×
Ad

ಮಹತ್ವದ ಸುಳಿವು ಲಭ್ಯ; ಹಂತಕರು ಶೀಘ್ರ ಪರಪ್ಪನ ಅಗ್ರಹಾರಕ್ಕೆ: ಗೃಹ ಸಚಿವ ರಾಮಲಿಂಗಾರೆಡ್ಡಿ

Update: 2017-09-12 21:29 IST

ಬೆಂಗಳೂರು, ಸೆ.12: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮಾಡಿದ ಹಂತಕರು ಶೀಘ್ರದಲ್ಲಿ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಸೇರಲಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಗರದ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದ ಹಂತಕರ ಬಗ್ಗೆ ಮಹತ್ವದ ಸುಳಿವು ಲಭ್ಯವಾಗಿದ್ದು, ಶೀಘ್ರದಲ್ಲೆ ಹಂತಕರನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗುತ್ತದೆ. ಹಂತಕರ ಪತ್ತೆಗಾಗಿ ಕಾರ್ಯಚರಣೆ ಚುರುಕುಗೊಳಿಸಿರುವ ಎಸ್‌ಐಟಿ ತಂಡ, ಆದಷ್ಟು ಬೇಗ ಹಂತಕರನ್ನು ಬಂಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

4ಜಿ ಜಾಮರ್ ಅಳವಡಿಕೆ: ಡಿಐಜಿ ರೂಪಾ ಮಾಡಿದ ಆರೋಪ ಗಮನಿಸಿದರೆ ಪರಪ್ಪನ ಅಗ್ರಹಾರ ಜೈಲಿನ ಸದ್ಯ ಪರಿಸ್ಥಿತಿ ಬಹಳ ಸುಧಾರಿಸಿದೆ. ಯಾವುದೇ ರೀತಿಯ ಅಸಮಾನತೆಗಳು ಜೈಲಿನಲ್ಲಿ ನಡೆಯುತ್ತಿಲ್ಲ. ಅಲ್ಲದೆ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಶಶಿಕಲಾ ಅವರಿಗೆ ಯಾವುದೇ ರೀತಿಯ ಐಶಾರಾಮಿ ಸೌಲಭ್ಯ ನೀಡಲಿಲ್ಲ. ಹಿಂದೆಯಿದ್ದ 2ಜಿ ಜಾಮರ್ ಅನ್ನುನ್ನು 4ಜಿ ಜಾಮರ್ ಮಾಡಲಾಗಿದೆ. ಜೈಲು ಆಸ್ಪತ್ರೆಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸಲಾಗುವುದು ಎಂದು ವಿವರಿಸಿದರು.

ರೂಪಾ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ತನಿಖೆ ನಡೆಸುತ್ತಿದ್ದಾರೆ. ಸದ್ಯ ವಿನಯ್ ಕುಮಾರ್ ಅವರಿಗೆ ಹೃದಯಾಘಾತವಾಗಿದ್ದು, ಈ ಹಿನ್ನೆಲೆಯಲ್ಲಿ ಅವರು ಇನ್ನೂ ವರದಿ ನೀಡಲಿಲ್ಲ. ಈ ಬಗ್ಗೆ ತನಿಖೆ ನಡೆಸಿದ ಬಳಿಕ ಪ್ರಕರಣದಲ್ಲಿ ಏನೆಲ್ಲಾ ನಡೆದಿದೆ ಎಂಬ ಬಗ್ಗೆ ಬಹಿರಂಗಗೊಳ್ಳಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News