ರಾಜಕಾಲುವೆ ಮೇಲೆ ನಿರ್ಮಾಣ ಮಾಡಿರುವ ಕಟ್ಟಡಗಳ ತೆರವಿಗೆ ಸಿಎಂ ಆದೇಶ
ಬೆಂಗಳೂರು, ಸೆ.13: ನಗರದ ಜೆ.ಸಿ ರಸ್ತೆಯ ಕುಂಬಾರಗುಂಡಿಯಲ್ಲಿ ರಾಜಕಾಲುವೆ ಮೇಲೆ ನಿರ್ಮಾಣ ಮಾಡಿರುವ ಮೂರುಕಟ್ಟಡಗಳನ್ನು ಸೂಕ್ತ ಪರಿಹಾರಕೊಟ್ಟು ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ನಗರದಲ್ಲಿ ಸುರಿದ ಮಳೆಯಿಂದಾದ ಹಾನಿಗೊಳಗಾದ ಸ್ಥಳ ವೀಕ್ಷಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ನಗರ ಪ್ರದಕ್ಷಿಣೆ ನಡೆಸಿದರು.
ದೇವರಾಜ ಅರಸು ಕಾಲದಲ್ಲೇ ಜೆ.ಸಿ.ರಸ್ತೆಯ ರಾಜಕಾಲುವೆ ಮೇಲೆ ಕಟ್ಟಡ ನಿರ್ಮಾಣಕ್ಕೆ ಕಾನೂನಾತ್ಮಕವಾಗಿ ಅನುಮತಿ ನೀಡಲಾಗಿದೆ. ಆದರೆ ಸದ್ಯ ರಾಜಕಾಲುವೆಯಲ್ಲಿ ಮಳೆಗಾಲದಲ್ಲಿ ನೀರಿನ ಹರಿವು ಹೆಚ್ಚಾಗುತ್ತಿರುವುದರಿಂದ ಕಾಲುವೆ ನೀರು ಮನೆಗಳಿಗೆ, ಅಂಗಡಿಗಳಿಗೆ ನುಗ್ಗುತ್ತಿದೆ. ಇದನ್ನು ತಪ್ಪಿಸಲು ಕೂಡಲೆ ಸೂಕ್ತ ಪರಿಹಾರ ಕೊಟ್ಟು ಕಟ್ಟಡಗಳನ್ನು ಕೆಡವಲು ಸೂಚನೆ ನೀಡಿದರು.
ಶಾಂತಿನಗರದ ಬಿಎಂಟಿಸಿ ಕಾರ್ಯಾಗಾರದ ಬಳಿ ಹರಿಯುವ ರಾಜಕಾಲುವೆ ಅಭಿವೃದ್ಧಿಗೆ ಕೂಡಲೆ ಕ್ರಮ ಕೈಗೊಳ್ಳಬೇಕು. ಮತ್ತೆ ಕಾರ್ಯಾಗಾರಕ್ಕೆ ನೀರು ತುಂಬದಂತೆ ಎಚ್ಚರವಹಿಸಬೇಕು ಎಂದು ಸ್ಥಳೀಯ ಶಾಸಕ ಎನ್.ಎ.ಹಾರಿಸ್ ಅವರಿಗೆ ಸೂಚಿಸಿದರು.
ನಂತರ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ರಾಜಕಾಲುವೆಯಿಂದ ಆಗುತ್ತಿದ್ದ ಅವಾಂತರಗಳನ್ನು ಮುಖ್ಯಮಂತ್ರಿ ಪರಿಶೀಲಿಸಿದರು. ಸ್ಥಳೀಯರು ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಬಳಿ ಸುರಿಮಳೆಗೈದರು. ಈ ಭಾಗದಲ್ಲಿ ಮತ್ತೆ ಇದೇ ಪರಿಸ್ಥಿತಿ ಮರುಕಳಿಸದಂತೆ ಎಚ್ಚರಿಕೆವಹಿಸಬೇಕು. ಮೂರು ತಿಂಗಳೊಳಗೆ ರಾಜಕಾಲುವೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಬಳಿಕ ಉದಯನಗರ ಪೈ ಲೇಔಟ್ ರಾಜಕಾಲುವೆ ದುರಸ್ಥಿಯನ್ನು ವೀಕ್ಷಿಸಿದರು. ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ಕೂಡಲೆ ತೆರವುಗೊಳಿಸಲು ಸೂಚಿಸಿದರು. ರಾಜಕಾಲುವೆ ಅಭಿವೃದ್ಧಿಗೆ ಸ್ಥಳೀಯ ಸಾಸಕ ಬಿ.ಎ.ಬಸವರಾಜ ಅವರು 25 ಕೋಟಿ ರೂ. ಬೇಡಿಕೆ ಇಟ್ಟರು.
ಕೈಕೊಟ್ಟ ಬಸ್: ನಗರ ಪ್ರದಕ್ಷಿಣೆಯನ್ನು ಪೀಕ್ ಅವರ್ಸ್‌ನಲ್ಲಿ ಆರಂಭಿಸಿದ್ದರಿಂದ ಮುಖ್ಯಮಂತ್ರಿಗಳ ತಂಡ ಸಂಚಾರದಟ್ಟಣೆಯಲ್ಲಿ ಸಿಲುಕಿಕೊಂಡಿತು. ಇದರಿಂದಾಗಿ ಪ್ರದಕ್ಷಿಣೆ ಸುಮಾರು ಎರಡು ಗಂಟೆಗಳ ಕಾಲ ವಿಳಂಬವಾಯಿತು. ಪ್ರದಕ್ಷಿಣೆಗೆ ಮುಖ್ಯಮಂತ್ರಿಗಳ ತಂಡ ಹತ್ತಿದ್ದ ವಜ್ರ ಬಸ್‌ನಲ್ಲಿ ಹವಾನಿಯಂತ್ರಿತ ಯಂತ್ರ ಕೈಕೊಟ್ಟದ್ದಿರಿಂದ ಶಾಂತಿನಗರದ ಬಿಎಂಟಿಸಿ ಕಾರ್ಯಾಗಾರದಲ್ಲಿ ಬಸ್‌ನ್ನು ಬದಲಾಯಿಸಲಾಯಿತು. ಮಾರ್ಗಮಧ್ಯೆಯಲ್ಲಿ ಬದಲಾಯಿಸಿದ ಬಸ್ ಕೂಡ ತಾಂತ್ರಿಕ ದೋಷದಿಂದ ಕೈಕೊಟ್ಟಿತು. ಇಂದರಿಂದಾಗಿ ದೂರವಾಣಿ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಯಿತು. ಸಾರ್ವಜನಿಕರು ಮುಖ್ಯಮಂತ್ರಿಗಳ ತಂಡಕ್ಕೆ ಹಿಡಿ ಶಾಪಹಾಕಿದರು.
ಪ್ರದಕ್ಷಿಣೆ ಅರ್ಧಕ್ಕೆ ಮೊಟಕು:ದೂರವಾಣಿನಗರದಲ್ಲಿ ಬಸ್ ಕೆಟ್ಟು ನಿಲ್ಲುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೇಯರ್ ಪದ್ಮಾವತಿ ಸೇರಿದಂತೆ ಹಿರಿಯ ಅಧಿಕಾರಿಗಳು ಪ್ರದಕ್ಷಿಣೆಯನ್ನು ಮೊಟಕುಗೊಳಿಸಿ ಬೇರೊಂದು ಕಾರ್ಯಕ್ರಮಕ್ಕೆ ಕಾರುಗಳಲ್ಲಿ ತೆರಳಿದರು. ಅಲ್ಲದೆ ನಗರ ಪ್ರದಕ್ಷಿಣೆ ಬಳಿಕ ನಡೆಸಬೇಕಿದ್ದ ಪತ್ರಿಕಾಗೋಷ್ಠಿಯನ್ನು ರದ್ದುಪಡಿಸಿದರು.
ನಗರ ಪ್ರದಕ್ಷಿಣೆ ವೇಳೆ ಮುಖ್ಯಮಂತ್ರಿ ಜೊತೆ ಬೆಂಗಳೂರು ಸಚಿವರಾದ ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಆರ್. ರೋಷನ್‌ಬೇಗ್, ಎಚ್.ಎಂ. ರೇವಣ್ಣ, ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ವಿ.ದೇವರಾಜ್, ಮೇಯರ್ ಜಿ. ಪದ್ಮಾವತಿ, ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್, ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಸೇರಿದಂತೆ ಇನ್ನಿತರರು ಇದ್ದರು.