×
Ad

ಆಕ್ಷೇಪಾರ್ಹ ಫೋಟೊ : ಬಿಲ್ಲವ ಸಮಾಜ ಖಂಡನೆ

Update: 2017-09-12 17:14 IST

ಮಡಿಕೇರಿ,ಸೆ. 12 : ಪುತ್ತೂರು ತಾಲೂಕಿನ ಪಡುಮಲೆಯ ಮುಡುಪಿನಡ್ಕದಲ್ಲಿರುವ ಕರಾವಳಿ ಶಕ್ತಿ ದೇವತೆ ದೇಯಿ ಬೈದ್ಯೆತಿ ಮೂರ್ತಿಯ ಜೊತೆ ಆಕ್ಷೇಪಾರ್ಹ ರೀತಿಯಲ್ಲಿ ಫೋಟೊ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟು ಅವಮಾನಿಸಿದ ಪ್ರಕರಣವನ್ನು ಕೊಡಗು ಜಿಲ್ಲಾ ಬಿಲ್ಲವ ಸಮಾಜ ಸೇವಾ ಸಂಘ ತೀವ್ರವಾಗಿ ಖಂಡಿಸಿದೆ.

ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಜಿಲ್ಲಾಧ್ಯಕ್ಷರಾದ ಬಿ.ವೈ.ಆನಂದರಘು, ಧಾರ್ಮಿಕ ಭಾವನೆಗೆ ದಕ್ಕೆ ತರುವ ಸಮಾಜ ಘಾತುಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಕರಾವಳಿಯ ಶಕ್ತಿ ದೇವತೆಯೆಂದೇ ನಂಬಿರುವ ಸತ್ಯ ದೈವಗಳಾದ ಕೋಟಿ ಚೆನ್ನಯ್ಯರ ತಾಯಿ ದೇವಿ ಬೈದ್ಯೆತಿಯನ್ನು ಬಿಲ್ಲವ ಜನಾಂಗದವರಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಜಾತಿ ಬಾಂಧವರು ಭಕ್ತಿ ಭಾವದಿಂದ ಪೂಜಿಸುತ್ತಾರೆ. ಬೈದ್ಯೆತಿ ದೇವಿಗೆ ಅವಮಾನ ಮಾಡುವ ಉದ್ದೇಶದಿಂದ ಮತ್ತು ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ಪ್ರಯತ್ನವಾಗಿ ಹನೀಫ್ ಎಂಬಾತ ಆಕ್ಷೇಪಾರ್ಹ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟ್ಟಿದ್ದಾನೆ ಎಂದು ಆನಂದರಘು ಆರೋಪಿಸಿದ್ದಾರೆ.

 ಬಿಲ್ಲವ ಜನಾಂಗದವರ ತಾಳ್ಮೆಯನ್ನು ಪರೀಕ್ಷಿಸಿದರೆ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ಅವರು, ಕೋಮು ಭಾವನೆ ಕೆರಳಿಸಲು ಪ್ರಚೋದನೆ ನೀಡುತ್ತಿರುವ ದುಷ್ಟಶಕ್ತಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಲು ಪೊಲೀಸರು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News