ರೋಟರಿ ಸಂಸ್ಥೆ ಸಾಮಾಜಿಕ ಬದ್ದತೆ ಹೊಂದಿದೆ : ಎಸ್.ಪಿ.ಎಂ
ತುಮಕೂರು,ಸೆ.12:ಸಾಮಾಜಿಕ ಬದ್ಧತೆಯೊಂದಿಗೆ ಸಮಾಜಕ್ಕೆ ಕೊಡುಗೆ ನೀಡಬೇಕೆಂಬ ಹಂಬಲವನ್ನು ರೋಟರಿ ಸಂಸ್ಥೆ ಹೊಂದಿದೆ ಎಂದು ಸಂಸದ ಮುದ್ದಹನುಮೇಗೌಡ ಹೇಳಿದ್ದಾರೆ.
ತುಮಕೂರು ತಾಲೂಕು ಬೆಳ್ಳಾವಿಯಲ್ಲಿ ರೋಟರಿ ತುಮಕೂರು, ರೀಡ್‍ಬುಕ್ ಫೌಂಡೇಶನ್, ಪದವಿಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಜೀವನ್ಮುಖಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೋಟರಿ ಸಂಸ್ಥೆ ಉಳ್ಳವರ ಸಂಸ್ಥೆಯಾಗಿದ್ದರೂ,ಸಮಾಜಮುಖಿ ಚಿಂತನೆಯಿಂದಾಗಿ ವಿಶ್ವದೆಲ್ಲೆಡೆ ಹರಡಿದೆ, ನಾನು ವಕೀಲನಾಗಿದ್ದ ರೋಟರಿ ಸದಸ್ಯನಾಗಿದ್ದೆ ಎಂದು ಹೇಳಿದರು.
ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ಧ್ಯೇಯದೊಂದಿಗೆ ರೋಟರಿ ಸಂಸ್ಥೆ,ರೀಡ್‍ಬುಕ್ ಫೌಂಡೇಶನ್ ಪ್ರಯತ್ನ ನಡೆಸುತ್ತಿರುವುದು ಉತ್ತಮವಾಗಿದ್ದು, ಓದಿನಿಂದಾಗಿ ಮಕ್ಕಳಲ್ಲಿ ಓದುವ ಆಸಕ್ತಿ ಹೆಚ್ಚಿಸುವುದರೊಂದಿಗೆ ಮಕ್ಕಳಲ್ಲಿ ಕೌಶಲ್ಯವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ, ಸಿಎಂ ಸಿದ್ದರಾಮಯ್ಯರವರ ಕನಸಿನ ಕೌಶಲ್ಯ ಕರ್ನಾಟಕಕ್ಕೆ ಪೂರಕವಾಗಿ ರೋಟರಿ ಸಂಸ್ಥೆ ಕಾರ್ಯನಿರ್ವ ಹಿಸುತ್ತಿರುವುದು ಶ್ಲಾಘನೀಯವೆಂದರು.
ಸ್ವಾಮಿ ವಿವೇಕಾನಂದರ ಸ್ಫೂರ್ತಿಯೊಂದಿಗೆ ನವ ಕರ್ನಾಟಕವನ್ನು ನಿರ್ಮಿಸುವ ಸದಾಶಯದೊಂದಿಗೆ ಕೌಶಲ್ಯಾಭಿವೃದ್ಧಿ ನಿಗಮ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ, ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯೋನ್ಮುಖರಾಗಬೇಕಿದೆ ಎಂದು ಮುರುಳೀಧರ ಹಾಲಪ್ಪ ತಿಳಿಸಿದರು.
ಶ್ರೀ ವಿರೇಶಾನಂದ ಸರಸ್ವತಿ ಸ್ವಾಮಿಜಿ ಮಾತನಾಡಿ,ವಿದ್ಯಾರ್ಥಿಗಳು ಶಿಸ್ತು, ಸಂಯಮವನ್ನು ರೂಢಿಸಿಕೊಂಡು,ಉತ್ತಮ ವಿದ್ಯಾಭ್ಯಾಸವನ್ನು ಪಡೆದುಕೊಳ್ಳಬೇಕು,ಏಕಾಗ್ರತೆ ಮತ್ತು ಕಠಿಣ ಪರಿಶ್ರಮ ದಿಂದ ಮಾತ್ರ ಯಶಸ್ಸು ಸಿಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಸಸಿ ನೆಡುವ ಮೂಲಕ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪುಸ್ತಕ, ತಟ್ಟೆ ಹಾಗೂ ವಿದ್ಯಾರ್ಥಿಗಳಲ್ಲಿ ಸ್ವಚ್ಛತೆಯ ಅರಿವು ಮೂಡಿಸಲು ಡಸ್ಟ್‍ಬಿನ್, ನೀರು ಉಳಿಸಲು ಸಿಂಟೆಕ್ಸ್ ಟ್ಯಾಂಕ್ ವಿತರಣೆ ಮಾಡಲಾಯಿತು.
ವೇದಿಕೆಯಲ್ಲಿ ಕಾರದಮಠದ ಶ್ರೀಕಾರದ ವೀರಬಸವ ಸ್ವಾಮೀಜಿಗಳು, ರೋಟರಿ ಜಿಲ್ಲಾ ಗೌವರ್ನರ್ ಆಶಾ ಪ್ರಸನ್ನಕುಮಾರ್,ರೋಟರಿ ಅಧ್ಯಕ್ಷ ಡಾ.ಎಸ್.ಎಲ್.ಕಾಡದೇವರಮಠ,ರೋಟರಿ ಪದಾಧಿಕಾರಿಗಳಾದ ಜಿ.ಎನ್.ಮಹೇಶ್, ಎಂ.ಎಸ್.ಉಮೇಶ್, ಮಲ್ಲೇಶಯ್ಯ, ಎಂ.ಎಸ್.ಪ್ರಕಾಶ್, ಪ್ರಸನ್ನಕುಮಾರ್ ಮತ್ತಿತರರು ಉಪಸ್ಥಿತರಿದ್ದರು.