ಕಂಠಿ ಹೇಳಿಕೆ : ಬದ್ರಿಯಾ ಜುಮ್ಮಾ ಮಸೀದಿ ಖಂಡನೆ
ಮಡಿಕೇರಿ, ಸೆ. 12 : ಕಳೆದ ಅನೇಕ ವರ್ಷಗಳಿಂದ ಕೊಡಗು ಜಿಲ್ಲೆಯ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಮಂದಿ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಆದರೆ ಇದನ್ನು ಸಹಿಸಲಾಗದ ಚೆಟ್ಟಳ್ಳಿ ಗ್ರಾಮ ಪಂಚಾಯತ್ ಸದಸ್ಯ ಕಂಠಿ ಕಾರ್ಯಪ್ಪ ಅವರು ಕೋಮು ಪ್ರಚೋದನೆಯ ಭಾಷಣ ಮಾಡುವ ಮೂಲಕ ಜಿಲ್ಲೆಯಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ನಗರದ ಬದ್ರಿಯಾ ಜಮಾ-ಅತ್, ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಎಂ.ಜಿ.ಯೂಸುಫ್ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಸಮಾಜದಲ್ಲಿ ಒಡಕು ಮೂಡಿಸುವ ಹೇಳಿಕೆ ಅತ್ಯಂತ ಖಂಡನೀಯವಾಗಿದ್ದು, ಕಂಠಿ ಕಾರ್ಯಪ್ಪ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಒಬ್ಬ ಜನಪ್ರತಿನಿಧಿಯಾಗಿದ್ದುಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನಕ್ಕೆ ವಿರುದ್ಧವಾದ ಹೇಳಿಕೆ ನೀಡಿ ಸಮಾಜದ ಶಾಂತಿ ಕದಡುವ ಪ್ರಯತ್ನ ಮಾಡಿರುವುದರಿಂದ ಕಂಠಿಕಾರ್ಯಪ್ಪ ಅವರ ಗ್ರಾ.ಪಂ ಸದಸ್ಯತ್ವವನ್ನು ಅನರ್ಹಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲೆಯ ಜನರು ಶಾಂತಿಯನ್ನು ಬಯಸುತ್ತಿದ್ದರೂ ಮುಸಲ್ಮಾನರ ವಿರುದ್ಧ ಮುಗ್ಧ ಹಿಂದೂ ಬಾಂಧವರನ್ನು ಛೂ ಬಿಡುವ ಕಾರ್ಯ ನಡೆಯುತ್ತಿದೆ. ಈ ವ್ಯಕ್ತಿಯಿಂದ ಮುಂದೆ ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಕದಡುವ ಅಪಾಯವಿದೆ ಎಂದು ಆರೋಪಿಸಿರುವ ಎಂ.ಜಿ.ಯೂಸುಫ್ ತಕ್ಷಣ ಪೊಲೀಸರು ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.