ಜಮೀನಿಗೆ ತೆರಳದಂತೆ ಅಡ್ಡಿಪಡಿಸುವವರ ವಿರುದ್ದ ಕ್ರಮ ಜರುಗಿಸಲು ಒತ್ತಾಯಿಸಿ ಡಿಸಿಗೆ ಮನವಿ
ಚಿಕ್ಕಮಗಳೂರು, ಸೆ.1: ನಮ್ಮ ಜಮೀನಿಗೆ ಹೋಗದಂತೆ ದಾರಿಗೆ ಬೇಲಿ ಹಾಕಿ ಅಡ್ಡಿಪಡಿಸುತ್ತಿರುವ ಹಾಗೂ ಜಮೀನಿಗೆ ನೀರು ಬಿಡದೆ ಅಡ್ಡಿಪಡಿಸಿ, ಬೆದರಿಕೆ ಹಾಕಿರುವವರ ವಿರುದ್ದ ಕ್ರಮ ಜರುಗಿಸುವಂತೆ ಒತ್ತಾಯಿಸಿ ಕರ್ನಾಟಕ ರೈತ ಸಂಘ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬಸಗೋಡು ಗ್ರಾಮ, ವಸ್ತಾರೆ ಹೋಬಳಿ ಜಿಲ್ಲಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಿದಾರೆ.
ಬಸಗೋಡು ಗ್ರಾಮದಲ್ಲಿ ಅನೇಕ ವರ್ಷಗಳಿಂದ ಕೃಷಿ ಮಾಡಿಕೊಂಡಿದ್ದೆವು. ಆದರೆ ಇತ್ತೀಚೆಗೆ ಬೊಂಬೈಲು ಗ್ರಾಮದ ಬಿ.ಉಮೇಶ್ ಎಂ¨ವರು ನಮ್ಮ ಜಮೀನಿಗೆ ತಿರುಗಾಡುವ ದಾರಿಗೆ ಬೇಲಿ ಹಾಕಿ ಅಡ್ಡಿಪಡಿಸುತ್ತಿದ್ದಾರೆ. ಇದರಿಂದ ಓಡಾಡಲು ಮತ್ತು ಬೇಸಾಯಕ್ಕೆ ತೊಂದರೆಯಾಗುತ್ತಿದೆ. ದನಕರುಗಳಿಗೂ ಓಡಾಡಲು ಸಮಸ್ಯೆಯಾಗಿದೆ. ಜಮೀನಿಗೆ ನೀರಿನ ಸೌಲಭ್ಯಕ್ಕಾಗಿ ಸರ್ಕಾರದಿಂದ ಕಾಲುವೆ ನಿರ್ಮಿಸಿ, ಅದಕ್ಕೆ ರಿವಿಟ್‍ಮೆಂಟ್ ಹಾಕಿ ಚಾನಲ್ ಇದೆ.
ಇದರಿಂದ ನಮ್ಮ ಜಮೀನುಗಳಿಗೆ ನೀರು ಹರಿದುಬರುವಂತೆ ಅನುಕೂಲ ಕಲ್ಪಿಸಿಕೊಡಲಾಗಿತ್ತು. ಉಮೇಶ್ ಇವರ ಜಮೀನಿನ ಮೂಲಕವೇ ನಮ್ಮ ಜಮೀನಿಗೆ ನೀರು ಹಾದು ಹೋಗಬೇಕಾಗಿದೆ. ಆದರೆ ಇವರು ನಮ್ಮ ಜಮೀನುಗಳಿಗೆ ಹಾದು ಬರುವ ಕಾಲುವೆ ನೀರನ್ನು ಅಡ್ಡಗಟ್ಟಲಾಗಿದ್ದು, ಜಮೀನಿಗೆ ನೀರು ಇಲ್ಲದೇ ಬೆಳೆಗಳು ಒಣಗಿ ಹೋಗುವ ಸ್ಥಿತಿಯಲ್ಲಿವೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಕೇಳಲು ಹೋದರೆ ಆವಾಚ್ಯ ಶಬ್ದಗಳಿಂದ ನಿಂದಿಸಿ ನೀವುಗಳು ಇದರ ಬಗ್ಗೆ ಮಾತನಾಡಲು ಬಂದರೆ ನಿಮ್ಮನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿದೆ.
ಈ ಸಮಸ್ಯೆ ಬಗ್ಗೆ ಆ.17ರಂದು ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿ ಅವರ ಗಮನಕ್ಕೆ ತರಲಾಗಿದೆ. ಸೆ.5ರಂದು ಉಪವಿಭಾಗಾಧಿಕಾರಿ ಗಮನಕ್ಕೂ ತರಲಾಗಿತ್ತು. ಆರ್.ಐ. ಅವರು ಸೆ.7 ರಂದು ಬಸಗೋಡು ಗ್ರಾಮಕ್ಕೆ ಬಂದು ಜಾಗವನ್ನು ಪರಿಶೀಲಿಸಿ ಬೇಲಿ ತೆರವು ಮಾಡಿ ನೀರು ಬಿಡುವಂತೆ ಉಮೇಶ್‍ಗೆ ಹೇಳಿದರೂ ಅಧಿಕಾರಿಗಳ ಮಾತಿಗೆ ಬೆಲೆ ಕೊಡದೇ ಉಡಾಫೆಯಿಂದ ವರ್ತಿಸಿ ಸಮಸ್ಯೆಯನ್ನು ಜಠಿಲಗೊಳಿಸಿದ್ದಾರೆ ಎಂದಿದ್ದಾರೆ.
ಬಸಗೋಡು ಗ್ರಾಮದ ಕುಮಾರಸ್ವಾಮಿ ಎಂಬವರು ಗದ್ದೆಯನ್ನು ತೋಟ ಮಾಡಲು ಮುಂದಾಗಿದ್ದು ಜೆಸಿಬಿಯಿಂದ ಅವರ ಜಮೀನಿನಲ್ಲಿದ್ದ ದೊಡ್ಡ ದೊಡ್ಡ ಕಲ್ಲುಬಂಡೆಗಳನ್ನು ಮತ್ತು ಬಾಂದ್ ಕಲ್ಲುಗಳನ್ನು ತೆಗೆದು ಪಕ್ಕದಲ್ಲಿನ ಸಾರ್ವಜನಿಕರ ಅನುಕೂಲಕ್ಕಾಗಿ ಇರುವ ಹಳ್ಳಕ್ಕೆ ಅಡ್ಡಗಟ್ಟಲಾಗಿದೆ. ಇದರಿಂದ ಹಳ್ಳದಿಂದ ಬರುವ ನೀರು ನಮ್ಮ ಗದ್ದೆಯ ಮೇಲೆ ಹರಿದು ಬರುತ್ತಿದ್ದು ಬೆಳೆಗೆ ಹಾನಿಯುಂಟಾಗುವಂತಹ ಪರಿಸ್ಥಿತಿ ಎದುರಾಗಿದೆ.
ಇದನ್ನು ತೆಗೆಯುವಂತೆ ಕುಮಾರಸ್ವಾಮಿಗೆ ಹೇಳಿದರೆ ಉಡಾಫೆಯ ವರ್ತನೆ ನೀಡಿ ಆವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಆದ್ದರಿಂದ ನಮಗೆ ಮತ್ತು ಸಾರ್ವಜನಿಕರಿಗೆ ಸಮಸ್ಯೆಯಾಗಿರುವ ಹಳ್ಳದಲ್ಲಿ ಅಡ್ಡಗಟ್ಟಿರುವ ಕಲ್ಲುಬಂಡೆಗಳನ್ನು ತೆಗೆಸಬೇಕು. ಮತ್ತು ನಮಗೆ ಯಾವುದೇ ಬೆಳೆಗೆ ಹಾನಿಯಾಗದಂತೆ ತಡೆಯುವುದರೊಂದಿಗೆ ನಮಗೆ ಅನುಕೂಲ ಮಾಡಿಕೊಡಬೇಕಾಗಿದೆ. ಹಾಗೂ ಕೃಷಿಗೆ ಅಡ್ಡಿಪಡಿಸಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಸಮಯದಲ್ಲಿ ಬಸಗೋಡು ಗ್ರಾಮದ ವಾಸಿಗಳಾದ ಚನ್ನಯ್ಯ, ಸೋಮಮ್ಮ, ಬಿ.ಎಸ್.ನಿಂಗಯ್ಯ, ಹೊನ್ನಯ್ಯ, ನಿಂಗಯ್ಯ, ರಮೇಶ್ ಮನವಿ ಸಲ್ಲಿಸಿದ್ದಾರೆ.