ಸೆ.15ರಂದು ವಿವಿಧ ಭೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮೂಡಿಗೆರೆಯಲ್ಲಿ ಪ್ರತಿಭಟನೆ
ಚಿಕ್ಕಮಗಳೂರು, ಸೆ.13: ಸಿಪಿಐ(ಎಂಎಲ್), ಕರ್ನಾಟಕ ರೈತ ಸಂಘ, ವಸತಿಗಾಗಿ ಹೋರಾಟ ವೇದಿಕೆ ನೇತೃತ್ವದಲ್ಲಿ ಸೆ.15 ರಂದು ಮೂಡಿಗೆರೆಯಲ್ಲಿ ಭೂರಹಿತ, ನಿವೇಶನ ರಹಿತ ಹಾಗೂ ವಸತಿ ರಹಿತ ಸಮಾವೇಶ ಹಾಗೂ ಪತ್ರಕರ್ತೆ ಗೌರಿ ಲಂಕೇಶ್‍ರವರ ಹತ್ಯೆಯನ್ನು ಖಂಡಿಸಿ ಬೃಹತ್ ಪ್ರತಿಭಟನಾ ರ್ಯಾಲಿ ಮತ್ತು ಬಹಿರಂಗ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ಮೂಡಿಗೆರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ರ್ಯಾಲಿ ನಡೆಸುವ ಮೂಲಕ ಅಡ್ಯಂತಾಯ ರಂಗಮಂದಿರದಲ್ಲಿ ಬಹಿರಂಗ ಸಭೆ ನಡೆಸಲಾಗುವುದು. ಶೇ.85 ರಷ್ಟು ಜನ ದುಡಿಯುವ ವರ್ಗಕ್ಕೆ ಸೇರಿದವರಾಗಿದ್ದು, ಸ್ವಂತ ಸೂರಿಲ್ಲದೆ ಕೂಲಿಲೈನ್‍ಗಳಲ್ಲಿ, ಬಾಡಿಗೆ ಮನೆಗಳಲ್ಲಿ ಪ್ರಾಣಿಗಳಂತೆ ಬದುಕುತ್ತಿದ್ದಾರೆ. ಸಣ್ಣ ಹಿಡುವಳಿದಾರರು, ದಲಿತ, ಆದಿವಾಸಿಗಳನ್ನು ವಿದೇಶಿ ಕಂಪನಿಗಳ ಸರ್ಕಾರೇತರ ಸಂಸ್ಥೆಗಳ ಸಲಹೆಯಂತೆ ಪ್ರಾಣಿ, ಪಕ್ಷಿಗಳ ಯೋಜನೆಯ ಹೆಸರಿನಲ್ಲಿ ಒಕ್ಕಲೆಬ್ಬಿಸಲಾಗುತ್ತಿದೆ.
ಫಾರಂ ನಂ.53 ರಲ್ಲಿ ಬಡವರು ಸಲ್ಲಿಸಿದ್ದ ಅರ್ಜಿಗಳು ಕುರುಡುಗಣ್ಣಿನ ರಾಜಕಾರಣಿಗಳಿಗೆ, ಮೆಳ್ಳೆಗಣ್ಣಿನ ಅಧಿಕಾರಿಗಳಿಗೆ ಕಾಣದಂತಾಗಿ ಭೂಮಿ ಇರುವುದು ಬಂಡವಾಳಿಗರಿಗೆ ಎಂಬಂತಾಗಿದೆ. ದೊಡ್ಡ ದೊಡ್ಡ ಭೂಮಾಲೀಕರು, ಕಂಪನಿಗಳು ನೂರಾರು ಎಕರೆ ಭೂಮಿಯನ್ನು ಕಬಳಿಸಿದ್ದು, ಬಡವರು ಭೂಮಿಯಿಂದ ವಂಚಿತರಾಗಿದ್ದಾರೆ.
ಹೀಗಾಗಿ ಬಡವರ, ದಲಿತರ, ಆದಿವಾಸಿಗಳ ಸಾಮಾನ್ಯ ಜನರ ಬೇಡಿಕೆಯಾದ ಭೂಮಿ, ವಸತಿ, ನಿವೇಶನ, ಹಕ್ಕುಪತ್ರದ ಕೂಗು ಮುಗಿಲು ಮುಟ್ಟಿದ್ದು ಈ ಹಿನ್ನೆಲೆಯಲ್ಲಿ ಸೆ.15 ರಂದು ಭೂರಹಿತ, ನಿವೇಶನ ರಹಿತ ಹಾಗೂ ವಸತಿ ರಹಿತರ ಸಮಾವೇಶವನ್ನು ಹಾಗೂ ಪತ್ರಕರ್ತೆ, ವಿಚಾರವಾದಿ, ಚಿಂತಕಿಯಾದ ಗೌರಿ ಲಂಕೇಶ್‍ರವರ ಹತ್ಯೆಯನ್ನು ಖಂಡಿಸಿ, ಹಂತಕರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಹಾಗೂ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಲಾಗುವುದು.
ಸಮಾವೇಶಕ್ಕೆ ಸಿಪಿಐ(ಎಂಎಲ್) ಪಾಲಿಟ್ ಬ್ಯೂರೋ ಸದಸ್ಯ ಆರ್.ಮಾನಸಯ್ಯ, ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಡಿ.ಹೆಚ್.ಪೂಜಾರ್, ರಾಜ್ಯ ಕಾರ್ಯದರ್ಶಿ ನಿರ್ವಾಣಪ್ಪ, ರಾಜ್ಯ ಮುಖಂಡ ಶ್ರೀನಿವಾಸ್ ಕಂದಗಲ್, ಜಾತಿ ನಿರ್ಮೂಲನಾ ಚಳುವಳಿಯ ರಾಜ್ಯ ಸಂಚಾಲಕ ಹೆಚ್.ಎನ್.ಬಡಿಗೇರ್ ಭಾಗವಹಿಸುವರು. ಹಾಗೂ ಸಿಪಿಐ, ಬಿಎಸ್‍ಪಿ, ಟಿಯುಸಿಐ, ಬುಡಕಟ್ಟು ಕೃಷಿಕರ ಸಂಘ, ಛಲವಾದಿ ಮಹಾಸಭಾ, ಪರಿಶಿಷ್ಟ ಜಾತಿ/ ಪಂಗಡದ ಹಿತಕರ್ಷಣಾ ಒಕ್ಕೂಟ, ಮತ್ತಿತರೆ ಸಂಘಟನೆಗಳು ಭಾಗವಲಿಸಲಿದೆ ಎಂದು ಸಿಪಿಐ(ಎಂಎಲ್) ಜಿಲ್ಲಾ ಕಾರ್ಯದರ್ಶಿ ಸಿ.ಜೆ.ಜಗನ್ನಾಥ್ ಕರ್ನಾಟಕ ರೈತ ಸಂಘ ಜಿಲ್ಲಾ ಕಾರ್ಯದರ್ಶಿ ಸಿ.ಇ.ಬಸವರಾಜ್, ವಸತಿಗಾಗಿ ಹೋರಾಟ ವೇದಿಕೆ ಮೂಡಿಗೆರೆ ಕಾರ್ಯದರ್ಶಿ ಶಿವಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.