ಆಸ್ಪತ್ರೆಗೆ ಮೂಲಸೌಕರ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಧರಣಿ
ಶಿವಮೊಗ್ಗ, ಸೆ.13: ತಾಲೂಕಿನ ಉಂಬ್ಳೆಬೈಲ್‍ನಲ್ಲಿರುವ ಚಿಕಿತ್ಸಾಲಯದಲ್ಲಿ ಸೂಕ್ತ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಗ್ರಾಮದ ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯರು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಪತ್ರ ಅರ್ಪಿಸಿದರು.
ಗ್ರಾಮವು ಗುಡ್ಡಗಾಡು ಪ್ರದೇಶವಾಗಿದೆ. ತಮ್ಮ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸರಿಸುಮಾರು 15 ಸಾವಿರಕ್ಕೂ ಅಧಿಕ ಜನಸಂಖ್ಯೆಯಿದೆ. ತೀವ್ರ ಅನಾರೋಗ್ಯಕ್ಕೆ ತುತ್ತಾದವರು ಹಲವು ಕಿ.ಮೀ. ದೂರದಲ್ಲಿರುವ ನಗರ ಪ್ರದೇಶದ ಆಸ್ಪತ್ರೆಗಳಿಗೆ ಆಗಮಿಸುವಂತಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಜಿಲ್ಲಾ ಆರೋಗ್ಯ ಇಲಾಖೆಯು ಗ್ರಾಮದಲ್ಲಿ ಆರೋಗ್ಯ ಉಪ ಕೇಂದ್ರ ಸ್ಥಾಪಿಸಿದ್ದರೂ ಸಹಾ ಜನರಿಗೆ ಸಮರ್ಪಕವಾದ ಆರೋಗ್ಯ ಸೇವೆ ದೊರೆಯುತ್ತಿಲ್ಲ. ಒಬ್ಬ ಎಎನ್‍ಎಂ, ಒಬ್ಬ ಆರೋಗ್ಯ ಹಿರಿಯ ಮಹಿಳಾ ಸಹಾಯಕಿ ಮಾತ್ರವಿದ್ದು ಇವರಿಂದ ಜನರಿಗೆ ಸೇವೆ ಕೊಡಲು ಸಾಧ್ಯವಾಗುತ್ತಿಲ್ಲವೆಂದು ಪ್ರತಿಭಟನಾಕಾರರು ದೂರಿದ್ದಾರೆ.
ಈ ಇಬ್ಬರಿಗೆ ಮೂರು ಗ್ರಾಪಂನ 18 ಹಳ್ಳಿಗಳ ಜವಾಬ್ದಾರಿಯನ್ನು ನೀಡಿರುವುದರಿಂದ ಕೆಲಸದ ಹೊರೆ ಜಾಸ್ತಿಯಾಗಿದೆ. ಇದರ ಪರಿಣಾಮವಾಗಿ ಹೆಚ್ಚಿನ ಚಿಕಿತ್ಸೆಗಾಗಿ ಆ ಭಾಗದ ಗ್ರಾಮಸ್ಥರು ಶಿವಮೊಗ್ಗ, ಭದ್ರಾವತಿ ಅಥವಾ ಎನ್.ಆರ್.ಪುರಕ್ಕೆ ಹೋಗಬೇಕಾದ ಸಂದರ್ಭ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಕೂಡಲೇ ಜಿಲ್ಲಾಡಳಿತವು ಗ್ರಾಮದಲ್ಲಿ ಸುಸಜ್ಜಿತವಾದ ಆಸ್ಪತ್ರೆ ನಿರ್ಮಾಣ ಮಾಡಿ, ಸೂಕ್ತ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಮಹಿಳೆಯರು ಆಗ್ರಹಿಸಿದ್ದಾರೆ. ಮನವಿ ಅರ್ಪಿಸುವ ವೇಳೆ ಗ್ರಾಮದ ಶಾರದಾ ಸ್ವಸಹಾಯ ಗುಂಪಿನ ಸದಸ್ಯೆಯರು ಉಪಸ್ಥಿತರಿದ್ದರು.