ತುಮಕೂರು : ಜಿಲ್ಲಾ ಮಟ್ಟದ ಬ್ಯಾಂಕರ್ ಪ್ರಗತಿ ಪರಿಶೀಲನಾ ಸಭೆ
ತುಮಕೂರು.ಸೆ.13:ಮುಂದಿನ ಅಕ್ಟೋಬರ್ 10ರೊಳಗೆ ಸರಕಾರದ ಯೋಜನೆಗಳಲ್ಲಿ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ಸಾಲದ ಹಣ ಬಿಡುಗಡೆ ಮಾಡದಿದ್ದರೆ ಅಂತಹ ಬ್ಯಾಂಕ್ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸಿಇಓ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಬ್ಯಾಂಕರ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,201-17ನೇ ಸಾಲಿನ ಸರಕಾರದ ವಿವಿಧ ಯೋಜನೆಗಳಲ್ಲಿ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿ ಆಯ್ಕೆಯಾದವರಿಗೆ ಈಗಾಗಲೇ ಸರಕಾರದಿಂದ ತರಬೇತಿ ನೀಡಿ, ಅವರ ಪಾಲಿನ ಸಬ್ಸಿಡಿ ಹಣವನ್ನು ಸಹ ಬ್ಯಾಂಕುಗಳ ಖಾತೆಗಳಿಗೆ ಜಮಾ ಮಾಡಲಾಗಿದೆ.ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಮಾಡಿರುವ ಬ್ಯಾಂಕುಗಳು, ಇದುವರೆಗೂ ಹಣ ಬಿಡುಗಡೆ ಮಾಡಿಲ್ಲ.ಕೆಲವೊಂದು ಬ್ಯಾಂಕುಗಳ ನಿಗಧಿ ಪಡಿಸಿದ್ದ ಅವಧಿ ಮುಗಿದ ನಂತರ ಅರ್ಜಿಗಳನ್ನು ವಾಪಸ್ಸು ಕಳುಹಿಸುತಿದ್ದಾರೆ. ಸಬ್ಸಿಡಿ ಹಣ ಪಡೆದು ಸಾಲ ಬಿಡುಗಡೆ ಮಾಡದಿರುವುದು ಕಾನೂನಿನ ಪ್ರಕಾರ ಅಪರಾಧವಾಗಿದ್ದು,ಮುಂದಿನ ಅಕ್ಟೋಬರ್ 10 ರೊಳಗೆ ಸಾಲ ನೀಡದಿದ್ದರೆ,ಅಂತಹ ಬ್ಯಾಂಕುಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಖಡಕ್ ಎಚ್ಚರಿಕೆ ನೀಡಿದರು.
ಎಸ್.ಬಿ.ಐ, ಕಾವೇರಿ ಗ್ರಾಮೀಣ ಬ್ಯಾಂಕ್, ಕೆನರಾ ಬ್ಯಾಂಕುಗಳಲ್ಲಿ ಸರಕಾರದ ಕೋಟ್ಯಾಂತರ ರೂ ಸಬ್ಸಿಡಿ ಹಣವನ್ನು ಠೇವಣಿ ಇರಿಸಿಕೊಂಡು, ಫಲಾನುಭವಿಗಳನ್ನು ಸತಾಯಿಸುತ್ತಿರುವುದು ಸರಿಯಲ್ಲ. ಕೆಲ ಬ್ಯಾಂಕರ್‍ಗಳು ಆಧಾರ್ ಸಿಡಿಂಗ್‍ಗೂ ಸಹಕಾರ ನೀಡುತ್ತಿಲ್ಲ.s ನೋಟು ಅಮಾನ್ಯೀಕರಣ, ಸಿಬ್ಬಂದಿ ಕೊರತೆಯ ನೆಪವೊಡ್ಡಿ ಜಿಲ್ಲಾಡಳಿತಕ್ಕೆ ಸ್ಪಂದಿಸುತ್ತಿಲ್ಲ.ಇದುವರೆಗೂ ಶೇ69ರಷ್ಟು ಮಾತ್ರ ಆಧಾರ ಲಿಂಕ್ ಆಗಿದೆ.ನಮ್ಮದೆ ಸಿಬ್ಬಂದಿ ನೀಡಿದರೂ ಸ್ಪಂದಿಸುತ್ತಿಲ್ಲ.ಇದನ್ನು ಸಹಿಸಲು ಸಾಧ್ಯವಿಲ್ಲ. ಯಾವ ಬ್ಯಾಂಕ್ ಅಧಾರ್ ಲಿಂಕ್ ಮಾಡಲು ಸಹಕರಿಸುವುದಿಲ್ಲವೋ ಅಂತಹ ಬ್ಯಾಂಕ್ ಅಧಿಕಾರಿಯ ವಿರುದ್ದ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ಎಲ್ಲಾ ಬ್ಯಾಂಕುಗಳ ಸರಕಾರ ನಿಗಧಿ ಪಡಿಸಿರುವಂತೆ ಅದ್ಯತಾ ವಲಯಗಳಿಗೆ ಹೆಚ್ಚಿನ ಅಸಕ್ತಿ ವಹಿಸಬೇಕಾಗಿದೆ.ಕೃಷಿ ಸಾಲ ನೀಡುವಲ್ಲಿ ಬ್ಯಾಂಕುಗಳು ಮುಂದಿದ್ದರೂ, ಎಂ.ಎಸ್.ಎಂ.ಇ ಕ್ಷೇತ್ರಕ್ಕೆ ನೀಡಿರುವ ಸಾಲ ಸೌಲಭ್ಯ ತೀರ ಕಡಿಮೆಯಿದ್ದು, ಅತ್ಯಂತ ನಿರ್ಲಕ್ಷಿಸಲಾಗಿದೆ.ತುಮಕೂರು ಜಿಲ್ಲೆ ಕೈಗಾರಿಕಾ ಪ್ರದೇಶವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಎಂ.ಎಸ್.ಎಂ.ಇಗೆ ಹೆಚ್ಚು ಅವಕಾಶವಿದ್ದು, ಸರಕಾರವು ಕೂಡ ಹಲವು ರೀತಿಯ ರಿಯಾಯಿತಿ ಘೋಷಿಸಿದೆ.ಖಾಸಗಿ ವಲಯಗಳು ಇವುಗಳ ಸದುಪಯೋಗ ಪಡಿಸಿಕೊಳ್ಳುವ ಮುನ್ನ ಸರಕಾರಿ ಸಾಮ್ಯದ ಬ್ಯಾಂಕುಗಳು ಅದ್ಯತೆಯ ಮೇಲೆ ಸಾಲ ಸೌಲಭ್ಯ ನೀಡಬೇಕೆಂದು ಆರ್.ಬಿ.ಐ ಅಧಿಕಾರಿ ವಿದ್ಯಾಸಾಗರ್ ಸೂಚನೆ ನೀಡಿದರು.
ಡಿಎಲ್‍ಆರ್‍ಸಿ ಸಭೆಗೆ ಹಾಜರಾಗದ ಬ್ಯಾಂಕುಗಳ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮಕ್ಕೆ ಆಯಾಯ ಬ್ಯಾಂಕುಗಳ ಮೇಲಾಧಿಕಾರಿಗಳಿಗೆ ಪತ್ರ ಬೇರೆಯುವಂತೆ ಲೀಡ್ ಬ್ಯಾಂಕ್ ಮುಖ್ಯ ವ್ಯವÀಸ್ಥಾಪಕ ಜೋತಿ ಗಣೇಶ್ ಅವರಿಗೆ ಆದೇಶಿಸಿದ ಸಿಇಓ,ಎಸ್.ಬಿ.ಐ ಮೇಲೆ ಶೈಕ್ಷಣಿಕ ಸಾಲ,ಜನಧನ್ ಖಾತೆ ತೆರೆಯುವುದು,ನರೇಗ ಹಣವನ್ನು ಸಾಲಕ್ಕೆ ಕಟಾವು ಸೇರಿದಂತೆ ಹಲವು ದೂರುಗಳಿದ್ದು,ಈ ಬಗ್ಗೆ ಹಿರಿಯ ಅಧಿಕಾರಿಗಳು ಎಚ್ಚರಿಕೆ ವಹಿಸುವಂತೆ ಸೂಚಿಸಿದರು.
ವೇದಿಕೆಯಲ್ಲಿ ನಬಾರ್ಡ್‍ನ ವೀರಭದ್ರನ್, ಎಸ್.ಬಿ.ಐ ಎಜಿಎಮ ಗಳಾದ ಅನಂತರಾಮ್, ಚಂದ್ರಕಾಂತ್ ಕಿಣಿ,ಸುಬ್ರಮಣ್ಯ ಮತ್ತಿತರರು ಉಪಸ್ಥಿತರಿದ್ದರು