×
Ad

'ಶಿವಮೊಗ್ಗ ಜಿಲ್ಲೆಯಲ್ಲಿ ರಚನೆಯಾಗದ ಸಹಾಯಕ ಯೋಜನಾ ಸಮಿತಿಗಳು' : ತಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಆರೋಪ

Update: 2017-09-12 18:03 IST

ಶಿವಮೊಗ್ಗ, ಸೆ. 12: 'ಶಿವಮೊಗ್ಗ ಜಿಲ್ಲೆಯಲ್ಲಿ ಇಲ್ಲಿಯವರೆಗೂ ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಹಂತದಲ್ಲಿ ಯೋಜನಾ ಸಹಾಯಕ ಸಮಿತಿಗಳು ರಚನೆಯಾಗಿಲ್ಲ' ಎಂದು ಸಾಗರ ತಾಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಆರೋಪಿಸಿದ್ದಾರೆ. 
ಮಂಗಳವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಯೋಜನಾ ಸಮಿತಿ ಸದಸ್ಯರಿಗೆ ಆಯೋಜಿಸಲಾಗಿದ್ದ ಜಿಲ್ಲಾ ಯೋಜನಾ ಮುನ್ನೋಟ ಸಿದ್ಧಪಡಿಸುವ ಕಾರ್ಯಾಗಾರದಲ್ಲಿ ಮಾತನಾಡಿದರು.

ಮುಂದಿನ ಐದು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಕೈಗೊಳ್ಳಬಹುದಾದ ಸಮಗ್ರ ಯೋಜನಾ ವರದಿ ಸಿದ್ದಪಡಿಸಿ, ನವೆಂಬರ್ ಮಾಹೆಯೊಳಗೆ ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಗಿದೆ. ಗ್ರಾ.ಪಂ., ತಾ.ಪಂ. ಹಂತದಲ್ಲಿ ಚರ್ಚಿಸಿ ವರದಿ ಸಿದ್ದಪಡಿಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಇಲ್ಲಿಯವರೆಗೂ ಗ್ರಾ.ಪಂ. ತಾ.ಪಂ. ಹಾಗೂ ಜಿಲ್ಲಾ ಹಂತದಲ್ಲಿ ಯೋಜನಾ ಸಲಹಾ ಸಮಿತಿಗಳ ರಚನೆಯೇ ಆಗಿಲ್ಲ ಎಂದರು. 

ರಮೇಶ್ ಕುಮಾರ್ ವರದಿಯಲ್ಲಿ ಯೋಜನಾ ಸಲಹಾ ಸಮಿತಿಗಳ ರಚನೆ ಮಾಡಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಈ ಕುರಿತಂತೆ ತಾವು ಕಳೆದ ಒಂದು ವರ್ಷದ ಹಿಂದೆಯೇ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದೆ. ಆದರೆ ಸಿಇಓರವರು ಸ್ಪಷ್ಟ ಉತ್ತರ ನೀಡಿರಲಿಲ್ಲ. ಸೀಮಿತಾವಧಿಯಲ್ಲಿ ಸಮಿತಿ ರಚನೆ ಮಾಡಿ ವರದಿ ತರಿಸಿಕೊಳ್ಳುವುದಾದರು ಹೇಗೆ? ಎಂದು ಮಲ್ಲಿಕಾರ್ಜುನ ಹಕ್ರೆ ಪ್ರಶ್ನಿಸಿದರು. 

ಈ ಸಂದರ್ಭದಲ್ಲಿ ಸಿಇಓ ಡಾ. ಕೆ. ರಾಕೇಶ್‍ಕುಮಾರ್‍ರವರು ನೀಡಿದ ಸ್ಪಷ್ಟನೆಗೆ ಮಲ್ಲಿಕಾರ್ಜುನ ಹಕ್ರೆ ಆಕ್ಷೇಪ ವ್ಯಕ್ತಪಡಿಸಿದರು. ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಉಪನಿರ್ದೇಶಕ ಜಿ.ಎಸ್.ಗಣೇಶ ಪ್ರಸಾದ್ ಮಾತನಾಡಿ, ಸಹಾಯಕ ಯೋಜನಾ ಸಮಿತಿಗಳ ರಚನೆ ಮಾಡಬೇಕಾಗಿತ್ತು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಇಲ್ಲಿಯವರೆಗೂ ಯೋಜನಾ ಸಹಾಯಕ ಸಮಿತಿಗಳ ರಚನೆಯಾಗಿಲ್ಲವೇಕೆ? ಇನ್ನೂ ತಡ ಮಾಡದೆ ಸಮಿತಿ ರಚನೆ ಮಾಡಿ. ಜೊತೆಗೆ ತಾಲೂಕು ಮಟ್ಟದಲ್ಲಿ ಗ್ರಾ.ಪಂ., ತಾ.ಪಂ., ಜಿ.ಪಂ. ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ಮಾಹಿತಿ ನೀಡುವ ಕೆಲಸ ಮಾಡಿ. ಯೋಜನೆಗಳ ಬಗ್ಗೆ ಪುಸ್ತಕ ಸಿದ್ದಪಡಿಸಿ ಚರ್ಚಿಸಿದರೆ ಸಾಲದು ಎಂದು ಹೇಳಿದರು. 

ಆಹ್ವಾನಿಸಿ: ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜರುಗುವ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಗೆ ತಾಲೂಕು ಪಂಚಾಯ್ತಿ ಅಧ್ಯಕ್ಷರಿಗೆ ಆಹ್ವಾನ ನೀಡದಿರುವ ಕುರಿತಂತೆ ಮಲ್ಲಿಕಾರ್ಜುನ ಹಕ್ರೆ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ರಮೇಶ್‍ಕುಮಾರ್ ವರದಿಯ ಪ್ರಕರಣ 207 (2) ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜರುಗುವ ಕೆ.ಡಿ.ಪಿ. ಸಭೆಗೆ ಕಡ್ಡಾಯವಾಗಿ ತಾ.ಪಂ. ಅಧ್ಯಕ್ಷರನ್ನು ಆಹ್ವಾನಿಸಬೇಕೆಂದು ಸ್ಪಷ್ಟಪಡಿಸಲಾಗಿದೆ. 
ಆದರೆ ಇಲ್ಲಿಯವರೆಗೂ ತಾ.ಪಂ. ಅಧ್ಯಕ್ಷರಿಗೆ ಆಹ್ವಾನ ನೀಡಲಾಗುತ್ತಿಲ್ಲ. ಈ ಬಗ್ಗೆ ಗಮನಹರಿಸಬೇಕು ಎಂದು ಸಿಇಓಗೆ ಹೇಳಿದರು. ಈ ಕುರಿತಂತೆ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಸಿಇಓ ತಿಳಿಸಿದರು. 

'ಡಿ.ಸಿ., ಸಿ.ಇ.ಓ., ಮುಖ್ಯಾಧಿಕಾರಿಗಳಿಗೇ ಮಾಹಿತಿ ಇರುವುದಿಲ್ಲ!' : ಸದಸ್ಯ ತೀ.ನಾ.ಶ್ರೀನಿವಾಸ್
'ಸರ್ಕಾರದ ಕೆಲ ಕಾರ್ಯಕ್ರಮ, ಯೋಜನೆ, ಆದೇಶಗಳ ಬಗ್ಗೆ ಕೆಲವೊಮ್ಮೆ ಡಿ.ಸಿ.ಗಳಿಗೆ, ಸಿಇಓಗಳಿಗೆ ಹಾಗೂ ಮುಖ್ಯಾಧಿಕಾರಿಗಳಿಗೆ ಮಾಹಿತಿಯೇ ಇರುವುದಿಲ್ಲ. ಕೆಲ ವಿಷಯಗಳಿಗೆ ಸಂಬಂಧಿಸಿದಂತೆ ಅವರಲ್ಲಿಯೇ ಗೊಂದಲ ಮನೆ ಮಾಡಿರುತ್ತದೆ' ಎಂದು ಜಿಲ್ಲಾ ಯೋಜನಾ ಸಮಿತಿಯ ಸದಸ್ಯ ತೀ.ನಾ.ಶ್ರೀನಿವಾಸ್ ದೂರಿದರು.

ಸ್ಪಷ್ಟ ಆದೇಶದ ಹೊರತಾಗಿಯೂ ಯೋಜನಾ ಸಹಾಯಕ ಸಮಿತಿಗಳ ರಚನೆಯಾಗಿಲ್ಲದಿರುವುದು ಅಧಿಕಾರಿಗಳಲ್ಲಿರುವ ಮಾಹಿತಿ ಗೊಂದಲಕ್ಕೆ ಸಾಕ್ಷಿಯಾಗಿದೆ. ತಕ್ಷಣವೇ ನಿಯಮಾನುಸಾರ ಗ್ರಾ.ಪಂ., ತಾ.ಪಂ., ಜಿಲ್ಲಾ ಮಟ್ಟದಲ್ಲಿ ಯೋಜನಾ ಸಹಾಯಕ ಸಮಿತಿಗಳ ರಚನೆ ಮಾಡಿ ಸದಸ್ಯರ ನಿಯೋಜನೆ ಮಾಡಬೇಕು ಎಂದು ತೀ.ನಾ.ಶ್ರೀನಿವಾಸ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News