ಬಿಜೆಪಿ ನಾಯಕರಿಂದ ಸಿದ್ಧಗಂಗಾ ಶ್ರೀಗೆ ‘ಭಾರತ ರತ್ನ ಪ್ರಶಸ್ತಿ’ಯ ಆಮಿಷ: ಮಾತೆ ಮಹಾದೇವಿ ಆರೋಪ

Update: 2017-09-13 15:25 GMT

ಬಾಗಲಕೋಟೆ, ಸೆ.13: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಮಾಜಿ ಸಚಿವ ವಿ.ಸೋಮಣ್ಣ ಸೇರಿದಂತೆ ಕೆಲ ಬಿಜೆಪಿ ನಾಯಕರು ಸಿದ್ಧಗಂಗಾ ಮಠಾಧೀಶ ಶಿವಕುಮಾರ ಸ್ವಾಮೀಜಿಗೆ ‘ಭಾರತ ರತ್ನ’ ಪ್ರಶಸ್ತಿ ಕೊಡಿಸುವ ಆಮಿಷವೊಡ್ಡಿದ್ದಾರೆ ಎಂದು ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಆರೋಪಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವೀರಶೈವ-ಲಿಂಗಾಯತ ವಿಚಾರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಯಲ್ಲಿ ತಾವು ತಟಸ್ಥವಾಗಿರಬೇಕೆಂದು ಸಿದ್ಧಗಂಗಾ ಶ್ರೀಗಳ ಮೇಲೆ ಒತ್ತಡ ಹೇರಲಾಗಿದೆ. ಕೇವಲ ಪ್ರಶಸ್ತಿಗಾಗಿ ಸ್ವಾಮೀಜಿ ಮಾತು ತಿರುಗಿಸಬಾರದು ಎಂದು ಆಗ್ರಹಿಸಿದರು.

ಶತಾಯುಷಿಯಾಗಿರುವ ಶಿವಕುಮಾರಸ್ವಾಮೀಜಿಗೆ ವಯಸ್ಸಾಗಿದ್ದು, ನೆನಪಿನ ಶಕ್ತಿ ಕುಂದಿದೆ. ಬೇಲಿಮಠದ ಶ್ರೀಗಳನ್ನು ಯಾರು ಎಂದು ಶಿವಕುಮಾರ ಸ್ವಾಮೀಜಿ ಕೇಳಿದ್ದರು. ಎಂ.ಬಿ.ಪಾಟೀಲ್ ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ಅವರೊಂದಿಗೆ ಮಾತನಾಡಿದ್ದಾರೆ. ಆನಂತರ, ಮಠದಿಂದ ಎರಡು ಪತ್ರಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.

ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ಪ್ರಶಸ್ತಿಯ ಆಮಿಷವೊಡ್ಡಿರುವ ಕುರಿತು ಖಚಿತ ಮಾಹಿತಿ ಸಿಕ್ಕಿದೆ. ಶೀಘ್ರದಲ್ಲಿಯೆ ಅದನ್ನು ಸಾಬೀತುಪಡಿಸುತ್ತೇವೆ ಎಂದ ಅವರು, ವೀರಶೈವ ಮಹಾಸಭಾದವರು ಸಿದ್ಧಗಂಗಾ ಶ್ರೀಗಳ ಮೇಲೆ ಒತ್ತಡ ಹೇರಿ ತಮಗೆ ಬೇಕಾದುದ್ದನ್ನು ಬರೆದುಕೊಂಡು ನಂತರ ಶ್ರೀಗಳ ಸಹಿ ತೆಗೆದುಕೊಂಡು ಪತ್ರಿಕಾ ಹೇಳಿಕೆಯನ್ನು ಹೊರಡಿಸಿದ್ದಾರೆ ಎಂದು ಆರೋಪಿಸಿದರು.

ವೀರಶೈವ-ಲಿಂಗಾಯತ ಎರಡೂ ಒಂದೆ ಎಂಬುದನ್ನು ನಾವು ಒಪ್ಪುವುದಿಲ್ಲ. ಲಿಂಗಾಯತ ಸ್ವತಂತ್ರ ಧರ್ಮವಾಗಿದ್ದು, ಈ ಬಗ್ಗೆ ಸಿದ್ಧಗಂಗಾ ಶ್ರೀಗಳು ಹೇಳಿಕೆ ನೀಡಿದರೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News