'ಕಾಲಮಿತಿಯಲ್ಲಿ ಜಾತಿ - ಆದಾಯ ಪ್ರಮಾಣ ಪತ್ರ ಮಾಹಿತಿ ಸಂಗ್ರಹ ಕಾರ್ಯ ಪೂರ್ಣಗೊಳಿಸಿ'
ಶಿವಮೊಗ್ಗ, ಸೆ. 12: 'ಓವರ್ ದಿ ಕೌಂಟರ್ (ಓಟಿಸಿ) ವ್ಯವಸ್ಥೆಯಡಿ ಜಾತಿ - ಆದಾಯ ಪ್ರಮಾಣ ಪತ್ರದ ಮಾಹಿತಿ ಸಂಗ್ರಹ ಕಾರ್ಯವನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು' ಎಂದು ಶಿವಮೊಗ್ಗ ಉಪ ವಿಭಾಗದ ಉಪ ವಿಭಾಗಾಧಿಕಾರಿ ಹೆಚ್.ಕೆ.ಕೃಷ್ಣಮೂರ್ತಿಯವರು ಗ್ರಾಮ ಲೆಕ್ಕಾಧಿಕಾರಿ (ವಿ.ಎ.) ಗಳಿಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದ್ದಾರೆ.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಓಟಿಸಿ ವ್ಯವಸ್ಥೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ವಿ.ಎ.ಗಳು ಮನೆ ಮನೆಗಳಿಗೆ ತೆರಳಿ ಮಾಹಿತಿ ಕಲೆ ಹಾಕುವ ಕೆಲಸ ಚುರುಕುಗೊಳಿಸಬೇಕು. ಈ ಮಾಹಿತಿಯನ್ನು ತಂತ್ರಾಂಶದಲ್ಲಿ ಅಪ್‍ಡೇಟ್ ಮಾಡಿ, ಚೆಕ್ ಲೀಸ್ಟ್ ಸಿದ್ದಪಡಿಸಬೇಕು. ಡಿಜಿಟಲ್ ಸಿಗ್ನೇಚರ್‍ಗೊಳಪಡಿಸಿ, ಉಪ ತಹಶೀಲ್ದಾರ್‍ಗಳಿಗೆ ರವಾನಿಸಬೇಕು. ಇದರಲ್ಲಿ ಯಾವುದೇ ಕಾರಣಕ್ಕೂ ವಿಳಂಬ ಹಾಗೂ ಲೋಪದೋಷಗಳಿಗೆ ಆಸ್ಪದವಾಗದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದ್ದಾರೆ.
ಸ್ಥಳದಲ್ಲಿಯೇ ಪಡೆಯಬಹುದು: ಉಪ ತಹಶೀಲ್ದಾರ್ ಹಾಗೂ ತಹಶೀಲ್ದಾರ್ ಹಂತದಲ್ಲಿ ಮಾಹಿತಿಯ ಪರಿಶೀಲನೆಯಾಗಿ ಸಹಿಯಾದ ನಂತರ 'ಭೂಮಿ' ಹಾಗೂ 'ಅಟಲ್ ಜನಸ್ನೇಹಿ ಕೇಂದ್ರ'ದ ತಂತ್ರಾಂಶಕ್ಕೆ ಜಾತಿ - ಆದಾಯ ಪ್ರಮಾಣ ಪತ್ರದ ಮಾಹಿತಿ ಅಪ್‍ಡೇಟ್ ಮಾಡಲಾಗುತ್ತದೆ.
ಈ ವ್ಯವಸ್ಥೆ ಪೂರ್ಣಗೊಂಡ ನಂತರ ನಾಗರೀಕರು ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿ ಆಧಾರ್ ಸಂಖ್ಯೆ ಅಥವಾ ಹೆಸರು, ವಿಳಾಸ ಹೇಳಿ ಸ್ಥಳದಲ್ಲಿಯೇ ಜಾತಿ - ಆದಾಯ ಪ್ರಮಾಣ ಪತ್ರ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸುವ ಅವಶ್ಯಕತೆಯಿರುವುದಿಲ್ಲವಾಗಿದೆ ಎಂದು ಉಪ ವಿಭಾಗಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪೂರ್ಣ ಹಂತಕ್ಕೆ: ಶಿವಮೊಗ್ಗ ತಾಲೂಕಿನಲ್ಲಿ ಗ್ರಾಮೀಣ ಭಾಗದಲ್ಲಿ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಸಲಾಗುತ್ತಿದ್ದು, ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ನಗರ ವ್ಯಾಪ್ತಿಯಲ್ಲಿ ಮಾಹಿತಿ ಸಂಗ್ರಹಿಸಲಾಗುವುದು. ನಾಗರೀಕರೇ ತಮ್ಮ ವ್ಯಾಪ್ತಿಯ ವಿ.ಎ.ಗಳ ಬಳಿ ತೆರಳಿ ಸೂಕ್ತ ಮಾಹಿತಿಯೂ ಕೊಡಬಹುದಾಗಿದೆ ಎಂದು ಹೇಳಿದ್ದಾರೆ.
ಶಿವಮೊಗ್ಗ ಉಪ ವಿಭಾಗ ವ್ಯಾಪ್ತಿಯ ಶಿವಮೊಗ್ಗ ತಾಲೂಕಿನಲ್ಲಿ ಶೇ. 80 ರಷ್ಟು, ತೀರ್ಥಹಳ್ಳಿಯಲ್ಲಿ ಶೇ. 83 ರಷ್ಟು ಹಾಗೂ ಭದ್ರಾವತಿಯಲ್ಲಿ ಶೇ. 80 ರಷ್ಟು ಮಾಹಿತಿ ಸಂಗ್ರಹಣೆ ಕಾರ್ಯ ಪೂರ್ಣಗೊಂಡಿದೆ. ಕಾಲಮಿತಿಯಲ್ಲಿ ಮಾಹಿತಿ ಸಂಗ್ರಹ ಪ್ರಕ್ರಿಯೆ ಪೂರ್ಣಗೊಳಿಸುವಂತೆ ವಿ.ಎ.ಗಳಿಗೆ ಸೂಚನೆ ನೀಡಲಾಗಿದೆ ಎಂದು ಹೆಚ್.ಕೆ.ಕೃಷ್ಣಮೂರ್ತಿ ಸ್ಪಷ್ಟಪಡಿಸಿದ್ದಾರೆ.
ಪೂರ್ಣ: ಉಪ ವಿಭಾಗ ವ್ಯಾಪ್ತಿಯ ಮೂರು ತಾಲೂಕುಗಳಲ್ಲಿ 2115 ಪಹಣಿ ಪತ್ರಗಳ ಕಲಂ 3 ಹಾಗೂ 9 ರಲ್ಲಿರುವ ಕಂಡುಬಂದಿರುವ ಲೋಪದೋಷ ಸರಿಪಡಿಸಲು ಕ್ರಮಕೈಗೊಳ್ಳಲಾಗಿದ್ದು, ಮುಂದಿನ ಒಂದೂವರೆ ತಿಂಗಳ ಅವಧಿಯಲ್ಲಿ ಲೋಪ ಸರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಶೇ. 80 ರಷ್ಟು ಪೂರ್ಣ
'ಶಿವಮೊಗ್ಗ ಉಪ ವಿಭಾಗ ವ್ಯಾಪ್ತಿಯಲ್ಲಿ ಓವರ್ ದಿ ಕೌಂಟರ್ ವ್ಯವಸ್ಥೆಯಡಿ ಜಾತಿ - ಆದಾಯ ಪ್ರಮಾಣ ಪತ್ರದ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆ ಚುರುಕುಗೊಂಡಿದ್ದು, ಶಿವಮೊಗ್ಗ ತಾಲೂಕಿನಲ್ಲಿ ಶೇ. 80 ರಷ್ಟು ಪ್ರಗತಿ ಸಾಧಿಸಲಾಗಿದೆ. 48,450 ರಲ್ಲಿ 38,780 ಕುಟುಂಬಗಳ ಮಾಹಿತಿ ಸಂಗ್ರಹಿಸಲಾಗಿದೆ. ತೀರ್ಥಹಳ್ಳಿಯಲ್ಲಿ 37,663 ರಲ್ಲಿ 29,944 ಕುಟುಂಬಗಳ ಮಾಹಿತಿ ಕಲೆ ಹಾಕಲಾಗಿದೆ. ಭದ್ರಾವತಿ ತಾಲೂಕಿನ 44,760 ರಲ್ಲಿ 39,466 ಕುಟುಂಬಗಳ ಮಾಹಿತಿ ಸಂಗ್ರಹಿಸಲಾಗಿದೆ.