ಸೇವೆಯಲ್ಲಿ ತೊಡಗಿರುವ ಸಿಬ್ಬಂದಿಗಳಿಗೆ ಸೂಕ್ತ ಭದ್ರತೆಯನ್ನು ನೀಡಬೇಕೆಂದು ಆಗ್ರಹಿಸಿದ ಪ್ರತಿಭಟನಾಕಾರರು ಹಲ್ಲೆ ನಡೆಸಿದ ಆರೋಪಿಗಳನ್ನು ತಕ್ಷಣ ಬಂಧಿಸದಿದ್ದಲ್ಲಿ ಸೆ.13 ರಿಂದ ಜಿಲ್ಲೆಯ ಎಲ್ಲಾ ಕಂದಾಯ ಇಲಾಖಾ ನೌಕರರು ಅನಿರ್ದಿಷ್ಟಾವಧಿ ಲೇಖನಿ ಸ್ಥಗಿತ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸೆ.8 ರಂದು ಕಸ ವಿಲೇವಾರಿಗಾಗಿ ಜಾಗ ಗುರುತಿಸಲು ಬೇತು ಗ್ರಾಮಕ್ಕೆ ತೆರಳಿದ್ದ ಸಂದರ್ಭ ಗ್ರಾಮ ಲೆಕ್ಕಿಗರಾದ ಅನೂಬ್ ಸಬಾಸ್ಟಿನ್, ಗ್ರಾಮ ಸಹಾಯಕರಾದ ಪಿ.ಎಂ.ಪೂಣಚ್ಚ ಹಾಗೂ ಸೋಮಯ್ಯ ಅವರ ಮೇಲೆ ಕ್ಷುಲ್ಲಕ ಕಾರಣಕ್ಕೆ ಮೂವರು ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ. ಈ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದರು ಕೇವಲ ಗ್ರಾಮ ಸಹಾಯಕರಾದ ಪಿ.ಎಂ.ಪುಣಚ್ಚ ಅವರ ದೂರನ್ನು ಮಾತ್ರ ಪರಿಗಣಿಸಿದ್ದು, ಉಳಿದವರ ದೂರನ್ನು ನಿರ್ಲಕ್ಷಿಸಿದ್ದಾರೆ. ಹಲ್ಲೆಗೊಳಗಾದವರ ವಾಹನವನ್ನು ಠಾಣೆಯಲ್ಲಿ ಇಟ್ಟುಕೊಂಡು ಹಲ್ಲೆ ಮಾಡಿದವರ ವಾಹನವನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಹಲ್ಲೆ ಮಾಡಿದವರನ್ನು ಬಂಧಿಸದೆ ಇರುವುದು ಖಂಡನೀಯವೆಂದರು.
ಸರ್ಕಾರಿ ಸೇವೆಯಲ್ಲಿರುವ ನೌಕರರಿಗೆ ಸೂಕ್ತ ಭದ್ರತೆ ಇಲ್ಲದಾಗಿದ್ದು, ಪೊಲೀಸರು ಕೂಡ ನಮ್ಮ ದೂರನ್ನು ನಿರ್ಲಕ್ಷಿಸುತ್ತಿರುವುದು ಬೇಸರದ ವಿಚಾರವಾಗಿದೆ. ಹಲ್ಲೆ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರಮುಖರು ಒತ್ತಾಯಿಸಿದರು. ಹಲ್ಲೆ ಮಾಡಿದವರನ್ನು ತಕ್ಷಣ ಬಂಧಿಸದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು. ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ಪ್ರತಿಭಟನಾಕಾರರು ಸರ್ಕಾರಿ ಕಾರ್ಯದ ನಿಮಿತ್ತ ವಿವಿಧೆಡೆ ತೆರಳುವ ನೌಕರರಿಗೆ ಆತಂಕವನ್ನು ಸೃಷ್ಟಿಸಲಾಗುತ್ತಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಹಲ್ಲೆಗೊಳಗಾದ ಗ್ರಾಮ ಲೆಕ್ಕಿಗರಾದ ಅನೂಬ್ ಸಬಾಸ್ಟಿನ್, ಗ್ರಾಮ ಸಹಾಯಕರಾದ ಪಿ.ಎಂ.ಪೂಣಚ್ಚ ಹಾಗೂ ಸೋಮಯ್ಯ, ಕಂದಾಯ ಇಲಾಖಾ ನೌಕರರಾದ ಜಯಲಕ್ಷ್ಮಿ, ಜೆ.ಡಿ.ರಾಮಯ್ಯ, ಪಳಂಗಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.