×
Ad

ಮಲೆನಾಡಲ್ಲಿ ತಗ್ಗಿದ ಮಳೆ : ಏರುತ್ತಿದೆ ಬಿಸಿಲ ಧಗೆ !

Update: 2017-09-13 18:55 IST

ಶಿವಮೊಗ್ಗ, ಸೆ. 13: ಕಳೆದ ಕೆಲ ದಿನಗಳ ಹಿಂದೆ ಧಾರಾಕಾರ ಮಳೆಗೆ ಸಾಕ್ಷಿಯಾಗಿದ್ದ ಮಲೆನಾಡಲ್ಲೀಗ ವರ್ಷಧಾರೆಯ ಪ್ರಮಾಣದಲ್ಲಿ ತೀವ್ರ  ಇಳಿಕೆ ಕಂಡುಬಂದಿದೆ. ಮತ್ತೊಂದೆಡೆ ತಾಪಮಾನದ ಪ್ರಮಾಣದಲ್ಲಿ ದಿಢೀರ್ ಹೆಚ್ಚಳ ಕಂಡುಬಂದಿದ್ದು, ಬೇಸಿಗೆಯ ಬಿಸಿಲು ಬೀಳಲಾರಂಭಿಸಿದೆ. 
ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಮಳೆ ಅಂಕಿಅಂಶದ ಮಾಹಿತಿಯ ಪ್ರಕಾರ ಬುಧವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಏಳು ತಾಲೂಕು ವ್ಯಾಪ್ತಿಯಲ್ಲಿ ಬಿದ್ದ ಒಟ್ಟಾರೆ ಮಳೆಯ ಸರಾಸರಿ ಪ್ರಮಾಣ ಕೇವಲ 7.29 ಮಿಲಿ ಮೀಟರ್ (ಮಿ.ಮೀ.) ಮಾತ್ರವಾಗಿದೆ. 

ಆದರೆ ಕೆಲ ಹಿಂದಿನ ದಿನಗಳಂದು, ಜಿಲ್ಲೆಯ ವಿವಿಧೆಡೆ ಬಿದ್ದ ಒಟ್ಟಾರೆ ಸರಾಸರಿ ಮಳೆಯ ವಿವರ ಗಮನಿಸಿದರೆ ಸೆ. 8 ರಂದು 23.74 ಮಿ.ಮೀ., ಸೆ. 9 ರಂದು 12.37 ಮಿ.ಮೀ., ಸೆ. 10 ರಂದು 13.29 ಮಿ.ಮೀ., ಸೆ. 11 ರಂದು 10.49 ಮಿ.ಮೀ. ವರ್ಷಧಾರೆಯಾಗಿದೆ. ತದನಂತರ ಮಳೆಯ ಪ್ರಮಾಣದಲ್ಲಿ ಇಳಿಕೆಯಾಗಿ, ತಾಪಮಾನದ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತಿದೆ. 

ಮಳೆ ವಿವರ: ಬುಧವಾರದ ಮಾಹಿತಿಯ ಪ್ರಕಾರ ಕಳೆದ 24 ಗಂಟೆಯಲ್ಲಿ ಶಿವಮೊಗ್ಗದಲ್ಲಿ 1.85 ಮಿ.ಮೀ., ಭದ್ರಾವತಿ 0.00 ಮಿ.ಮೀ., ತೀರ್ಥಹಳ್ಳಿ 0.00 ಮಿ.ಮೀ., ಸಾಗರ 1.40 ಮಿ.ಮೀ., ಶಿಕಾರಿಪುರ 34.60 ಮಿ.ಮೀ., ಸೊರಬ 2 ಮಿ.ಮೀ., ಹೊಸನಗರದಲ್ಲಿ 11.20 ಮಿ.ಮೀ. ಮಳೆಯಾಗಿದೆ. 
ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿರುವುದರಿಂದ ಲಿಂಗನಮಕ್ಕಿ ಜಲಾಶಯದ ಒಳಹರಿವುದ 3846 ಕ್ಯೂಸೆಕ್‍ಗೆ ಇಳಿಕೆಯಾಗಿದೆ. 4579 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಡ್ಯಾಂನ ನೀರಿನ ಮಟ್ಟ 1795.20 (ಗರಿಷ್ಠ ಮಟ್ಟ : 1819) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನ ನೀರಿನ ಮಟ್ಟ 1794.55 ಅಡಿಯಿತ್ತು. 

ಭದ್ರಾ ಜಲಾಶಯದ ಒಳಹರಿವು 2072 ಕ್ಯೂಸೆಕ್ ಇದ್ದು, 150 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಡ್ಯಾಂನ ನೀರಿನ ಮಟ್ಟ 164.80 (ಗರಿಷ್ಠ ಮಟ್ಟ : 186) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ನೀರನ ಮಟ್ಟ 158 ಅಡಿಯಿತ್ತು. ಉಳಿದಂತೆ ತುಂಗಾ ಡ್ಯಾಂ ಈಗಾಗಲೇ ಗರಿಷ್ಠ ಮಟ್ಟವಾದ 588.24 ಅಡಿ ತಲುಪಿದ್ದು, ಪ್ರಸ್ತುತ ಡ್ಯಾಂನ ಒಳಹರಿವು 4563 ಕ್ಯೂಸೆಕ್ ಇದ್ದು 3200 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. 
ಏರಿಕೆ: ಶಿವಮೊಗ್ಗ ನಗರದ ಸೇರಿದಂತೆ ಜಿಲ್ಲೆಯಾದ್ಯಂತ ತಾಪಮಾನದ ಪ್ರಮಾಣದಲ್ಲಿ ದಿಢೀರ್ ಹೆಚ್ಚಳ ಕಂಡುಬಂದಿದೆ. ಶಿವಮೊಗ್ಗ ನಗರದಲ್ಲಿ ಬುಧವಾರ ಮಧ್ಯಾಹ್ನ ದಾಖಲಾಗಿದ್ದ ತಾಪಮಾನದ ಪ್ರಮಾಣ 34 ಡಿಗ್ರಿ ಸೆಲ್ಸಿಯಸ್‍ಗೂ ಅಧಿಕವಾಗಿತ್ತು! ಉಳಿದಂತೆ ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳು ಸೇರಿದಂತೆ ಜಿಲ್ಲೆಯಾದ್ಯಂತ ಒಣ ಹವೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News