ಬ್ಲೂವೇಲ್ ಗೇಮ್‌ಗೆ ಮೈಸೂರಿನ ವಿದ್ಯಾರ್ಥಿ ಬಲಿ
ಮೈಸೂರು, ಸೆ.12: ಅತ್ಯಂತ ಅಪಾಯಕಾರಿ ಡೆಡ್ಲಿ ಬ್ಲೂವೇಲ್ ಗೇಮ್‌ಗೆ ವಿದ್ಯಾರ್ಥಿ ಬಲಿಯಾಗಿರುವ ಘಟನೆ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಇಂದು ಪೋಷಕರು ಠಾಣೆಗೆ ದೂರು ನೀಡಿ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
ಇಡೀ ಯುವ ಸಮೂಹವನ್ನೇ ಬೆಚ್ಚಿ ಬೀಳಿಸಿರುವ ಡೆಡ್ಲಿ ಬ್ಲೂವೇಲ್ ಗೇಮ್ ಸಾಂಸ್ಕೃತಿಕ ನಗರಿಯಲ್ಲಿ ಪ್ರಥಮ ಬಲಿ ತೆಗೆದುಕೊಂಡಿದೆ. ಪ್ರತಿಭಾವಂತ ವಿದ್ಯಾರ್ಥಿಯೋರ್ವ ಬ್ಲೂ ವೇಲ್ ಎಂಬ ಮೋಸದಾಟಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.
ಸಾಂಸ್ಕೃತಿಕ ನಗರಿ ಮೈಸೂರಿನ ಮೇಟಗಳ್ಳಿ ಬಡಾವಣೆಯ ನಿವಾಸಿ ಪ್ರಸನ್ನ ಹಾಗೂ ಪ್ರತಿಮಾ ದಂಪತಿಯ ಪುತ್ರ ತುಷಾರ್ (17) ಬ್ಲೂವೇಲ್ ಗೇಮ್‌ಗೆ ಬಲಿಯಾಗಿದ್ದಾನೆ ಎನ್ನಲಾಗಿದೆ.
ಸೆ. 4ರಂದು ಸಂಜೆ ಕಾಲೇಜು ಮುಗಿಸಿ ಎಂದಿನಂತೆ ಮನೆಗೆ ಬಂದಿದ್ದ ತುಷಾರ್ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಇದರಿಂದ ಇಡೀ ಕುಟುಂಬ ಆಘಾತಕ್ಕೊಳಗಾಗಿ ತಂದೆ-ತಾಯಿ ಈತನಕ ಚೇತರಿಸಿಕೊಂಡಿಲ್ಲ.
ಮನೆ ಹಾಗೂ ಕಾಲೇಜಿನಲ್ಲಿ ಯಾವುದೇ ಸಮಸ್ಯೆ ಇರದೆ, ಅತ್ಯಂತ ಲವಲವಿಕೆಯಿಂದ ಓಡಾಡಿಕೊಂಡಿದ್ದ ತುಷಾರ್‌ನ ಈ ಸಾವು ಇಡೀ ಮನೆಯ ಸದಸ್ಯರನ್ನು ನೋವಿನಲ್ಲಿ ಮುಳುಗಿಸಿದೆ. ಇಷ್ಟಾದರೂ ತಂದೆ-ತಾಯಿ ಮಗ ಸತ್ತಿದ್ದೇಕೆ? ಎಂಬ ಸತ್ಯವನ್ನು ಈತನಕ ಹೊರಹಾಕಿರಲಿಲ್ಲ.
ಪೋಷಕರು ಮಗ ಆತ್ಮಹತ್ಯೆ ಮಾಡಿಕೊಂಡ ದಿನ ಲಿಖಿತ ಹೇಳಿಕೆ ನೀಡಿದ್ದರೂ ಅದರಲ್ಲಿ ಬ್ಲೂವೇಲ್ ಗೇಮ್ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇರಲಿಲ್ಲ ಎನ್ನಲಾಗಿದೆ. ಮಗ ಏತಕ್ಕಾಗಿ ಹೀಗೆ ಮಾಡಿಕೊಂಡ ಅನ್ನೋದು ನಮಗೆ ಗೊತ್ತಿಲ್ಲ. ಅವನಿಗೆ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಹೇಳಿದ್ದರು.
ಈ ಮಧ್ಯೆ ಕಳೆದ ವಾರ ಯಾವುದೇ ನಿಖರವಾದ ಕಾರಣವಿಲ್ಲದೆ ಆತ್ಮಹತ್ಯೆಗೆ ಶರಣಾಗಿದ್ದ ವಿದ್ಯಾರ್ಥಿ ತುಷಾರ್ ಮೊಬೈಲ್‌ನಲ್ಲಿ ಬ್ಲೂ ವೇಲ್ ಗೇಮ್ ಆಪ್ ಇದ್ದದ್ದು ಖಚಿತವಾಗಿದೆ ಎನ್ನಲಾಗಿದೆ. ಈ ಬಗ್ಗೆ ಆತನ ಸ್ನೇಹಿತರು ಮಾಧ್ಯಮದವರಿಗೆ ಕರೆ ಮಾಡಿ ತಿಳಿಸಿದ್ದರು. ಆದರೆ ಮೃತ ತುಷಾರ್ ಪೋಷಕರಿಗೆ ಮಾಹಿತಿ ಕೇಳಿದಾಗ ಈ ಬಗ್ಗೆ ಗೊತ್ತಿಲ್ಲವೆಂದು ಪ್ರತಿಕ್ರಿಯಿಸಿದ್ದಾರೆ.
ಆದರೂ ಮಗನ ಸಾವು ಹೇಗಾಯಿತು, ಇದಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸುವಂತೆ ಇಂದು ಮೇಟಗಳ್ಳಿ ಠಾಣೆಗೆ ಪೋಷಕರು ದೂರು ನೀಡಿದ್ದಾರೆ.
ಅಪಾಯಕಾರಿ ಗೇಮ್ ಬ್ಲೂವೇಲ್ ಹುಡುಕುವುದರಲ್ಲಿ ಮೈಸೂರು ಮೊದಲ ಸ್ಥಾನದಲ್ಲಿದೆ ಎಂಬ ಮಾಹಿತಿ ಹೊರಬಿದ್ದ ತಕ್ಷಣ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಮೂಲಕ ಎಲ್ಲ ಶಾಲೆಗಳಿಗೂ ಈ ಗೇಮ್ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸ ಆರಂಭಿಸಬೇಕೆಂದು ಸುತ್ತೋಲೆ ಹೊರಡಿಸಿತ್ತು.
ಏನೇ ಆಗಲಿ ಇಂತಹ ಅಪಾಯಕಾರಿ ಗೇಮ್‌ನಿಂದ ಹಲವು ಅನಾಹುತಗಳು ಸಂಭವಿಸುತ್ತಿರುವ ಬಗ್ಗೆ ಎಲ್ಲ ಮಾಧ್ಯಗಳಲ್ಲಿ ಸುದ್ದಿಗಳು ಪ್ರಸಾರವಾಗುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಯುವ ಜನತೆ ಎಚ್ಚೆತ್ತುಕೊಳ್ಳಬೇಕಿದೆ.