‘ಕಾರವಾರ-ಅಂಕೋಲಾ ಪಟ್ಟಣಗಳಿಗೆ ನೀರು ಸರಬರಾಜು’ : ಸಚಿವ ಸಂಪುಟ ಅನುಮೋದನೆ

Update: 2017-09-13 15:13 GMT

ಬೆಂಗಳೂರು, ಸೆ.13: ಬಹುದಿನಗಳ ಬೇಡಿಕೆಯಾದ ಕಾರವಾರ ಮತ್ತು ಅಂಕೋಲಾ ಪಟ್ಟಣಗಳ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಉದ್ದೇಶದಿಂದ ಗಂಗಾವಳಿ ನದಿಗೆ ಬ್ಯಾರೇಜನ್ನು ನಿರ್ಮಿಸಲು 158.62 ಕೋಟಿ ರೂ.ವೆಚ್ಚದ ವಿಶೇಷ ಯೋಜನೆಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ಮುಖ್ಯವಾಗಿ ಬೇಸಿಗೆಯಲ್ಲಿ ಕರಾವಳಿ ಭಾಗದ ನದಿಗಳಲ್ಲಿ ನೀರಿನ ಪ್ರಮಾಣ ತೀವ್ರ ಇಳಿಮುಖವಾಗಿ ಪ್ರತಿವರ್ಷವೂ ಕಾರವಾರ, ಅಂಕೋಲಾ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿತ್ತು. ಈ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ರಾಜ್ಯ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯು ಗಂಗಾವಳಿ ನದಿಗೆ ಬ್ಯಾರೇಜನ್ನು ನಿರ್ಮಿಸಿ ನೀರಿನ ಅಭಾವವಿರುವ ಈ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು 158.62 ಕೋಟಿ ರೂ.ವೆಚ್ಚದ ವಿಶೇಷ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿತ್ತು ಎಂದು ಅವರು ಹೇಳಿದ್ದಾರೆ.

ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸಚಿವ ಸಂಪುಟ ಸಭೆಯಲ್ಲಿ ಯೋಜನೆಯ ಜಾರಿಗೆ ಹಸಿರು ನಿಶಾನೆ ನೀಡಲಾಗಿದೆ. ಈ ಯೋಜನೆ ಜಾರಿಗೊಂಡಲ್ಲಿ ಕಾರವಾರ, ಅಂಕೋಲಾ ಪಟ್ಟಣಗಳಲ್ಲದೆ ಸುತ್ತಮುತ್ತಲಿನ ಅಮದಳ್ಳಿ, ಚೆಂಡಿಯಾ, ತೋಡೂರು, ಅರ್ಗಾ, ಬೇಲೇಕೇರಿ, ಅವರ್ಸಾ, ಶಿರಕುಳಿ, ಅಗಸೂರು, ವಂದಿಗೆ-ಶೆಟಗೇರಿ, ಬೊಬ್ರುವಾಡ, ಹಾರವಾಡ, ಬೆಳಂಬಾರ, ಹಟ್ಟಿಕೇರಿ ಮುಂತಾದ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿನ ಪ್ರದೇಶಗಳ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಲಸಂಪನ್ಮೂಲ ಇಲಾಖೆಗಳೂ ಈ ಪ್ರಸ್ತಾವನೆಗೆ ಈಗಾಗಲೇ ಒಪ್ಪಿಗೆ ಸೂಚಿಸಿವೆ ಎಂದು ಆರ್.ವಿ. ದೇಶಪಾಂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News