ನ.1ರಿಂದ ಬಿಜೆಪಿಯ ಪರಿವರ್ತನಾ ರ್ಯಾಲಿ
ಬೆಂಗಳೂರು, ಸೆ.12: ರಾಜ್ಯ ಸರಕಾರದ ವೈಫಲ್ಯಗಳ ವಿರುದ್ಧ ಜನರಲ್ಲಿ ಅರಿವು ಮಾಡಿಸಲು ನ.1ರಿಂದ ನವ ಕರ್ನಾಟಕ ನಿರ್ಮಾಣದ ಬಿಜೆಪಿಯ ಪರಿವರ್ತನಾ ಯಾತ್ರೆಯನ್ನು ಆರಂಭಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಹೇಳಿದ್ದಾರೆ.
ಮಂಗಳವಾರ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿಯ ದಕ್ಷಿಣ ಕರ್ನಾಟಕ ಜಿಲ್ಲೆಗಳ ಚುನಾವಣಾ ಉಸ್ತುವಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಕನ್ನಡ ರಾಜ್ಯೋತ್ಸವ ದಿನವಾದ ನ. 1 ರಂದು ಕನ್ನಡ ಬಾವುಟ ಹಾರಿಸುವ ಮೂಲಕ ಈ ಯಾತ್ರೆಗೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಗುವುದು. ನ. 1ರಿಂದ ಆರಂಭವಾಗುವ ಪರಿವರ್ತನಾ ಯಾತ್ರೆ ಜ. 15ರವರೆಗೂ ರಾಜ್ಯಾದ್ಯಂತ ಸಂಚರಿಸಲಿದೆ ಎಂದರು.
ಬಿಜೆಪಿಯ ರಾಷ್ಟ್ರೀಯ ನಾಯಕರು ಚಾಲನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪರಿವರ್ತನಾ ಯಾತ್ರೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಸಂಚರಿಸಲಿದೆ. ಪರಿವರ್ತನಾ ಯಾತ್ರೆಯ ಸಂದರ್ಭದಲ್ಲಿ ಪ್ರತಿ ಕ್ಷೇತ್ರದಲ್ಲೂ ನವಚೈತನ್ಯ ಸಮಾವೇಶ ನಡೆಸಲಾಗುವುದು ತಿಳಿಸಿದರು.
ಪ್ರತಿ ಸಮಾವೇಶದಲ್ಲೂ ಕನಿಷ್ಠ 13 ಸಾವಿರ ಕಾರ್ಯಕರ್ತರು ಸೇರಬೇಕು. ಒಟ್ಟು 3 ಲಕ್ಷ 30 ಸಾವಿರ ಕಾರ್ಯಕರ್ತರು ಈ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು.