'ದಶಕಗಳ ಹಿಂದಿನ ಕಡತಗಳ ಕಂಪ್ಯೂಟರೀಕರಣಕ್ಕೆ ಕ್ರಮ' :ಇಸ್ಮಾಯಿಲ್ ಖಾನ್
ಶಿವಮೊಗ್ಗ, ಸೆ. 13: 'ನಗರಾಭಿವೃದ್ದಿ ಪ್ರಾಧಿಕಾರದ ಕಡತಗಳನ್ನು ಸಂಪೂರ್ಣವಾಗಿ ಕಂಪ್ಯೂಟರೀಕರಣಗೊಳಿಸಿ, ಸಂರಕ್ಷಣೆಗೆ ಕ್ರಮಕೈಗೊಳ್ಳಲಾಗಿದೆ' ಎಂದು ಶಿವಮೊಗ್ಗ - ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ (ಸೂಡಾ) ದ ಅಧ್ಯಕ್ಷ ಇಸ್ಮಾಯಿಲ್ ಖಾನ್ ತಿಳಿಸಿದ್ದಾರೆ.
ಬುಧವಾರ ಅಧ್ಯಕ್ಷರು ಪ್ರಾಧಿಕಾರದ ಕಚೇರಿಯ ವಿವಿಧ ವಿಭಾಗಗಳಿಗೆ ದಿಢೀರ್ ಭೇಟಿಯಿತ್ತು ಸಿಬ್ಬಂದಿಗಳ ಕಾರ್ಯನಿರ್ವಹಣೆ ಪರಿಶೀಲಿಸಿದರು. ಈ ವೇಳೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
1978 ರಿಂದ ಇಂದಿನವರೆಗಿನ ಎಲ್ಲ ಪ್ರಮುಖ ಕಡತಗಳನ್ನು ಕಂಪ್ಯೂಟರೀಕರಣಗೊಳಿಸಲಾಗುತ್ತಿದೆ. ಈಗಾಗಲೇ ಸಾವಿರಾರು ಕಡತಗಳ ಮಾಹಿತಿಯನ್ನು ಕಂಪ್ಯೂಟರ್‍ನಲ್ಲಿ ದಾಖಲಿಸುವ ಕೆಲಸ ನಡೆಸಲಾಗಿದ್ದು, ಪ್ರಕ್ರಿಯೆ ಮುಂದುವರಿದಿದೆ. ದಾಖಲೀಕರಣ ಪೂರ್ಣಗೊಂಡರೆ ಸಾರ್ವಜನಿಕರು ತಮಗೆ ಅಗತ್ಯವಿರುವ ಕಡತಗಳನ್ನು ನಿಯಮಾನುಸಾರ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ ಎಂದರು.
ತಾವು ಅಧ್ಯಕ್ಷರಾಗಿ ನಿಯೋಜನೆಗೊಂಡ ನಂತರ ಪ್ರಾಧಿಕಾರದ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಈ ಕುರಿತಂತೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಮಾಲೋಚನೆ ಕೂಡ ನಡೆಸಲಾಗಿದ್ದು, ತಮ್ಮ ಅವಧಿಯಲ್ಲಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ತಿಳಿಸಿದರು.
ಪ್ರಾಧಿಕಾರದ ಕಚೇರಿಗೆ ಮಂಜೂರಾಗಿರುವ ಹುದ್ದೆಗಳಲ್ಲಿ ಕೆಲ ಹುದ್ದೆಗಳ ಖಾಲಿಯಿರುವುದನ್ನು ಅಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ಈ ಕುರಿತಂತೆ ತಾವು ಸರ್ಕಾರದ ಹಂತದಲ್ಲಿ ಸಂಬಂಧಿಸಿದವರೊಂದಿಗೆ ಚರ್ಚೆ ನಡೆಸಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಜರುಗಿಸುತ್ತೆನೆ ಎಂದು ತಿಳಿಸಿದ್ದಾರೆ.
ಯಾವುದೆ ಗೊಂದಲ-ಗಡಿಬಿಡಿಗೆ ಆಸ್ಪದವಾಗದಂತೆ ಕಾಲಮಿತಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯ ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ಸತಾಯಿಸಬಾರದು. ಕಾಲಮಿತಿಯಲ್ಲಿ ಕಡತಗಳ ವಿಲೇವಾರಿಗೊಳಿಸಬೇಕು ಎಂದು ಅಧಿಕಾರಿ - ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಲಾಗಿದೆ ಎಂದು ಇಸ್ಮಾಯಿಲ್ ಖಾನ್ ತಿಳಿಸಿದ್ದಾರೆ.