ಪೊಲೀಸರಂತೆ ನಟಿಸಿ ಮಹಿಳೆಯ ಚಿನ್ನದ ಸರ ಕಸಿದ ಖದೀಮರು
ಮೈಸೂರು,ಸೆ.12: ಪೊಲೀಸರಂತೆ ನಟಿಸಿ ಮಹಿಳೆಯೋರ್ವರಿಂದ ಚಿನ್ನದ ಸರ ಕಸಿದು ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಸರಸ್ವತಿಪುರಂ ನಿವಾಸಿ ನಾಗರತ್ನಮ್ಮ (65) ಸರ ಕಳೆದುಕೊಂಡವರು. ದೇವರ ದರ್ಶನಕ್ಕೆಂದು ಕೃಷ್ಣಧಾಮಕ್ಕೆ ಹೋಗಲು ಬಂದ ಸಂದರ್ಭದಲ್ಲಿ ದೇವಸ್ಥಾನದ ಬಳಿ ನಿಂತಿದ್ದ ಇಬ್ಬರು ಖದೀಮರು “ಅಮ್ಮ ನಾವು ಪೊಲೀಸ್. ಒಳಗಡೆ ತುಂಬಾ ಜನರಿದ್ದಾರೆ. ನಿಮ್ಮ ಬಂಗಾರಗಳನ್ನು ಇಲ್ಲೇ ಕೊಟ್ಟು ಹೋಗಿ. ಇಲ್ಲವಾದರೆ ಚಿನ್ನಾಭರಣ ಕಳವಾದೀತು” ಎಂದಿದ್ದಾರೆ. ಈ ಮಾತನ್ನು ನಂಬುವಂತೆ ದುಷ್ಕರ್ಮಿಯ ಜೊತೆಯಿದ್ದ ಓರ್ವ ತನ್ನ ಬಳಿಯಿದ್ದ ಸರವನ್ನೂ ಇನ್ನೊಬ್ಬನಿಗೆ ನೀಡಿ ನಾಟಕವಾಡಿದ್ದಾನೆ. ಇದು ಸತ್ಯವೆಂದು ನಂಬಿದ ವೃದ್ಧೆ ನಾಗರತ್ನಮ್ಮ ತಮ್ಮ ಕತ್ತಿನಲ್ಲಿ ಹಾಕಿಕೊಂಡಿದ್ದ 32 ಗ್ರಾಂ ತೂಕದ ಸರ ಹಾಗೂ ಬಳೆ ನೀಡಿದ್ದಾರೆ.
ನಂತರ ಮಹಿಳೆ ದೇವರ ದರ್ಶನ ಪಡೆದು ವಾಪಸ್ ಬಂದು ಚಿನ್ನದ ಸರ ಹಾಗೂ ಬಳೆ ಪಡೆಯಲು ಸ್ಥಳಕ್ಕೆ ಹೋದಾಗ ಖದೀಮರು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಘಟನೆಯಿಂದ ನೊಂದ ಮಹಿಳೆ ಸರಸ್ವತಿಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಸರಸ್ವತಿಪುರಂ ಠಾಣೆಯ ಇನ್ಸ್‍ಪೆಕ್ಟರ್ ನಾಗೇಗೌಡ, ಸಬ್ ಇನ್ಸ್‍ಪೆಕ್ಟರ್ ಮೋಹನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.