ನ.24-26: ಮೈಸೂರಿನಲ್ಲಿ 83ನೆ ಕನ್ನಡ ಸಾಹಿತ್ಯ ಸಮ್ಮೇಳನ
ಬೆಂಗಳೂರು, ಸೆ. 12: 83ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನ.24ರಿಂದ 26ರವರೆಗೆ ಮೈಸೂರಿನಲ್ಲಿ ಆಯೋಜಿಸಲು ಕನ್ನಡ ಸಾಹಿತ್ಯ ಪರಿಷತ್ ನಿರ್ಧರಿಸಿದೆ.
ಮಂಗಳವಾರ ನಗರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್ ಮಾತನಾಡಿ, ಮೂರು ದಿನ ನಡೆಯುವ ಸಮ್ಮೇಳನಕ್ಕೆ ಮೈಸೂರು ಅರಮನೆ ಆವರಣ, ಮಹಾರಾಜ ಕಾಲೇಜು ಮೈದಾನ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರದ ಸ್ಥಳವನ್ನು ಗುರುತಿಸಲಾಗಿದೆ. ಇವುಗಳಲ್ಲಿ ಯಾವುದಾದರೂ ಒಂದು ಸ್ಥಳವನ್ನು ಶೀಘ್ರದಲ್ಲೆ ಅಂತಿಮಗೊಳಿಸಲಾಗುವುದು ಎಂದರು.
ಶೀಘ್ರದಲ್ಲೇ ಸಮ್ಮೇಳನಾಧ್ಯಕ್ಷರ ಹೆಸರು ಪ್ರಕಟ: 83ನೆ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಹೆಸರನ್ನು ಇನ್ನು ಅಂತಿಮಗೊಳಿಸಿಲ್ಲ. ರಾಜ್ಯದಲ್ಲಿ ಈ ಸ್ಥಾನಕ್ಕೆ ಹಲವು ಮಂದಿ ಇದ್ದಾರೆ. ಸಮ್ಮೇಳನಾಧ್ಯಕ್ಷರ ಆಯ್ಕೆ ಕುರಿತು ಕಾರ್ಯಕಾರಿ ಸಮಿತಿಯಲ್ಲಿ ಒಮ್ಮತದಿಂದ ಶೀಘ್ರದಲ್ಲೇ ನಿರ್ಣಯ ಕೈಗೊಳ್ಳಲಾಗುತ್ತದೆ. ಜಿಲ್ಲೆಯ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಸ್ವಾಗತ ಸಮಿತಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಮ್ಮೇಳನದ ಕುರಿತು ಜನರು ನೀಡುವ ಸಲಹೆಯನ್ನು ಪರಿಗಣಿಸಲಾಗುತ್ತದೆ ಎಂದು ಮನು ಬಳಿಗಾರ್ ಭರವಸೆ ನೀಡಿದರು.
ಸಮಿತಿ ರಚನೆ: ಸಮ್ಮೇಳನದಲ್ಲಿ ನಡೆಯುವ ವಿಚಾರ ಗೋಷ್ಠಿ, ಕಾರ್ಯಕ್ರಮದ ರೂಪು ರೇಷೆಗಳನ್ನು ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್ ಅಧ್ಯಕ್ಷತೆಯಲ್ಲಿ ಐವರು ಸದಸ್ಯರು ತಯಾರಿಸಲಿದ್ದಾರೆ. ಸಮಿತಿಯಲ್ಲಿ ಕವಿಗಳಾದ ಡಾ.ಮುಡ್ನಾಕೂಡು ಚಿನ್ನಸ್ವಾಮಿ, ಡಾ.ಎಚ್.ಎಸ್.ವೆಂಕಟೇಶಮೂರ್ತಿ, ಕಾ.ತ.ಚಿಕ್ಕಣ್ಣ, ಡಾ.ಕೆ.ವೈ. ನಾರಾಯಣಸ್ವಾಮಿ ಹಾಗೂ ಪ್ರೊ.ಎಂ.ಎಸ್.ಆಶಾದೇವಿ ಇದ್ದಾರೆ.
2ಲಕ್ಷ ಜನ ಸೇರುವ ನಿರೀಕ್ಷೆ: ರಾಯಚೂರಿನಲ್ಲಿ ನಡೆದ 82ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 1.50ಲಕ್ಷ ಜನ ಸೇರಿದ್ದರು. ಮೈಸೂರು ಸಾಂಸ್ಕೃತಿಕ ಕ್ಷೇತ್ರವಾಗಿರುವುದರಿಂದ ಸಹಜವಾಗಿಯೇ ಅಧಿಕ ಜನ ಸೇರುವ ವಿಶ್ವಾಸವಿದೆ. ಸುಮಾರು 2ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಊಟದ ವ್ಯವಸ್ಥೆಗೆ ಯಾವುದೇ ರೀತಿಯ ಸಮಸ್ಯೆ ಎದುರಾಗದಂತೆ ಯೋಜನೆ ರೂಪಿಸಲಾಗುತ್ತದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಕೋಶಾಧ್ಯಕ್ಷ ಮಲ್ಲಿಕಾರ್ಜುನಪ್ಪ, ಗೌರವ ಕಾರ್ಯದರ್ಶಿ ಕೆ.ಎಸ್.ನಾಗರಾಜ್, ಸಂಚಾಲಕ ವಸಂತ್ ಕುಮಾರ್ ಸೇರಿದಂತೆ ಇತರರು ಇದ್ದರು.