ಗೌರಿ ಲಂಕೇಶ್ ಹತ್ಯೆ ಪ್ರಧಾನಿ ಮೌನವೇಕೇ?

Update: 2017-09-13 03:43 GMT

ನಾಡಿನ ಧೀಮಂತ ಪತ್ರಕರ್ತೆ, ಜನಪರ ಹೋರಾಟಗಾರ್ತಿ ಗೌರಿ ಲಂಕೇಶ್‌ರ ಹತ್ಯೆಯ ವಿರುದ್ಧ ದೇಶದ ಎಲ್ಲೆಡೆ ಪ್ರತಿಭಟನೆಯ ಅಲೆಗಳು ಎದ್ದಿವೆ. ಭಾರತದಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಲ್ಲಿ ಈ ಕ್ರೂರ ಹತ್ಯೆಯನ್ನು ಖಂಡಿಸಿ ಮಾನವ ಹಕ್ಕು ಹೋರಾಟಗಾರರು ಬೀದಿಗಿಳಿದಿದ್ದಾರೆ. ಅಮೆರಿಕ, ಇಂಗ್ಲೆಂಡ್, ಕೆನಡಾ, ಆಸ್ಟ್ರೇಲಿಯ, ಇಟಲಿ ಹೀಗೆ ಜಗತ್ತಿನ ಎಲ್ಲ ದೇಶಗಳಲ್ಲಿ ಈ ಪೈಶಾಚಿಕ ಹತ್ಯೆಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಫ್ಯಾಶಿಸ್ಟ್ ಶಕ್ತಿಗಳಿಂದ ಕೊಲ್ಲಲ್ಪಟ್ಟ ಗೌರಿ ಲಂಕೇಶ್‌ರ ಪರವಾಗಿ ವಿಶ್ವಸಂಸ್ಥೆಯೂ ದನಿ ಎತ್ತಿದೆ. ಗೌರಿ ಲಂಕೇಶ್ ಸಂಪ್ರದಾಯವಾದಿಗಳು ಹಾಗೂ ದ್ವೇಷ ಸಾಧಕರ ವಿರುದ್ಧ ದಣಿವರಿಯದೆ ಹೋರಾಡುತ್ತಿದ್ದರೆಂದು ವಿಶ್ವಸಂಸ್ಥೆಯ ಮಾನವ ಹಕ್ಕು ಸಂಸ್ಥೆಯ ಹೈಕಮಿಷನರ್ ಝೈದಿ ರಾಅದ್ ಅಲ್ ಹುಸೈನ್ ಬಣ್ಣಿಸಿದ್ದಾರೆ.

ಜಿನೇವಾದಲ್ಲಿ ಆರಂಭವಾದ ಮಾನವ ಹಕ್ಕುಗಳ ಸಮಿತಿಯಲ್ಲಿ ಮಾತನಾಡಿದ ಅವರು, ಮೂಲಭೂತ ಹಕ್ಕುಗಳ ಪರವಾಗಿ ಮಾತನಾಡುವವರನ್ನು ಬೆದರಿಸಲಾಗುತ್ತಿದೆ. ಗೌರಿ ಲಂಕೇಶ್‌ರ ಹತ್ಯೆ ಖಂಡಿಸಿ ಭಾರತದ ಹನ್ನೆರಡು ರ್ಯಾಲಿಗಳನ್ನು ಕಂಡು ನನ್ನ ಹೃದಯ ತುಂಬಿ ಬಂದಿದೆ ಎಂದು ಅವರು ಹೇಳಿದ್ದಾರೆ. ಈ ಹತ್ಯೆಯ ವಿರುದ್ಧ ಸೈದ್ಧಾಂತಿಕ ಭಿನ್ನತೆಯನ್ನು ಕೂಡಾ ಮರೆತು ಅನೇಕ ಕಡೆ ಪ್ರತಿಭಟನೆಗಳು ನಡೆದಿವೆ. ಒಬ್ಬ ಒಂಟಿ ಹೆಣ್ಣುಮಗಳ ಹತ್ಯೆಗೆ ಇಡೀ ಭಾರತ ಮಾತ್ರವಲ್ಲ ಜಗತ್ತೇ ಮರುಗುತ್ತಿದೆ. ಆದರೆ, ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯ ಹೃದಯ ಕರಗಿಲ್ಲ. ಯಾರಾದರು ಕೆಮ್ಮಿದರೂ ಟ್ವೀಟ್ ಮಾಡುವ, ಅಪ್ರಸ್ತುತ ವಿಷಯಗಳ ಬಗ್ಗೆ ಮನ್ ಕಿ ಬಾತ್‌ನಲ್ಲಿ ಮಾತನಾಡುವ ಅವರು, ಗೌರಿ ಲಂಕೇಶ್ ಹತ್ಯೆಯ ಬಗ್ಗೆ ಕನಿಷ್ಠ ಸಂತಾಪವನ್ನು ತೋರಿಸುವ ಸೌಜನ್ಯವನ್ನೂ ವ್ಯಕ್ತಪಡಿಸಿಲ್ಲ. ಗೌರಿ ಲಂಕೇಶ್ ದೇಶದ ಹೆಸರಾಂತ ಪತ್ರಕರ್ತರ ಸಾಲಿಗೆ ಸೇರಿದವರು. ತಂದೆಯ ಸಾವಿನ ನಂತರ ಕರ್ನಾಟಕಕ್ಕೆ ಬಂದ ಅವರು ಕೆಲ ಕಾಲ ತಂದೆಯ ಪತ್ರಿಕೆಯ ಹೊಣೆಹೊತ್ತು ಮುನ್ನಡೆಸಿದರು.

ಆನಂತರ ತಮ್ಮದೇ ಪತ್ರಿಕೆಯನ್ನು ಪ್ರಾರಂಭಿಸಿದರು. ಪತ್ರಿಕೆಯ ಜೊತೆಗೆ ಮಾನವ ಹಕ್ಕುಗಳ ಬಗ್ಗೆ, ಕೋಮು ಸೌಹಾರ್ದದ ಬಗ್ಗೆ ಮತ್ತು ದಲಿತರ ನೋವು, ಸಂಕಟಗಳ ಬಗ್ಗೆ ನಡೆಯುತ್ತಿದ್ದ ಚಳವಳಿಗಳಲ್ಲಿ ಅವರು ಪಾಲ್ಗೊಳ್ಳುತ್ತಿದ್ದರು. ಅವರ ಹತ್ಯೆ ಜಾಗತಿಕ ಮಟ್ಟದಲ್ಲಿ ಸುದ್ದಿಯಾಯಿತು. ಇಂಗ್ಲಿಷ್ ಟಿವಿ ಚಾನೆಲ್‌ಗಳು ಕೂಡಾ ಈ ಹತ್ಯೆಯ ವಿವರಗಳನ್ನು ಪ್ರಸಾರ ಮಾಡಿದವು. ಇದು ಯಾವುದೂ ಪ್ರಧಾನಮಂತ್ರಿಗಳ ಗಮನಕ್ಕೆ ಬಂದಂತೆ ಕಾಣುವುದಿಲ್ಲ. ಗೌರಿ ಲಂಕೇಶ್‌ರ ಹತ್ಯೆಯ ವಿರುದ್ಧ ಮಂಗಳವಾರ ಬೆಂಗಳೂರಿನಲ್ಲಿ ನಡೆದ ರ್ಯಾಲಿಯಲ್ಲಿ ಬೃಹತ್ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.

ಈ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ ನಾಯಕ ಸೀತಾರಾಮ್ ಯೆಚೂರಿ, ಪರಿಸರ ಹೋರಾಟಗಾರ್ತಿ ಮೇಧಾಪಾಟ್ಕರ್, ತೀಸ್ತಾ ಸೆಟಲ್ವಾಡ್, ಸ್ವಾಮಿ ಅಗ್ನಿವೇಶ್, ಪಿ.ಸಾಯಿನಾಥ್, ಜಿಗ್ನೇಶ್ ಮೆವಾನಿ, ಪ್ರಶಾಂತ್ ಭೂಷಣ್ ದಿಲ್ಲಿಯಿಂದ ಬಂದಿದ್ದರು. ಇವರು ಮಾತ್ರವಲ್ಲದೆ, ಕರ್ನಾಟಕದ ಪ್ರಮುಖ ಮಠಾಧೀಶರಾದ ನಿಡುಮಾಮಿಡಿ ಸ್ವಾಮಿಗಳು, ಚಿತ್ರದುರ್ಗದ ಮುರುಘಾಮಠದ ಶರಣರು, ಕೂಡಲಸಂಗಮದ ಪಂಚಮಶಾಲಿ ಪೀಠದ ಜಯಮೃತ್ಯುಂಜಯ ಸ್ವಾಮಿಗಳು ಹಾಗೂ ಮುಡರಂಗಿ ನಿಜಗುಣಾನಂದ ಶ್ರೀಗಳು ಮುಂತಾದವರು ಈ ರ್ಯಾಲಿಯಲ್ಲಿ ಪಾಲ್ಗೊಂಡು ಗೌರಿ ಲಂಕೇಶ್‌ರ ಹತ್ಯೆಯ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ. ಈ ನಡುವೆ ದೇಶದ ಹಿರಿಯ ಲೇಖಕ ರಾಮಚಂದ್ರ ಗುಹಾ ಗೌರಿ ಹತ್ಯೆಯಲ್ಲಿ ಸಂಘಪರಿವಾರದ ಕೈವಾಡವಿದೆಯೆಂದು ಆರೋಪ ಮಾಡಿದ್ದಾರೆ. ಈ ಆರೋಪದ ಬಗ್ಗೆ ಕೆರಳಿ ಕೆಂಡವಾಗಿರುವ ಬಿಜೆಪಿ ನಾಯಕರು ರಾಮಚಂದ್ರ ಗುಹಾರಿಗೆ ವಕೀಲರ ಮೂಲಕ ನೋಟಿಸ್ ನೀಡಿದ್ದಾರೆ. ಗೌರಿ ಲಂಕೇಶ್ ಹತ್ಯೆ ಪ್ರಕರಣ ತನಿಖೆಯ ಹಂತದಲ್ಲಿರುವಾಗ ಸಂಘಪರಿವಾರದ ವಿರುದ್ಧ ಆರೋಪ ಮಾಡಿರುವುದು ಸರಿಯಲ್ಲ ಎಂದು ರಾಮಚಂದ್ರ ಗುಹಾರಿಗೆ ನೀಡಿರುವ ನೋಟಿಸ್‌ನಲ್ಲಿ ಬಿಜೆಪಿ ನಾಯಕರು ತಿಳಿಸಿದ್ದಾರೆ.

ಆದರೆ, ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದರ ತನಿಖೆಯ ಹಂತದಲ್ಲಿರುವ ಇದೇ ಗೌರಿ ಹತ್ಯೆಯ ಪ್ರಕಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿ, ಈ ಹತ್ಯೆಯಲ್ಲಿ ನಕ್ಸಲೀಯರ ಕೈವಾಡವಿದೆಯೆಂದು ಆರೋಪಿಸಿದ್ದಾರೆ. ತನಿಖೆಯ ಹಂತದಲ್ಲಿರುವ ಪ್ರಕರಣದ ಬಗ್ಗೆ ಕೇಂದ್ರ ಸಚಿವರು ಈ ರೀತಿ ಹೇಳಿಕೆ ನೀಡುವುದು ನ್ಯಾಯ ಸಮ್ಮತವೇ?

 ಗೌರಿ ಲಂಕೇಶ್ ಹತ್ಯೆ ನಡೆದ ದಿನವೇ ಶೃಂಗೇರಿಯ ಬಿಜೆಪಿ ಶಾಸಕ ಜೀವರಾಜ್ ಈ ಹತ್ಯೆಯ ಬಗ್ಗೆ ಮಾತನಾಡುತ್ತಾ, ಹಿಂದೂ ಧರ್ಮದ ಬಗ್ಗೆ ಗೌರಿ ಲಂಕೇಶ್ ಟೀಕೆ ಮಾಡಿರದಿದ್ದರೆ ಈ ರೀತಿ ಹತ್ಯೆಯಾಗುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದು ಕೂಡಾ ಖಂಡನೀಯವಲ್ಲವೇ? ಗೌರಿ ಲಂಕೇಶ್‌ರ ಹತ್ಯೆ ನಡೆಯುವ ಮೊದಲು ಧಾರವಾಡದಲ್ಲಿ ಖ್ಯಾತ ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆ ನಡೆಯಿತು. ಅದಕ್ಕಿಂತ ಮುನ್ನ ಮಹಾರಾಷ್ಟ್ರದ ಕಮ್ಯುನಿಸ್ಟ್ ನಾಯಕ ಗೋವಿಂದ ಪನ್ಸಾರೆ ಹತ್ಯೆ ನಡೆಯಿತು. ಪನ್ಸಾರೆ ಹತ್ಯೆ ನಡೆಯುವ ಎರಡು ವರ್ಷಗಳ ಮುಂಚೆ ಪುಣೆಯಲ್ಲಿ ಮಹಾರಾಷ್ಟ್ರದ ಮೂಢನಂಬಿಕೆಗಳ ವಿರುದ್ಧ ಹೋರಾಟಗಾರ ನರೇಂದ್ರ ದಾಭೋಲ್ಕರ್ ಹತ್ಯೆ ನಡೆಯಿತು. ಈ ಎಲ್ಲಾ ಹತ್ಯೆಗಳ ಬಗ್ಗೆ ಪರಾಮರ್ಶಿಸಿದಾಗ ಇದರ ಹಿಂದೆ ಒಂದೇ ಸಂಘಟನೆ ಇರಬಹುದೇ ಎಂಬ ಸಂಶಯವನ್ನು ಅನೇಕರು ವ್ಯಕ್ತಪಡಿಸಿದ್ದಾರೆ.

ಹತ್ಯೆಗಳ ಹಿಂದೆ ಯಾರೇ ಇರಲಿ ಗೌರಿ ಲಂಕೇಶ್ ಸೇರಿದಂತೆ ಈ ನಾಲ್ವರ ಹತ್ಯೆಗಳಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸಿದವರು ಯಾರು? ಅತ್ಯಂತ ಕೆಟ್ಟ ಭಾಷೆಯಲ್ಲಿ ಗೌರಿ ಲಂಕೇಶ್ ಅವರನ್ನು ನಿಂದಿಸಿದವರು ಯಾರು? ಎಂದು ಜಾಲಾಡುತ್ತಾ ಹೋದರೆ ಕೋಮುವಾದಿ ಶಕ್ತಿಗಳೇ ಇದರ ಹಿಂದಿರುವುದು ಸ್ಪಷ್ಟವಾಗುತ್ತದೆ. ಈ ದೇಶದ ಮೊದಲ ಭಯೋತ್ಪಾದಕ ಕೃತ್ಯವಾದ ಮಹಾತ್ಮಾ ಗಾಂಧಿ ಹತ್ಯೆ ಪ್ರಕರಣದಲ್ಲಿ ಅವರನ್ನು ಗುಂಡಿಕ್ಕಿ ಕೊಂದ ನಾಥೂರಾಂ ಗೋಡ್ಸೆಯನ್ನು ಸೃಷ್ಟಿಸಿದ ಸಿದ್ಧಾಂತವೇ ದಾಭೋಲ್ಕರ್, ಪನ್ಸಾರೆ, ಕಲಬುರ್ಗಿ ಮತ್ತು ಗೌರಿ ಲಂಕೇಶ್‌ರನ್ನು ಹತ್ಯೆ ಮಾಡಿದೆ. ಅಂತಲೇ ಈ ಹತ್ಯೆಯಲ್ಲಿ ಸಂಘಪರಿವಾರದ ಕೈವಾಡವಿದೆಯೆಂದು ಬೆಂಗಳೂರಿನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಸೀತಾರಾಂ ಯೆಚೂರಿ, ಸ್ವಾಮಿ ಅಗ್ನಿವೇಶ್, ಮೇಧಾ ಪಾಟ್ಕರ್ ಮತ್ತು ಪಿ. ಸಾಯಿನಾಥ್ ಆರೋಪಿಸಿದರು.

ಈ ಸಮಾವೇಶದಲ್ಲಿ ಯಾರಾದರೂ ಸಂಘಪರಿವಾರದ ವಿರುದ್ಧ ಆರೋಪ ಮಾಡಿದರೆ ಅವರ ವಿರುದ್ಧ ಮೊಕದ್ದಮೆ ದಾಖಲಿಸುವುದಾಗಿ ಬಿಜೆಪಿ ನಾಯಕರು ಮಾಡಿದ ಬೆದರಿಕೆಗೆ ಯಾರೂ ಸೊಪ್ಪು ಹಾಕಲಿಲ್ಲ. ಗೌರಿ ಲಂಕೇಶ್ ಹತ್ಯೆ ಪ್ರಕರಣದ ಬಗ್ಗೆ ಸಮಗ್ರವಾದ ತನಿಖೆಯನ್ನು ನಡೆಸಿ ಆರೋಪಿಗಳನ್ನು ಬಂಧಿಸಬೇಕೆಂದು ಬೆಂಗಳೂರಿನಲ್ಲಿ ನಡೆದ ಸಮಾವೇಶ ಒತ್ತಾಯಿಸಿದೆ. ಕಲಬುರ್ಗಿ ಅವರ ಹಂತಕರನ್ನು ಈ ವರೆಗೆ ಪತ್ತೆಹಚ್ಚಿ ಬಂಧಿಸದಿರುವ ಬಗ್ಗೆ ಈ ಸಮಾವೇಶ ಆಕ್ಷೇಪ ವ್ಯಕ್ತಪಡಿಸಿದೆ. ಪ್ರಧಾನಿ ಅವರ ಮೌನದ ಬಗ್ಗೆಯೂ ಸಮಾವೇಶದಲ್ಲಿ ಮಾತನಾಡಿದ ಅನೇಕರು ಟೀಕಿಸಿದರು. ಗೌರಿ ಲಂಕೇಶ್ ಹತ್ಯೆಗೆ ಸಂಭ್ರಮಿಸುವವರು ತಲೆಯಲ್ಲಿ ಮೆದುಳಿಲ್ಲದ ಅವಿವೇಕಿಗಳಾಗಿರಬಹುದು ಆದರೆ, ಈ ದೇಶದ 130 ಕೋಟಿ ಜನರನ್ನು ಪ್ರತಿನಿಧಿಸುವ ಪ್ರಧಾನಿ ನರೇಂದ್ರ ಮೋದಿ ಈ ಹತ್ಯೆಯ ಬಗ್ಗೆ ಮೌನ ತಾಳಿರುವುದೇಕೆ? ಹತ್ಯೆಯನ್ನು ಖಂಡಿಸುವುದು ಒತ್ತಟ್ಟಿಗಿರಲಿ ಗೌರಿ ಲಂಕೇಶ್ ಸಾವಿನ ಬಗ್ಗೆ ಕನಿಷ್ಠ ಸಂತಾಪವನ್ನಾದರೂ ಅವರು ವ್ಯಕ್ತಪಡಿಸಬೇಕಿತ್ತು.

ಪ್ರಧಾನಿ ಅವರ ಈ ಮೌನ ದೇಶಕ್ಕೆ ಯಾವ ಸಂದೇಶವನ್ನು ನೀಡುತ್ತದೆ? ಈ ದೇಶದಲ್ಲಿ ಏನು ಮಾಡಿದರೂ ನಡೆಯುತ್ತದೆ. ಯಾರನ್ನು ಕೊಂದರೂ ಯಾರೂ ಕೇಳುವುದಿಲ್ಲ ಎಂಬ ಅಸಹಾಯಕ ಭಾವನೆ ಜನರಲ್ಲಿ ಮೂಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಇನ್ನಾದರೂ ಮೌನ ಮುರಿದು ಗೌರಿ ಲಂಕೇಶ್ ಹತ್ಯೆಯ ಬಗ್ಗೆ ಮಾತನಾಡಲಿ. ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡ ದೇಶದಲ್ಲಿ ಇಂತಹ ಹತ್ಯೆಗಳಿಗೆ ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಹೇಳಲಿ. ಅಸಹಾಯಕ ಹೆಣ್ಣು ಮಗಳ ಸಾವಿಗೆ ಸಂತಾಪವನ್ನು ವ್ಯಕ್ತಪಡಿಸಲಿ. ಮೋದಿ ಸೋಮವಾರ ದಿಲ್ಲಿಯಲ್ಲಿ ನಡೆದ ಸಮ್ಮೇಳನವೊಂದರಲ್ಲಿ ಮಹಿಳೆಯರನ್ನು ಗೌರವಿಸದವರಿಗೆ ವಂದೇ ಮಾತರಂ ಹಾಡುವ ಅಧಿಕಾರವಿಲ್ಲ ಎಂದು ಹೇಳಿದ್ದಾರೆ. ಅದೇ ರೀತಿ ಮಹಿಳೆಯೊಬ್ಬರ ಹತ್ಯೆಯನ್ನು ಖಂಡಿಸದ ಅವರಿಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡುವ ಹಕ್ಕು ಇಲ್ಲ ಎಂದು ದೇಶದ ಪ್ರಜೆಗಳು ಹೇಳಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News