×
Ad

ವಿದ್ಯುತ್ ಚಾಲಿತ ವಾಹನಗಳ ಉತ್ತೇಜನಕ್ಕೆ ಸಚಿವ ಸಂಪುಟ ಸಮ್ಮತಿ

Update: 2017-09-13 19:45 IST
ಸಾಂದ್ರಭಿಕ ಚಿತ್ರ

ಬೆಂಗಳೂರು, ಸೆ. 13: ಮಾಲಿನ್ಯ ತಡೆ ಹಾಗೂ ಪರಿಸರ ಸ್ನೇಹಿ ವಾತಾವರಣ ಸೃಷ್ಟಿಸಲು ಉತ್ತೇಜನ ನೀಡುವ ದೃಷ್ಟಿಯಿಂದ ವಿದ್ಯುತ್ ಚಾಲಿತ ವಾಹನಗಳ ಜನಪ್ರಿಯಗೊಳಿಸಲು ‘ಕರ್ನಾಟಕ ಎಲೆಕ್ಟ್ರಿಕಲ್ ವೆಹಿಕಲ್ ಅಂಡ್ ಎನರ್ಜಿ ಸ್ಟೋರೇಜ್ ನೀತಿ’ ರೂಪಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ಬುಧವಾರ ವಿಧಾನಸೌಧದ ಸಂಪುಟ ಸಭಾ ಮಂದಿರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಸಿ ಸಂಪುಟ ಸಭೆ ಬಳಿಕ ಮಾತನಾಡಿದ ಕಾನೂನು ಸಚಿವ ಜಯಚಂದ್ರ, ವಿದ್ಯುತ್ ಚಾಲಿತ ವಾಹನಗಳ ಬಳಕೆಯಿಂದ ಸಂಚಾರ ದಟ್ಟಣೆ ನಿಯಂತ್ರಣ, ಮಾಲಿನ್ಯ ತಡೆಗೆ ಮತ್ತಷ್ಟು ಉತ್ತೇಜನ ದೊರೆಯಲಿದೆ ಎಂದರು.

ಕೊಪ್ಪಳ ಮತ್ತು ಯಲಬುರ್ಗಾ ತಾಲೂಕುಗಳ ಕೆರೆಗಳಿಗೆ ಕುಡಿಯುವ ನೀರು ಪೂರೈಸುವ ತುಂಗಭದ್ರಾ ನದಿಯಿಂದ 290 ಕೋಟಿ ರೂ.ಏತ ನೀರಾವರಿ ಯೋಜನೆಗೆ ಅನುಮೋದನೆ ನೀಡಿದೆ. ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಏಕರೂಪ ಕಾನೂನು ಜಾರಿಗೆ ತರಲು ಸಾಧಕ-ಬಾಧಕಗಳ ಪರಿಶೀಲಿಸಿ ವರದಿ ಸಲ್ಲಿಸಲು ರಾಷ್ಟ್ರೀಯ ಕಾನೂನು ಶಾಲೆ ಅಭಿಪ್ರಾಯ ಪಡೆಯಲು ನಿರ್ಧರಿಸಲಾಗಿದೆ.

ರಸ್ತೆ ಅಭಿವೃದ್ಧಿ: ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ರಾಜ್ಯ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮದ ಮೂಲಕ ಬೆಂಗಳೂರಿನ ಸುತ್ತಮುತ್ತಲಿನ 155 ಕಿ.ಮೀ ಉದ್ದದ ನಾಲ್ಕು ಪ್ರಮುಖ ರಸ್ತೆಗಳನ್ನು 2,095ಕೋಟಿ ರೂ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಅನುಮೋದನೆ ನೀಡಿದೆ.

ಹೊಸಕೋಟೆ-ಬೂದಿಗೆರೆ-ಮೈಲನಹಳ್ಳಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆ, ನೆಲಮಂಗಲ-ಚಿಕ್ಕಮಧುರೆ-ಬ್ಯಾತ- ರಾಜಾನುಕುಂಟೆ ರಸ್ತೆ, ತಿಮ್ಮಸಂದ್ರ-ದೇವನಹಳ್ಳಿ ಬಳಿ ರಸ್ತೆ, ಆನೇಕಲ್-ಅತ್ತಿಬೆಲೆ-ಸರ್ಜಾಪುರ- ವರ್ತೂರು- ಹೊಸಕೋಟೆ ರಸ್ತೆ ಹಾಗೂ ಹಾರೋಹಳ್ಳಿ-ಹುರುಗನದೊಡ್ಡಿ-ಕೆಐಎಡಿಬಿ ರಸ್ತೆ- ಜಿಗಣಿ-ಆನೇಕಲ್ ರಸ್ತೆ ಸೇರಿ ನಾಲ್ಕು ಪ್ರಮುಖ ರಸ್ತೆಗಳನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.

ನೇರ ನೇಮಕಾತಿಗೆ ಸಮ್ಮತಿ:ಅರಣ್ಯ ಇಲಾಖೆಯಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಶ್ಲಾಘನೀಯ ಸಾಧನೆಗೈದ ಕ್ರೀಡಾಳುಗಳಿಗೆ ಅರಣ್ಯ ರಕ್ಷಕರು, ವೀಕ್ಷಕರು, ಉಪವಲಯ ಅರಣ್ಯಾಧಿಕಾರಿಗಳ ‘ಸಿ’ ಮತ್ತು ‘ಡಿ’ ದರ್ಜೆಯ 54 ಹುದ್ದೆಗಳಿಗೆ ಇದೀಗ ವಿಶೇಷ ನಿಯಮಗಳ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲು ಸಂಪುಟ ಸಮ್ಮತಿಸಿದೆ ಎಂದು ಹೇಳಿದರು.

ಆಸ್ಪತ್ರೆ ಆಧುನೀಕರಣ: ಗದಗ ನಗರದಲ್ಲಿ ನೂರು ಹಾಸಿಗೆಗಳ ಸಾಮರ್ಥ್ಯವುಳ್ಳ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಆಧುನೀಕರಣಕ್ಕೆ ಪರಿಷ್ಕೃತ ಗುತ್ತಿಗೆ ಮೊತ್ತವನ್ನು 5.08ಕೋಟಿ ರೂ.ಗಳಿಗೆ ಸಂಪುಟ ಅನುಮೋದನೆ ನೀಡಿದೆ. ಆಂತರಿಕ ಹಾಗೂ ಹೆಚ್ಚುವರಿ ಆಯವ್ಯಯ ಸಂಪನ್ಮೂಲದಡಿಯಲ್ಲಿ ನೀರಾವರಿ ನಿಗಮಕ್ಕೆ 765ಕೋಟಿ ರೂ.ಸಾಲಕ್ಕೆ ಸರಕಾರದ ಖಾತರಿ ಒದಗಿಸಲು ಸಮ್ಮತಿಸಲಾಗಿದೆ.

ಕಿರುಜಲ ವಿದ್ಯುತ್ ಯೋಜನೆಗೆ ಜಮೀನು: ದಾವಣಗೆರೆ ತಾಲೂಕಿನ ಶಾಮನೂರು ಗ್ರಾಮದಲ್ಲಿ ಮಾನಸ ಸರೋವರ ಪವರ್ ಪ್ರೈವೇಟ್ ಲಿ.ಗೆ ಕಿರುಜಲ ವಿದ್ಯುತ್ ಯೋಜನೆಯನ್ನು ಸ್ಥಾಪಿಸಲು ಗುತ್ತಿಗೆ ಆಧಾರದ ಮೇರೆಗೆ 1.05ಎಕರೆ ಜಮೀನು ಮಂಜೂರಿಗೆ ಒಪ್ಪಿಗೆ ನೀಡಿದೆ.

ಧಾರವಾಡ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಮಹಾ ವಿದ್ಯಾಲಯ ಶತಮಾನೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ಕಟ್ಟಡ ನವೀಕರಣ ಮತ್ತು ದುರಸ್ತಿ ಕಾಮಗಾರಿಗಳಿಗೆ 25 ಕೋಟಿ ರೂ ಮಂಜೂರು, ಬಳ್ಳಾರಿ ಜಿಲ್ಲೆಯ ತೋರಣಗಲ್‌ನಲ್ಲಿರುವ ಜಿಂದಾಲ್ ಸ್ಟೀಲ್ ವರ್ಕ್ಸ್(ಜೆಎಸ್‌ಡಬ್ಲೂ) ಉಕ್ಕು ಕಾರ್ಖಾನೆಗೆ ಮಂಜೂರಾಗಿರುವ ಪ್ರದೇಶದ ಮಧ್ಯದಲ್ಲಿನ 77.93ಎಕರೆ ಸರಕಾರಿ ಭೂಮಿಯನ್ನು ಜಲಾಶಯ ನಿರ್ಮಿಸಿ ಬೇಸಿಗೆಯಲ್ಲಿ ನೀರು ಶೇಖರಣೆಗೆ ಸಮ್ಮತಿಸಲಾಗಿದೆ.

ಸಾರವರ್ಧಿತ ಅಕ್ಕಿ: ಮಧ್ಯಾಹ್ನದ ಉಪಾಹಾರ ಯೋಜನೆಯಡಿ ಕೋಲಾರ, ಚಾಮರಾಜನಗರ, ಕೊಪ್ಪಳ, ಬೆಳಗಾವಿ ಜಿಲ್ಲೆಗಳ ಕೇಂದ್ರೀಕೃತ ಅಡುಗೆ ಕೇಂದ್ರಗಳಲ್ಲಿ ಸಾರವರ್ಧಿತ ಅಕ್ಕಿಯನ್ನು ಬಳಸಲು ಸಂಪುಟ ಅನುಮತಿ ನೀಡಿದೆ. ಇದಕ್ಕೆ ಅಗತ್ಯವಿರುವ ಮೂಲ ಸೌಲಭ್ಯ ಸ್ಥಾಪನೆಗೆ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ 25 ಕೋಟಿ ರೂ .ಮಂಜೂರು ಮಾಡಲು ಸಮ್ಮತಿಸಿದೆ.

ಕಂಪ್ಯೂಟರ್ ಖರೀದಿ: ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಕಂಪ್ಯೂಟರ್, ಪ್ರಿಂಟರ್‌ಗಳು, ನಿರಂತರ ವಿದ್ಯುತ್ ಪೂರೈಕೆ ಯಂತ್ರ ಸೇರಿ ಇನ್ನಿತರ ಪರಿಕರಗಳನ್ನು ಖರೀದಿಸಲು 8.72 ಕೋಟಿ ರೂ ಪರಿಷ್ಕೃತ ಪ್ರಸ್ತಾವನೆಗೆ ಸಂಪುಟ ಅನುಮೋದನೆ ನೀಡಿದೆ.

ಅವಧಿ ವಿಸ್ತರಣೆ: ನಾಲ್ಕನೇ ರಾಜ್ಯ ಹಣಕಾಸು ಆಯೋಗದ ಅವಧಿಯನ್ನು ಮೂರು ತಿಂಗಳವರೆಗೆ ಅಂದರೆ ಪ್ರಸಕ್ತ ಸಾಲಿನ ಅಕ್ಟೋಬರ್ 1ರಿಂದ ಡಿಸೆಂಬರ್ 31ರ ವರೆಗೆ ವಿಸ್ತರಿಸಲು ಒಪ್ಪಿಗೆ ನೀಡಿದೆ. ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಾವಳಿಗಳಿಗೆ ತಿದ್ದುಪಡಿಗೆ ಅನುಮೋದನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News