×
Ad

ಮಂಡ್ಯ : ಗೌರಿ ಹತ್ಯೆ ಹಂತಕರ ಬಂಧನಕ್ಕೆ ಆಗ್ರಹ

Update: 2017-09-12 19:51 IST

ಮಂಡ್ಯ, ಸೆ.12: ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಹಾಗು ಹಂತಕರ ಬಂಧನಕ್ಕೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಬೆಂಗಳೂರು ಮೈಸೂರು ಹೆದ್ದಾರಿ ರಸ್ತೆತಡೆ ನಡೆಸಿದರು. 

ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗದ ಹೆದ್ದಾರಿ ತಡೆ ನಡೆಸಿದ ಅವರು, ಗೌರಿ ಲಂಕೇಶ್ ಹತ್ಯೆಯನ್ನು ಉಗ್ರವಾಗಿ ಖಂಡಿಸಿದರು. ಈ ವಿಚಾರದಲ್ಲಿ ರಾಜ್ಯ ಗುಪ್ತಚರ ಇಲಾಖೆ ವಿಫಲಗೊಂಡಿದೆ ಎಂದು ಕಿಡಿಕಾರಿದರು.

ಡಾ.ಎಂ.ಎಂ.ಕಲ್ಬುರ್ಗಿ ಹತ್ಯೆಯಾಗಿ ಎರಡು ವರ್ಷವಾಯಿತು. ಇದೀಗ ಗೌರಿ ಲಂಕೇಶ್ ಅವರ ಹತ್ಯೆಯಾಗಿದೆ. ಪ್ರಗತಿಪರ ಹೋರಾಟಗಾರರು, ಚಿಂತಕರನ್ನು ಕೊಲ್ಲುವ ಮಟ್ಟಕ್ಕೆ ದುಷ್ಕರ್ಮಿಗಳು ಇಳಿದಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಹಂತಕರನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಮತ್ತೆ ಇಂತಹ ಘಟನೆಗಳು ನಡೆಯದಂತೆ ಸೂಕ್ತ ಮುನ್ನೆಚ್ಚರಿಕೆವಹಿಸಬೇಕು ಎಂದು ಅವರು ಆಗ್ರಹಿಸಿದರು.

ಸಂಘದ ರಾಜ್ಯ ಉಪಾಧ್ಯಕ್ಷ ಕೋಣಸಾಲೆ ನರಸರಾಜು, ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್, ತಾಲೂಕು ಅಧ್ಯಕ್ಷ ನಾಗಣ್ಣ, ಬಿ.ಬೋಮ್ಮೇಗೌಡ, ಹನಿಯಂಬಾಡಿ ನಾಗರಾಜು, ನಿಂಗಮ್ಮ, ರುಕ್ಮಿಣಿ, ಲತಾ, ಹೆಮ್ಮಿಗೆ ಕೃಷ್ಣಪ್ಪ, ಇತರ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News