×
Ad

ಅವ್ಯವಸ್ಥೆಯ ಆಗರವಾಗಿರುವ ಆದರ್ಶ ಕಾಲೋನಿ : ನಿವಾಸಿಗಳ ಅಳಲು

Update: 2017-09-12 18:07 IST

ಶಿವಮೊಗ್ಗ, ಸೆ. 12: ಇಲ್ಲಿನ ಮಹಾನಗರ ಪಾಲಿಕೆ ವಾರ್ಡ್ 6 ರ ವಿನೋಬನಗರ ಆದರ್ಶ ಕಾಲೋನಿಯು ಅವ್ಯವಸ್ಥೆಯ ಆಗರವಾಗಿದೆ. ಮೂಲಸೌಕರ್ಯಗಳ ಕೊರತೆಯಿದೆ. ಇದರಿಂದ ನಮ್ಮಗಳ ಗೋಳು ಹೇಳತೀರದಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. 
ಕಾಲೋನಿ ನಿರ್ಮಾಣವಾಗಿದ್ದಾಗ ರಸ್ತೆಗಳು ಹೇಗಿದ್ದವೋ ಈಗಲು ಹಾಗೆಯೇ ಇವೆ. ಕೆಲ ರಸ್ತೆಗಳು ಡಾಂಬರೀಕರಣಗೊಂಡಿಲ್ಲ. ರಸ್ತೆಗಳು ಗುಂಡಿ, ಗೊಟರು ಬಿದ್ದು ಜನ-ವಾಹನ ಸಂಚಾರ ಸಾಧ್ಯವಿಲ್ಲದಂತಹ ದುಃಸ್ಥಿತಿಯಲ್ಲಿವೆ. 

ಮಳೆ ಬಿದ್ದ ವೇಳೆಯಲ್ಲಂತೂ ರಸ್ತೆಗಳ ಸಂಪೂರ್ಣ ಕೆಸರು ಗುಂಡಿಯಂತಾಗಿ ಪರಿಣಮಿಸುತ್ತಿವೆ. ರಸ್ತೆಯಲ್ಲಿ ಬಿದ್ದಿರುವ ಗುಂಡಿ-ಗೊಟರುಗಳಲ್ಲಿ ನೀರು ತುಂಬಿಕೊಳ್ಳುತ್ತಿದೆ. ಇದರಿಂದ ವಾಹನಗಳಿರಲಿ, ಜನರು ಕೂಡ ಓಡಾಡಲು ಆಗುವುದಿಲ್ಲವಾಗಿದೆ ಎಂದು ಸ್ಥಳೀಯರು ದೂರುತ್ತಾರೆ. 
ಕಾಲೋನಿಯಲ್ಲಿ ಸ್ವಚ್ಚತೆಯಿಲ್ಲವಾಗಿದೆ. ಎಲ್ಲೆಂದರಲ್ಲಿ ಗಿಡಗಂಟೆ, ಪೊದೆ ಬೆಳೆದುಕೊಂಡಿದೆ. ಇದರಿಂದ ವಿಷ ಜಂತುಗಳು, ಸೊಳ್ಳೆ ಮತ್ತೀತರ ಕ್ರಿಮಿಕೀಟಗಳ ಹಾವಳಿ ವಿಪರೀತವಾಗಿದೆ. ಚರಂಡಿ ವ್ಯವಸ್ಥೆಯೂ ಅವ್ಯವಸ್ಥಿತವಾಗಿದೆ. ಇದರಿಂದ ನಿವಾಸಿಗಳು ನಾನಾ ರೀತಿಯ ರೋಗ-ರುಜಿನಗಳಿಗೆ ತುತ್ತಾಗುವಂತಾಗಿದೆ ಎಂದು ನಿವಾಸಿಗಳು ಆರೋಪಿಸುತ್ತಾರೆ. 

ಬಡಾವಣೆಯಲ್ಲಿರುವ ಅವ್ಯವಸ್ಥೆ ಸರಿಪಡಿಸುವಂತೆ ಈಗಾಗಲೇ ಹಲವು ಬಾರಿ ಮಹಾನಗರ ಪಾಲಿಕೆ ಆಡಳಿತದ ಗಮನಕ್ಕೆ ತರಲಾಗಿದೆ. ಆದರೆ ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ನಮ್ಮ ಗೋಳು ಕೇಳುವವರ್ಯಾರು ಇಲ್ಲವಾಗಿದ್ದಾರೆ ಎಂದು ನಿವಾಸಿಗಳು ತಮ್ಮ ಅಳಲು ತೋಡಿಕೊಳ್ಳುತ್ತಾರೆ. 
ಇನ್ನಾದರೂ ಮಹಾನಗರ ಪಾಲಿಕೆ ಆಡಳಿತ ಬಡಾವಣೆಯಲ್ಲಿ ಮನೆ ಮಾಡಿರುವ ಅವ್ಯವಸ್ಥೆ ಸರಿಪಡಿಸಲು ಮುಂದಾಗಬೇಕು. ಕನಿಷ್ಠ ಮೂಲಸೌಕರ್ಯ ಕಲ್ಪಿಸುವತ್ತ ಪ್ರಾಮಾಣಿಕ ಗಮನಹರಿಸಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸುತ್ತಾರೆ. 

'ಸಮಸ್ಯೆ ಪರಿಹರಿಸದಿದ್ದರೆ ಪಾಲಿಕೆಗೆ ಮುತ್ತಿಗೆ' : ಅಧ್ಯಕ್ಷ ಹೆಚ್.ಪಿ.ಗಿರೀಶ್ ಎಚ್ಚರಿಕೆ
'ಆದರ್ಶ ಕಾಲೋನಿಯಲ್ಲಿ ಮನೆ ಮಾಡಿರುವ ಅವ್ಯವಸ್ಥೆ ಸರಿಪಡಿಸಲು ಮಹಾನಗರ ಪಾಲಿಕೆ ಆಡಳಿತ ಕಾಲಮಿತಿಯಲ್ಲಿ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕುವುದು ಅನಿವಾರ್ಯವಾಗಲಿದೆ' ಎಂದು ಸ್ಥಳೀಯ ನಿವಾಸಿ, ಶಿವಮೊಗ್ಗ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಗಿರೀಶ್ ಎಚ್ಚರಿಕೆ ನೀಡಿದ್ದಾರೆ. 
ಬಡಾವಣೆಯಲ್ಲಿರುವ ಅವ್ಯವಸ್ಥೆಯ ಬಗ್ಗೆ ಈಗಾಗಲೇ ಹಲವು ಬಾರಿ ಪಾಲಿಕೆ ಆಡಳಿತದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸಿಕೊಂಡು ಬರುತ್ತಿದ್ದಾರೆ. ತಕ್ಷಣವೇ ಪಾಲಿಕೆ ಮೇಯರ್ ಹಾಗೂ ಆಯುಕ್ತರು ಆದರ್ಶ ಕಾಲೋನಿಯಲ್ಲಿ ಕನಿಷ್ಠ ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಹೆಚ್.ಪಿ.ಗಿರೀಶ್‍ರವರು ಒತ್ತಾಯಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News