ಸಾಂಸ್ಕೃತಿಕ ಕಲೆಗಳಿಗೂ ಆಧ್ಯತೆ ನೀಡಿದರೆ ಭವಿಷ್ಯದಲ್ಲಿ ಅನುಕೂಲಕ್ಕೆ ಬರುತ್ತದೆ: ಸೋಮಶೇಖರ್

Update: 2017-09-13 14:56 GMT

ಚಿಕ್ಕಮಗಳೂರು, ಸೆ.13: ಪ್ರತಿಭಾ ಕಾರಂಜಿಯಂತಹ ವೇದಿಕೆಯನ್ನು ಸದುಪಯೋಗಪಡಿಸಿಕೊಂಡು ಶಿಕ್ಷಣದ ಜೊತೆಗೆ ಸಾಂಸ್ಕೃತಿಕ  ಕಲೆಗಳಿಗೂ ಆಧ್ಯತೆ ನೀಡಿದರೆ ಭವಿಷ್ಯದಲ್ಲಿ ಅನುಕೂಲಕ್ಕೆ ಬರುತ್ತದೆ ಎಂದು ಜಿಪಂ ಸದಸ್ಯ ಸೋಮಶೇಖರ್ ಅಭಿಪ್ರಾಯಿಸಿದರು.

ಅವರು ಬುಧವಾರ ತಾಲ್ಲೂಕಿನ ಚಿಕ್ಕನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಕರ್ತಿಕೆರೆ ಕ್ಲಸ್ಟರ್ ಮಟ್ಟದ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಸಾಂಸ್ಕೃತಿಕ ಹಬ್ಬ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಮಾತನಾಡಿದರು. ಬಹಳಷ್ಟು ಮಕ್ಕಳಲ್ಲಿ ಪ್ರತಿಭೆ ಇದ್ದರೂ ಅದನ್ನು ಹೊರ ತರಲು ವೇದಿಕೆಗಳು ಸಿಗುವುದಿಲ್ಲ. ಈ ದೃಷ್ಠಿಯಿಂದ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ ಆಗಬಲ್ಲದು. ಶಿಕ್ಷಕರು ಹಾಗೂ ಪೋಷಕರು ಇದಕ್ಕೆ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.

ಸರ್ಕಾರದಿಂದ ಯಾವುದೇ ಅನುದಾನವಿಲ್ಲದೆ ಗ್ರಾಮೀಣ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಲು ಗ್ರಾಮಸ್ಥರು, ಪೋಷಕರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಸಂಪನ್ಮೂಲ ವ್ಯಕ್ತಿಗಳು ಹಾಗೂ ಶಿಕ್ಷಕರ ಆಸಕ್ತಿ ಮತ್ತು ನೆರವಿನಿಂದ ಯಶಸ್ವಿಯಾಗಲು ಕಾರಣವಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಪರಮೇಶ್ವರ್ ಮಾತನಾಡಿ, ಶಿಕ್ಷಕರು ಮತ್ತು ಪೋಷಕರು ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಅವರಲ್ಲಿ ಭಾಗವಹಿಸುವ ಹುರುಪು, ದೈರ್ಯ ಬರುತ್ತದೆ ಇದು ಮುಂದಿನ  ಭವಿಷ್ಯಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದರು.

 ಎಸ್‍ಡಿಎಂಸಿ ಅಧ್ಯಕ್ಷ ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಸದಸ್ಯ ಜಯಣ್ಣ, ಕರ್ತಿಕೆರೆ ಗ್ರಾ.ಪಂ.ಸದಸ್ಯ ಆನಂದರಾಜ್ ಅರಸ್, ಬಸವೇಗೌಡ, ಲೋಕೇಶ್, ಸಿಆರ್‍ಪಿ ರಘು, ಗ್ರಾ.ಪಂ.ಕಾರ್ಯದರ್ಶಿ, ಕಿರಣ್, ಸರೋಜಮ್ಮ, ಕೆಂಪಣ್ಣ, ನಿವೃತ್ತ ಶಿಕ್ಷಕ ಎ.ಎಸ್.ಸುರೇಶ್ ಇತರರು ಹಾಜರಿದ್ದರು. ಮುಖ್ಯೋಪಾಧ್ಯಾಯಿನಿ ಇಂದಿರಮ್ಮ ಸ್ವಾಗತಿಸಿದರು. ಸುರೇಶ್ ನಿರೂಪಿಸಿ, ಆಶಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News