ಮೀನುಗಾರರ ಪರಿಹಾರ ಧನ 6ಲಕ್ಷ ರೂ.ಗೆ ಏರಿಕೆ: ಪ್ರಮೋದ್ ಮಧ್ವರಾಜ್
ಬೆಂಗಳೂರು, ಸೆ.13: ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ಸಂದರ್ಭದಲ್ಲಿ ಮರಣ ಹೊಂದಿದ ಮೀನುಗಾರರಿಗೆ ನೀಡುವ ಪರಿಹಾರ ಧನವನ್ನು 6ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ ಎಂದು ಕ್ರೀಡಾ ಹಾಗೂ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಬುಧುವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀನುಗಾರಿಕೆ ನಡೆಸುವ ಸಂದರ್ಭದಲ್ಲಿ ಸಾವನ್ನಪ್ಪುವ ಮೀನುಗಾರರಿಗೆ ನೀಡುವ ಪರಿಹಾರ ಧನವು ಈ ಹಿಂದೆ 5ಲಕ್ಷ ರೂ.ಇತ್ತು. ನಾನು ಮೀನುಗಾರಿಕಾ ಸಚಿವನಾದ ಮೇಲೆ ಆರು ಲಕ್ಷ ರೂ.ಗೆ ಏರಿಕೆ ಮಾಡಿದ್ದೇನೆ ಎಂದು ತಿಳಿಸಿದರು.
ಸಂಕಷ್ಟ ಪರಿಹಾರ ನಿಧಿ ಯೋಜನೆಯಡಿ 2016-17ನೆ ಸಾಲಿನಲ್ಲಿ 92 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದ್ದು, 156ಲಕ್ಷ ರೂ.ಪರಿಹಾರ ನೀಡಲಾಗಿದೆ. 2017-18ನೆ ಸಾಲಿನಲ್ಲಿ 17ಪ್ರಕರಣಗಳಲ್ಲಿ 28.19ಲಕ್ಷ ರೂ.ನೀಡಲಾಗಿದೆ. ಯಾಂತ್ರೀಕೃತ ಮೀನುಗಾರಿಕೆ ದೋಣಿಗಳನ್ನು ನಿರ್ಮಿಸಲು ನವೆಂಬರ್ 2016ರ ಪೂರ್ವದಲ್ಲಿ ಅರ್ಜಿ ಸಲ್ಲಿಸಿರುವ ಎಲ್ಲ ಮೀನುಗಾರರಿಗೆ ಸಾಧ್ಯತಾ ಪತ್ರ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಮೀನುಗಾರರಿಗೆ 2016-17ನೆ ಸಾಲಿನಲ್ಲಿ 4715 ಮನೆಗಳನ್ನು ಮಂಜೂರು ಮಾಡಿ, ವಿಧಾನ ಸಭಾ ಕ್ಷೇತ್ರವಾರು ಮನೆಗಳ ಹಂಚಿಕೆ ಮಾಡಲಾಗಿದೆ. 2017-18ನೆ ಸಾಲಿನಲ್ಲಿ ಮತ್ಸಾಶ್ರಯ ಯೋಜನೆ ಅಡಿಯಲ್ಲಿ 3ಸಾವಿರ ಮನೆಗಳ ನಿರ್ಮಾಣವನ್ನು ರಾಜೀವ್‌ಗಾಂಧಿ ವಸತಿ ನಿಗಮದ ಮೂಲಕ ಅನುಷ್ಠಾನಗೊಳಿಸಲು ಸರಕಾರ ಆದೇಶ ಹೊರಡಿಸಲಾಗಿದೆ ಎಂದು ಅವರು ಹೇಳಿದರು.
ಹಳೆಯ ದೋಣಿಗಳ ಬದಲಾಗಿ ಹೊಸ ದೋಣಿ ನಿರ್ಮಿಸಲು ಕನಿಷ್ಠ 2ವರ್ಷಗಳ ಮಾಲಕತ್ವ ಹೊಂದಿರಬೇಕೆಂಬ ಷರತ್ತನ್ನು ಸಡಿಲಿಸಿ ಕನಿಷ್ಠ 6ತಿಂಗಳು ಮಾಲಕತ್ವ ಹೊಂದಿರುವ ಮೀನುಗಾರರಿಗೆ ಹೊಸ ದೋಣಿಯನ್ನು ನಿರ್ಮಿಸಲು ಅನುಮತಿ ನೀಡಲಾಗಿದೆ ಎಂದು ಅವರು ಹೇಳಿದರು.