ನಾಪೋಕ್ಲು ಗ್ರಾಮ ವ್ಯಾಪ್ತಿಯಲ್ಲಿ ಲಘು ಭೂಕಂಪನ
ಮಡಿಕೇರಿ, ಸೆ.12 :ನಾಪೋಕ್ಲುವಿನ ಸುತ್ತಮುತ್ತಲ ಗ್ರಾಮಗಳಲ್ಲಿ ಮಂಗಳವಾರ ಬೆಳಗ್ಗೆ 7.35 ಮತ್ತು 7.38 ಗಂಟೆಗೆ ಸುಮಾರಿಗೆ 6 ನಿಮಿಷಗಳ ಅವಧಿಯಲ್ಲಿ ಭಾರೀ ಸದ್ದಿನೊಂದಿಗೆ 2 ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ನಾಪೋಕ್ಲು ಸುತ್ತಮುತ್ತಲಿನ ಸುಮಾರು 10 ಕಿ.ಲೋ. ವ್ಯಾಪ್ತಿಯ ಬಲ್ಲಮಾವಟ್ಟಿ, ಎಮ್ಮೆಮಾಡು, ಚೆರಿಯ ಪರಂಬು, ಬೆಟ್ಟಗೇರಿ, ಕಲ್ಲುಮೊಟ್ಟೆ, ನಾಪೋಕ್ಲು ಇಂದಿರಾನಗರ ಸೇರಿದಂತೆ ಇನ್ನಿತರೆ ಪ್ರದೇಶದಲ್ಲಿ ಭೂಮಿ ನಡುಗಿದೆ.
ಏಕಾಏಕಿ ಎದುರಾದ ಈ ಭಯದ ವಾತಾವರಣದಿಂದ ಬೆಚ್ಚಿಬಿದ್ದ ಜನ ಮನೆಗಳಿಂದ ಹೊರಗೆ ಓಡಿ ಬಂದ ಘಟನೆಯೂ ನಡೆಯಿತು. ಕೆಲವು ಮನೆಗಳಲ್ಲಿ ಪಾತ್ರೆಗಳು ಅಲುಗಾಡಿದ ಸದ್ದು ಕೇಳಿದರೆ, ಕೆಲವರಿಗೆ ಮನೆಗಳ ಛಾವಣಿಯೇ ಹಾರಿಹೋದಂತೆ ಅನುಭವವಾಗಿದೆ. ನಾಪೋಕ್ಲು ಸುತ್ತಮುತ್ತ ಕಂಡು ಬಂದ ಕಂಪನದ ಬಗ್ಗೆ ಬಲ್ಲಮಾವಟ್ಟಿ ಗ್ರಾಮ ಪಂಚಾಯತ್ ಸದಸ್ಯ ಹೊಸೊಕ್ಲು ಮುತ್ತಪ್ಪ, ಎಮ್ಮೆಮಾಡುವಿನ ರಫೀಕ್, ಚೇರಿಯಪರಂಬುವಿನ ಉಸ್ಮಾನ್, ಬೆಟ್ಟಗೇರಿ ಗ್ರಾ.ಪಂ ಮಾಜಿ ಅಧ್ಯಕ್ಷ ಬಿ.ಎ.ರಾಮಣ್ಣ, ಕಲ್ಲುಮೊಟ್ಟೆ ನಿವಾಸಿ ವಸಂತ್, ಸ್ಥಳೀಯ ಇಂದಿರಾ ನಗರದ ಡೇರಿನಾ ಲೂಯಿಸ್, ನಾಪೋಕ್ಲುವಿನ ಎಂ.ಎ.ಮನ್ಸೂರ್ ಅಲಿ ಅವರುಗಳು ಖಾತ್ರಿ ಪಡಿಸಿದ್ದಾರೆ.
ಬೆಳಗ್ಗಿನ ಸಮಯ 7.35 ಮತ್ತು 7.38ರ ಸುಮಾರಿಗೆ ಏಕಾಏಕಿ ಭಾರಿ ಸದ್ದು ಕೇಳಿ ಬಂದಿತ್ತು. ಅದರ ಬೆನ್ನಲ್ಲೆ ಭೂಮಿ ಕಂಪಿಸಿದ ಅನುಭವವೂ ಆಯಿತು. ಏನೋ ಅನಾಹುತ ಸಂಭವಿಸಬಹುದೆಂಬ ಭೀತಿಯಿಂದ ಮನೆಯಿಂದ ಹೊರಗೆ ಓಡಿರುವುದಾಗಿ ತಿಳಿಸಿದರು.
ಇದೇ ಮಾದರಿ ಕಳೆದ ಕೆಲವು ವರ್ಷಗಳ ಹಿಂದೆ ಜಿಲ್ಲಾ ಕೇಂದ್ರ ಮಡಿಕೇರಿ ವ್ಯಾಪ್ತಿಯಲ್ಲಿ ಭಾರೀ ಸದ್ದಿನೊಂದಿಗೆ ಭೂಕಂಪನದ ಅನುಭವವಾಗಿತ್ತು. ಆ ಸಂದರ್ಭ ಕೆಲವು ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದರೆ, ಕೆಲವೆಡೆ ಪಾತ್ರೆಗಳು ನೆಲಕ್ಕುರುಳಿದ ಬಗ್ಗೆ ವರದಿಯಾಗಿತ್ತು.