ಮೈಸೂರು ದಸರ ಪ್ರಯುಕ್ತ ಸೆ.21ರಿಂದ 29ರವರೆಗೆ ಪುಸ್ತಕ ಮೇಳ

Update: 2017-09-13 15:37 GMT

ಬೆಂಗಳೂರು, ಸೆ.13: ಮೈಸೂರು ದಸರಾ ಪ್ರಯುಕ್ತ ಸೆ.21ರಿಂದ 29ರವರೆಗೆ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಮೈಸೂರಿನಲ್ಲಿ ಪುಸ್ತಕ ಮೇಳವನ್ನು ಆಯೋಜಿಸಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ ತಿಳಿಸಿದ್ದಾರೆ.

 ಬುಧವಾರ ಕನ್ನಡ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕನ್ನಡ ಪುಸ್ತಕ ಪ್ರಾಧಿಕಾರವು ಉಚಿತವಾಗಿ ಪುಸ್ತಕ ಮೇಳವನ್ನು ಆಯೋಜಿಸಿದ್ದು, ಪುಸ್ತಕ ಪ್ರಕಾಶಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಆ ಮೂಲಕ ಓದುಗರಿಗೆ ಸದಭಿರುಚಿಯ ಪುಸ್ತಕಗಳು ದೊರೆಯುವಂತಾಗಲಿ ಎಂದು ಆಶಿಸಿದರು.

ಪುಸ್ತಕ ಮೇಳದ ಪ್ರಯುಕ್ತ ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನನ್ನ ಮೆಚ್ಚಿನ ಪುಸ್ತಕ, ರಸ ಪ್ರಶ್ನೆ ಹಾಗೂ ಕವಿಗೋಷ್ಠಿ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಾಹಿತ್ಯಾಸಕ್ತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ವೆಬ್‌ಸೈಟ್ ನವೀಕರಣ: ಕನ್ನಡ ಪುಸ್ತಕ ಪ್ರಾಧಿಕಾರದ ವೆಬ್‌ಸೈಟ್‌ನ್ನು ಪ್ರಸ್ತುತ ವಿದ್ಯಾಮಾನಕ್ಕೆ ತಕ್ಕಂತೆ ಉನ್ನತೀಕರಿಸಲಾಗುವುದು. ಹಾಗೂ ಪ್ರಾಧಿಕಾರದ ಪ್ರಕಟಿತ ಪುಸ್ತಕಗಳನ್ನು ಆನ್‌ಲೈನ್ ಮೂಲಕ ಆಸಕ್ತರಿಗೆ ತಲುಪಿಸಲು ಅಗತ್ಯವಿರುವಂತೆ ಸಿರಿಗನ್ನಡ ಮಾರಾಟ ಮಳಿಗೆಯ ತಂತ್ರಜ್ಞಾನವನ್ನು ಪರಿಷ್ಕರಿಸಲಾಗುವುದು ಎಂದು ಅವರು ಹೇಳಿದರು.

ಕನ್ನಡ ಪುಸ್ತಕೋದ್ಯಮ ಹುಟ್ಟಿ ಬೆಳೆದ ಹಂತಗಳನ್ನು ದಾಖಲಿಸಲು ಚಿಂತನೆ ನಡೆಸಲಾಗುತ್ತಿದ್ದು, ಇದಕ್ಕೆ ಒಂದು ಸಮಿತಿಯನ್ನು ರಚಿಸಲಾಗುವುದು. ತದನಂತರ ಪುಸ್ತಕೋದ್ಯಮ ಬೆಳದು ಬಂದ ರೀತಿಯಲ್ಲಿ ಕೂಲಂಕಶವಾಗಿ ಅಧ್ಯಯನ ನಡೆಸಿ ಸಂಪುಟಗಳನ್ನು ಹೊರ ತರಲಾಗುವುದು ಎಂದು ಅವರು ಹೇಳಿದರು.

ಗೌರಿ ಲಂಕೇಶ್ ವೇದಿಕೆ

ಮೈಸೂರು ದಸರ ಪ್ರಯುಕ್ತ ಕನ್ನಡ ಪುಸ್ತಕ ಪ್ರಾಧಿಕಾರ ವತಿಯಿಂದ ಮೈಸೂರಿನಲ್ಲಿ ಆಯೋಜಿಸಿರುವ ಪುಸ್ತಕ ಮೇಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ವೇದಿಕೆಗೆ ಗೌರಿ ಲಂಕೇಶ್ ವೇದಿಕೆ ಎಂದು ಹೆಸರಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News