'ನಮ್ಮ ಮಹಾನಡೆ ಬೆಂಗಳೂರಿನೆಡೆಗೆ' - ಕೊಡಗು ಜಿಲ್ಲೆಯಿಂದ ಐದು ಸಾವಿರ ಕಾರ್ಮಿಕರು: ಸಿಐಟಿಯು
ಸಿದ್ದಾಪುರ, ಸೆ.12: ಸಿಐಟಿಯು ಸಂಘಟನೆಯು ತಾ.14 ರಂದು ಹಮ್ಮಿ ಕೊಂಡಿರುವ ನಮ್ಮ ಮಹಾನಡೆ ಬೆಂಗಳೂರಿನೆಡೆಗೆ ಕಾರ್ಯಕ್ರಮಕ್ಕೆ ಕೊಡಗು ಜಿಲ್ಲೆಯಿಂದ ಐದು ಸಾವಿರ ಕಾರ್ಮಿಕರು ತೆರಳಲಿರುವುದಾಗಿ ಸಿಐಟಿಯು ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಎಚ್.ಬಿ ರಮೇಶ್ ತಿಳಿಸಿದ್ದಾರೆ.
ರಾಜ್ಯದಲ್ಲಿ 186 ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ನಡೆಯುವ ಪ್ರತಿಭಟನೆಗೆ ಜಿಲ್ಲೆಯಿಂದ 12 ಸಂಘಟೆನೆಗಳ ಕಾರ್ಯಕರ್ತರು ತೆರಳಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ದುಡಿಯುವ ಜನರ ಹಕ್ಕುಗಳ ಸಂರಕ್ಷಣೆ ಮತ್ತು ಸಮೃದ್ದ, ಸಮಗ್ರ, ಸೌಹಾರ್ಧ ಕರ್ನಾಟಕಕ್ಕಾಗಿ ಕಾರ್ಮಿಕರು ಒಂದಾಗುತ್ತಿದ್ದು, ಹೋರಾಟದಲ್ಲಿ, ಕಾರ್ಮಿಕರಿಗೆ ತಿಂಗಳಿಗೆ 18 ಸಾವಿರಕ್ಕಿಂತ ಕಡಿಮೆ ಇಲ್ಲದಂತೆ ಸಮಾನ ಕನಿಷ್ಠ ವೇತನ, ಕೆಲಸ, ವೇತನ ಮತ್ತು ಸಾಮಾಜಿಕ ಬದ್ರತೆ, ಕಾಡು ಪ್ರಾಣಿಗಳ ದಾಳಿಯಿಂದ ಕಾರ್ಮಿಕರ ಜೀವ ಉಳಿಸಿ, ವಸತಿ ರಹಿತರಿಗೆ ಮನೆ ಮತ್ತು ನಿವೇಶನ ಮುಂತಾದ ಹಲವು ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಬೃಹತ್ ಹೋರಾಟ ಮಾಡಲಿರುವುದಾಗಿ ತಿಳಿಸಿದರು.
ಗ್ರಾ. ಪಂ ನೌಕರರ ಸಂಘದ ಅಧ್ಯಕ್ಷ ಪಿ.ಆರ್ ಭರತ್ ಮತನಾಡಿ, ಸರ್ಕಾರದ ಅನುಮೋದನೆ ಪಡೆದ ನೌಕರರಿಗೆ ಮಾತ್ರ ವೇತನ ಎಂಬ ಮಾನದಂಡದಡಿ ಗ್ರಾ.ಪಂ ನೌಕರರಿಗೆ ವೇತನ ನೀಡುತ್ತಿದ್ದು, ಈ ಮಾನದಂಡ ಕೈ ಬಿಡಬೇಕು ಎಂಬ ಬೇಡಿಕೆಯನ್ನು ಹೋರಾಟದ ಮೂಲಕ ಸರ್ಕಾರದ ಮುಂದಿಡಲಾಗುವುದು ಎಂದರು. ಗ್ರಾ.ಪಂ ಗ್ರಾಂಥಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂಧಿಗಳ ವೇತನವನ್ನು ಏಕಾಏಕಿ ಕಡಿತಗೊಳಿಸಿದ ಸರ್ಕಾರದ ನೀತಿಯ ವಿರುದ್ದವೂ ಹೋರಾಟ ಮಾಡಲಾಗುವುದು ಎಂದರು. ಸ್ವಚ್ಚ ಭಾರತ ಎಂಬ ಕನಸು ಕಾಣುತ್ತಿರುವ ನರೇಂದ್ರ ಮೋದಿ ಸರ್ಕಾರ ಅದರ ಜಾಹಿರಾತಿಗಾಗಿ ಕೋಟಿಗಟ್ಟಲೆ ಹಣ ವ್ಯಯಿಸಲಾಗುತ್ತಿದೆ. ಆದರೆ ಸ್ವಚ್ಚತಾ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ಅವರ ದುಡಿಮೆಗೆ ತಕ್ಕ ವೇತನ ನೀಡಲು ಸರ್ಕಾರ ವಿಫಲವಾಗಿದೆ ಎಂದರು. ಹಮಾಲಿ ಕಾರ್ಮಿಕರಿಗಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ವೇತನವನ್ನು ಕೂಡಲೇ ನೀಡಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಎನ್.ಡಿ ಕುಟ್ಟಪ್ಪನ್ ಮತ್ತು ಮಹದೇವ ಇದ್ದರು.