ಜನರಿಗೆ ಉಪಯೋಗಕ್ಕೆ ಬಾರದ ಬ್ಯಾಂಕ್ ಎಟಿಎಂ: ಸಮಸ್ಯೆ ಪರಿಹಾರಕ್ಕೆ ಒತ್ತಾಯ.

Update: 2017-09-13 14:54 GMT

ಬಣಕಲ್, ಸೆ.13:ಇಲ್ಲಿನ ಕರ್ಣಾಟಕ ಬ್ಯಾಂಕ್ ಎಟಿಎಂ ಹಲವಾರು ಸಮಸ್ಯೆಯಿಂದ ನರಳುತ್ತಿದ್ದು ಒಂದು ಸಮಸ್ಯೆ ಬಗೆಹರಿದರೆ ಮತ್ತೊಂದು ಸಮಸ್ಯೆ ಎದುರಾಗಿ ಯಾವಾಗಲೂ ಗ್ರಾಹಕರಿಗೆ ಉಪಯೋಗವಾಗದೇ ಬ್ಯಾಂಕ್ ಎಟಿಎಂ ನಿರ್ವಾಹಕರ ನಿರ್ಲಕ್ಷ್ಯದಿಂದ ಕಾರ್ಯನಿರ್ವಹಿಸದೇ ವಾರಗಟ್ಟಲೇ ಬಂದ್ ಮಾಡಿರುತ್ತಾರೆ ಎಂದು ಸ್ಥಳೀಯರು ದೂರಿದ್ದಾರೆ.

ಬಣಕಲ್‍ನಲ್ಲಿ ಒಂದೇ ಬ್ಯಾಂಕ್ ಎಟಿಎಂ ಕಾರ್ಯನಿರ್ವಹಿಸುತ್ತಿದೆ. ದೂರದ ಊರುಗಳಿಂದ ಬಂದ ಗ್ರಾಹಕರು 20 ಕಿ.ಮೀ. ಸುತ್ತಮುತ್ತ ಯಾವುದೇ ಎಟಿಎಂ ಇಲ್ಲದೇ ಜನರು ಹಣಕ್ಕಾಗಿ ಪರದಾಡುವ ಸ್ಥಿತಿ ಎದುರಾಗಿದೆ. ಬಣಕಲ್ ಎಟಿಎಂ ಇಲ್ಲದಿದ್ದರೆ ಮೂಡಿಗೆರೆ ತಾಲ್ಲೂಕಿಗೆ ಕಿ.ಮೀ ಗಟ್ಟಲೇ ಕ್ರಮಿಸಿ ಹೋಗಿ ಗ್ರಾಹಕರು ಹಣ ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

 ಈ ಹಿಂದೆ ಎಟಿಎಂ ಸಮಸ್ಯೆ ಬಗ್ಗೆ ಬಣಕಲ್ ಕರ್ಣಾಟಕ ಬ್ಯಾಂಕ್ ಸಿಬ್ಬಂದಿ ಅವರ ಗಮನಕ್ಕೆ ತಂದಿದೆ. ಹಳೇ ಬ್ಯಾಟರಿ ಸಮಸ್ಯೆಯನ್ನು ಬಗೆಹರಿಸಲಾಗಿತ್ತು. ಆದರೆ ಹೊಸ ಬ್ಯಾಟರಿ ಹಾಕಿ 4 ತಿಂಗಳು ಕಳೆಯುವ ಮೊದಲೇ ಮತ್ತೇ ಬ್ಯಾಟರಿ ಬ್ಯಾಕಪ್ ಇಲ್ಲದೇ ಎಟಿಎಂ ಕಾರ್ಯನಿರ್ವಹಿಸುತ್ತಿಲ್ಲ. ವಿದ್ಯುತ್ ಇಲ್ಲದಿದ್ದರೆ ಎಟಿಎಂ ಇಲ್ಲ.ಎಟಿಎಂ ಸರಿ ಇದ್ದರೆ ಹಣ ಇಲ್ಲ ಎಂಬ ನೂರಾರು ಸಮಸ್ಯೆಯ ಸ್ಥಿತಿ ಬಣಕಲ್ ಕರ್ಣಾಟಕ ಬ್ಯಾಂಕ್ ಎಟಿಎಂನಿಂದ ಎದುರಾಗಿದೆ.

ಪ್ರವಾಸಿ ತಾಣವಾದ ಬಣಕಲ್‍ನಲ್ಲಿ ಹಣಕ್ಕಾಗಿ ಪ್ರವಾಸಿಗರು ಎಟಿಎಂ ಹುಡುಕುತ್ತಾ ಬಂದರೆ ಇಲ್ಲಿ ಎಟಿಎಂ ಬಾಗಿಲು ಸದಾ ಅರ್ಧ ಮುಚ್ಚಿರುತ್ತದೆ. ಸೆಕ್ಯೂರಿಟಿಯವರಲ್ಲಿ ಕೇಳಿದರೆ ಕರೆಂಟ್ ಹೊಯ್ತು ಸರ್, ಬ್ಯಾಟರಿ ನಿಲ್ಲುತ್ತಿಲ್ಲ. ಅಥವಾ ಎಟಿಎಂನಲ್ಲಿ ಹಣ ಖಾಲಿಯಾಗಿದೆ ಸಾರ್ ಎಂದು ಉತ್ತರಿಸುತ್ತಾರೆ.ಆದರೆ ಸದಾ ಜವಾಬ್ದಾರಿಯುತ ಬ್ಯಾಂಕ್‍ಗಳ ಎಟಿಎಂ ಸೇವೆ ಈ ರೀತಿ ನಿರ್ಲಕ್ಷ್ಯಕ್ಕೆ ಒಳಗಾದರೆ ಸಾರ್ವಜನಿಕರ ಸಮಸ್ಯೆ ಯಾರ ಬಳಿ ಹೇಳುವುದು ಎನ್ನುತ್ತಾರೆ ಸಾರ್ವಜನಿಕರು.

 ಈ ಬಗ್ಗೆ ಕರ್ಣಾಟಕ ಬ್ಯಾಂಕ್ ಅಧಿಕಾರಿ ಸಚಿನ್ ಅವರನ್ನು ಪತ್ರಿಕೆಯು ಎಟಿಎಂ ಬಗ್ಗೆ ವಿಚಾರಿಸಿದಾಗ, ಬಣಕಲ್‍ನಲ್ಲಿ 4 ತಿಂಗಳ ಹಿಂದೆ ಎಟಿಎಂ ಯೂಪಿಎಸ್‍ನ ಬ್ಯಾಟರಿ ಕೆಟ್ಟು ಹೋದದನ್ನು ಗುತ್ತಿಗೆ ಪಡೆದ ಗುತ್ತಿಗೆದಾರರು ಸರಿಪಡಿಸಿ ಬದಲಿ ಬ್ಯಾಟರಿ ಹಾಕಿದ್ದರು. ಆದರೆ ಇಲ್ಲಿನ ವಿದ್ಯುತ್ ವ್ಯವಸ್ಥೆ ಆಗಾಗ ಕೈಕೊಡುವುದರಿಂದ ಬ್ಯಾಟರಿ ಮತ್ತೇ ಹೋಗಿದೆ. ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರು ಗುರುವಾರ ತಂದು ಹಾಕುವುದಾಗಿ ಭರವಸೆ ನೀಡಿದ್ದಾರೆ ಎಂದು ಬ್ಯಾಂಕ್‍ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News