ಸದಾ ಕ್ರಿಯಾಶೀಲರಾಗಿರಲು ಕ್ರೀಡೆ ಸಹಕಾರಿ : ಲತಾ ರವಿಕುಮಾರ್
ತುಮಕೂರು,ಸೆ.13:ನಾವು ಸದಾ ಕ್ರಿಯಾಶೀಲರಾಗಿರಲು ಕ್ರೀಡೆ ಸಹಕಾರಿ ಎಂದು ಜಿ.ಪಂ. ಅಧ್ಯಕ್ಷೆ ಲತಾ ರವಿಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿವಿಧ ಕ್ರೀಡಾ ಸಂಸ್ಥೆಗಳ ಸಹಯೋಗದಲ್ಲಿ ನಗರ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿಂದು ಆಯೋಜಿಸಿದ್ದ 2017-18ನೇ ಸಾಲಿನ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ,ಭಾಗವಹಿಸುವಿಕೆ ಮುಖ್ಯ.ಕ್ರೀಡೆಯಲ್ಲಿ ತೊಡಗಿಸಿ ಕೊಳ್ಳುವುದರಿಂದ ದೇಹಕ್ಕೆ ಉತ್ತಮ ಆರೋಗ್ಯ, ಮನಸ್ಸಿಗೆ ಉಲ್ಲಾಸ ದೊರೆಯುತ್ತದೆ.ಕ್ರೀಡಾಳುಗಳು ಆಟೋಟಗಳಲ್ಲಿ ಭಾಗವಹಿಸುವುದಲ್ಲದೆ,ಪೌಷ್ಠಿಕ ಆಹಾರ, ಹೆಚ್ಚಾಗಿ ನೀರಿನ ಸೇವನೆ ಮಾಡಬೇಕು.ಇದರಿಂದ ಯಾವ ರೋಗವೂ ಬರುವುದಿಲ್ಲ ಎಂದು ಸಲಹೆ ನೀಡಿದ ಅವರು, ಕ್ರೀಡಾಪಟುಗಳು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಕ್ರೀಡಾ ಪ್ರತಿಭೆ ತೋರಬೇಕೆಂದು ಶುಭ ಹಾರೈಸಿದರು.
ಕಬ್ಬಡಿ ತರಬೇತುದಾರರಾದ ಇಸ್ಮಾಯಿಲ್ ಪ್ರಾಸ್ತಾವಿಕವಾಗಿ ಮಾತನಾಡಿ,2 ದಿನಗಳ ಕಾಲ ನಡೆಯುವ ಈ ಕ್ರೀಡಾಕೂಟದಲ್ಲಿ ಇಂದು ಪುರುಷರು ಹಾಗೂ ಸೆ.14ರಂದು ಮಹಿಳೆಯರ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ.ಜಿಲ್ಲೆಯ ಎಲ್ಲಾ ತಾಲೂಕಿನ ಕ್ರೀಡಾಳುಗಳು ಪಾಲ್ಗೊಂಡಿದ್ದಾರೆ.ರಾಜ್ಯಾದ್ಯಂತ ದಸರಾ ಕ್ರೀಡಾಕೂಟ ಜರುಗುತ್ತಿದ್ದು, ಜಿಲ್ಲಾ ಮಟ್ಟದ ಈ ಕ್ರೀಡೆಯಲ್ಲಿ ವಿಜೇತರಾದವರನ್ನು ವಿಭಾಗ ಮಟ್ಟಕ್ಕೆ ಆಯ್ಕೆ ಮಾಡಲಾಗುವುದೆಂದರು.
ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, (ಉದ್ದಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ತ್ರಿವಿಧ ಜಿಗಿತ, ಭರ್ಜಿ ಎಸೆತ, ಗುಂಡು ಎಸೆತ, ರಿಲೆ) ಕಬಡ್ಡಿ, ಖೋಖೋ, ವಾಲಿಬಾಲ್, ಫುಟ್‍ಬಾಲ್ ಹಾಗೂ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳು ನಡೆಯಲಿವೆ.ಎಲ್ಲಾ ವಯೋಮಿತಿಯ ಸ್ಪರ್ಧಿಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಕ್ರೀಡಾಪಟು ಆನಂದ್, ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್‍ನ ಪ್ರಭಾಕರ್, ರೋಟರಿ ಸಂಸ್ಥೆಯ ಲಕ್ಷ್ಮಣ್,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಟಿ. ಜಯಲಕ್ಷ್ಮಿ,ಶಿವಪ್ರಸಾದ್ ಉಪಸ್ಥಿತರಿದ್ದರು.