ಗೌರಿ ಲಂಕೇಶ್ ಹತ್ಯೆ ಖಂಡಿಸಿ ಮೈಸೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ
ಮೈಸೂರು,ಸೆ.12: ಸತ್ಯ ಹೇಳುವ ಪೆನ್ನುಗಳಿಗೆ, ವಿಚಾರ ಹೇಳುವ ಪೆನ್ನುಗಳಿಗೆ ಗುಂಡಿನ ಮೂಲಕ ಉತ್ತರಕೊಡುತ್ತಿರುವ ಸಂಸ್ಕೃತಿಗೆ ನಾಚಿಕೆಯಾಗಬೇಕು. ನಮ್ಮದೇಶದ ಸಂಸ್ಕೃತಿಗೆ ನಾಚಿಕೆಯಾಗಬೇಕು ಎಂದು ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಕರ್ತೆ, ಸಾಹಿತಿ ಗೌರಿ ಲಂಕೇಶ್ ಹಂತಕರನ್ನು ಬಂಧಿಸುವಂತೆ ಒತ್ತಾಯಿಸಿ ಪ್ರಗತಿಪರರ ಒಕ್ಕೂಟ ರೈತ ಸಂಘ ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳು ಮಂಗಳವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ದೇಶದ ವ್ಯವಸ್ಥೆಗೆ ನಾಚಿಕೆಯಾಗಬೇಕು. ಸತ್ಯವನ್ನು ಗುಂಡಿನಿಂದ ಮುಚ್ಚಲು ಸಾಧ್ಯವೇ? ಅನಾದಿ ಕಾಲದಿಂದಲೂ ಸತ್ಯ ಹೇಳಿಕೊಂಡು ಬಂದಿರುವವರಿಗೆ ಕೊಲೆ ಮಾಡಿಕೊಂಡು ಬಂದರೆ.ಇದುಕೊಲೆಗಡುಕ ದೇಶವೇ? ಇದು ಪ್ರಬುದ್ಧ ದೇಶವೇ? ಎಂದು ಪ್ರಶ್ನಿಸಿದರು.
ಇಡೀ ಭಾರತದ ಮಣ್ಣಿನ ಗುಣವೇ ವೈಚಾರಕತೆಯಿಂದ ಕೂಡಿದೆ. ಮೂರ್ಖರೇನಿಮ್ಮಗುಂಡಿನ ಮಾತು ನಮ್ಮ ಮುಂದೆ ನಿಲ್ಲೋದಿಲ್ಲ. ಗೌರಿ ಹತ್ಯೆ ವಿಚಾರವಾಗಿ ಪ್ರಧಾನಿ ಮೌನ ವಹಿಸಿರೋದು ಇಡೀದೇಶಕ್ಕೆಅವಮಾನ. ತಮ್ಮ ಮನ್ ಕೀ ಬಾತ್ ನಲ್ಲಿ ಒಂದೇ ಎಂಬ ಭಾವನೇ ಬಿಂಬಿಸಲಿ.ಮುಂದಿನ ದಿನದಲ್ಲಿ ಇದಕ್ಕೆತಕ್ಕ ಶಾಸ್ತಿಯಾಗಲಿದೆ.ದೇಶ ದೇಶವಾಗಬೇಕಾದರೆ ಸಂವಿಧಾನ ಆಶೋತ್ತರಗಳನ್ನು ಬೆಳಸಿಕೊಳ್ಳಬೇಕು ಎಂದರು.
ಮಲ್ಲೇಶ್ ಮಾತನಾಡಿ, ಪ್ರಗತಿಪರರಾದ ನಾವು ಎಲ್ಲಾ ಧರ್ಮಗಳ ಮೂಲಭೂತವಾದದ ವಿರುದ್ಧವೂ ಧ್ವನಿ ಎತ್ತಿದ್ದೇವೆ, ಬಹು ಸಂಸ್ಕೃತಿಯ ನಾಡಿನಲ್ಲಿ ಒತ್ತಡ ಹೇರುವುದು ಪ್ರಜಾಪ್ರಭುತ್ವ ವಿರೋಧಿ ನಿಲುವಾಗಿದೆ, ಸಿದ್ಧಾಂತದ ಮೂಲಕ ಉತ್ತರ ನೀಡಲು ಅಸಮರ್ಥರು ಕೊಲೆ ಮಾರ್ಗ ಹಿಡಿದಿರುವುದು ಹೇಯಕೃತ್ಯವಾಗಿದೆ.ನಮ್ಮಅಭಿವ್ಯಕ್ತ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದರೇ ಮೌನ ವಹಿಸುವುದಿಲ್ಲವೆಂದು ಎಚ್ಚರಿಕೆ ನೀಡಿದರು.
ನಗರದರಾಮಸ್ವಾಮಿ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ನೂರಡಿರಸ್ತೆ, ಜೆಲ್‍ಬಿ ರಸ್ತೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿದರು. ಕೋಮು ಶಕ್ತಿಗಳ ವಿರುದ್ಧ ಹೋರಾಡುತ್ತಿದ್ದ ದಿಟ್ಟ ಹೋರಾಟಗಾರ್ತಿ ಗೌರಿ ಹತ್ಯೆ ನಾಗರೀಕ ಸಮಾಜ ತಲೆತಗ್ಗಿಸುವ ವಿಚಾರ, ಅವರ ಹತ್ಯೆ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು, ಜೊತೆಗೆ ಹಿಂದ ಹತ್ಯೆಗೀಡಾದ ಧಾಬೋಲ್ಕರ್, ಪನ್ಸಾರೆ, ಕಲ್ಬುರ್ಗಿ ಅವರ ಹತ್ಯೆ ಮಾಡಿದ ಕೊಲೆಗಡುಕರನ್ನು ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನಾಕಾರರು ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಎರಡು ಗಂಟೆಯಾದರೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಾರದಿರುವುದನ್ನು ಖಂಡಿಸಿ ಕೆಲವು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಸಂಸದರ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿಗಳು ತಡವಾಗಿ ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ಪ್ರಗತಿಪರ ಚಿಂತಕರಾದ ಶಿವರಾಮು ಕಾಡನಕುಪ್ಪೆ, ಪ್ರೊ.ಸರ್ವಮಂಗಳ, ಮುದ್ದುಕೃಷ್ಣ,ಜಿ.ಪಿ.ಬಸವರಾಜು, ಶಾಸಕ ಎಂ.ಕೆ.ಸೋಮಶೇಖರ್ ಸೇರಿದಂತೆ ಹಲವರು ಭಾಗವಹಿಸಿದ್ದರು.