ಬಿಎಸ್‌ವೈ 257 ಎಕರೆ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ ಎಂಬುದು ಎಷ್ಟು ಸರಿ

Update: 2017-09-13 15:55 GMT

ಬೆಂಗಳೂರು, ಸೆ.13: ಡಾ. ಕೆ. ಶಿವರಾಮಕಾರಂತ ಬಡಾವಣೆಗಾಗಿ ವಶಪಡಿಸಿಕೊಂಡಿದ್ದ ಜಮೀನಿನಲ್ಲಿ ರಾಜ್ಯ ಸರಕಾರವೇ 1300 ಎಕರೆ ಜಮೀನನ್ನು ಡಿನೋಟಿಫೈ ಮಾಡಿರುವಾಗ, ಯಡಿಯೂರಪ್ಪ ಅವರು 257 ಎಕರೆ ಜಮೀನನ್ನು ಅಕ್ರಮವಾಗಿ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟು ಸರಕಾರಕ್ಕೆ ಕೋಟ್ಯಂತರ ರೂ. ನಷ್ಟ ಉಂಟು ಮಾಡಿದ್ದಾರೆ ಎಂಬ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ವಾದ ಎಷ್ಟು ಸರಿ ಎಂದು ಯಡಿಯೂರಪ್ಪ ಪರ ವಕೀಲರು ಪ್ರಶ್ನಿಸಿದ್ದಾರೆ.

ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಶನ್ ಪ್ರಕರಣ ಸಂಬಂಧ ಎಸಿಬಿ ದಾಖಲಿಸಿರುವ ಎಫ್‌ಐಆರ್‌ಗಳ ರದ್ದು ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಪೀಠದಲ್ಲಿ ಬುಧವಾರ ನಡೆಯಿತು.

ಅರ್ಜಿ ವಿಚಾರಣೆ ವೇಳೆ ಯಡಿಯೂರಪ್ಪ ಪರ ವಾದ ಮುಂದುವರಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್, ಅರ್ಜಿದಾರರು 2010ರಲ್ಲಿ 257 ಎಕರೆ ಜಮೀನು ಡಿನೋಟಿಫೈ ಮಾಡಲು ಆದೇಶಿಸಿದ್ದರೆಂದು ಅವರ ವಿರುದ್ಧ ದೂರು ದಾಖಲಿಸಲಾಗಿದೆ. ಆದರೆ 2013ರಲ್ಲಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಸರಕಾರ 2014ರ ಎಪ್ರಿಲ್-ಮೇ ಅವಧಿಯಲ್ಲಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ 1300 ಎಕರೆ ಜಮೀನು ಕೈಬಿಟ್ಟಿದೆ. ಇದರಲ್ಲಿ ಶಾಸಕ ಭೈರತಿ ಬಸವರಾಜು ಹಾಗೂ ಅವರ ಕುಟುಂಬ ಸದಸ್ಯರಿಗೆ ಸೇರಿದ ಸುಮಾರು 30 ಎಕರೆ ಜಮೀನು ಸಹ ಸೇರಿದೆ. 1300 ಎಕರೆ ಜಮೀನನ್ನು ಈಗಿನ ಸರಕಾರವೇ ಕೈಬಿಟ್ಟಿರುವಾಗ, ಅರ್ಜಿದಾರರು 257 ಎಕರೆ ಜಮೀನು ಕೈಬಿಡಲು ಆದೇಶಿಸಿರುವುದರಿಂದ ನಷ್ಟವಾಗಿದೆ ಎಂಬ ವಾದ ಒಪ್ಪಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಜಮೀನು ಕೈಬಿಡುವಂತೆ ಆಶಾ ಪರದೇಶಿ ಎಂಬವರು ಸಲ್ಲಿಸಿರುವ ಮನವಿಯ ಮೇರೆಗೆ ಅರ್ಜಿದಾರರು ಜಮೀನು ಕೈಬಿಟ್ಟಿದ್ದಾರೆ. ಆದರೆ ವಾಸ್ತವದಲ್ಲಿ ಆಶಾ ಪರದೇಶಿ ಎಂಬುವರೇ ಇಲ್ಲ ಎಂದು ಎಸಿಬಿ ಹೇಳುತ್ತದೆ. ಆದರೆ ಆಶಾ ಪರದೇಶಿಯವರೇ ಜಮೀನಿನ ಮಾಲಕರು ಎಂಬ ವಿಷಯ ತಿಳಿದಿದ್ದ ಎಸಿಬಿ, ಅವರ ಹೇಳಿಕೆ ಪಡೆಯುವ ಸಲುವಾಗಿ ಅವರ ಬಳಿ ತೆರಳಿತ್ತು. ಆಕೆಯ ಮಾಲಕತ್ವದ ಕುರಿತು ಪುರಾವೆಯಿದ್ದರೂ ಎಸಿಬಿ ಕೋರ್ಟ್‌ಗೆ ಸುಳ್ಳು ಮಾಹಿತಿ ನೀಡಿದೆ ಎಂದು ಸಿ.ವಿ.ನಾಗೇಶ್ ಆರೋಪಿಸಿದರು.

ಆಶಾ ಪರದೇಶಿ ಅವರು 2005ರಲ್ಲೇ ಮೂಲ ಭೂಮಾಲಕರಿಂದ ಜಮೀನು ಖರೀದಿಸಿದ್ದಾರೆ. 2008ರಲ್ಲಿ ಭೂಸ್ವಾಧೀನಕ್ಕಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಒಂದೊಮ್ಮೆ ಆಶಾ ಪರದೇಶಿ ಎಂಬುವರು ಇಲ್ಲವೆಂಬುದೇ ನಿಜವಾದರೂ, ಅವರ ಹೆಸರಿನಲ್ಲಿ ಜಮೀನು ಕೈಬಿಟ್ಟಿರುವುದು ಅಕ್ರಮವಾಗುವುದಿಲ್ಲ. ಪವರ್‌ಫುಲ್ ಸಚಿವರೊಬ್ಬರು ಸತ್ತವರ ಹೆಸರಿನಲ್ಲಿ ಅರ್ಜಿ ಸಲ್ಲಿಸಿ ಜಮೀನು ಡಿನೋಟಿಫೈ ಮಾಡಿಸಿದ್ದಾರೆಂಬ ಆರೋಪದ ಸಂಬಂಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಇದೇ ಹೈಕೋರ್ಟ್ ರದ್ದುಗೊಳಿಸಿದೆ. ಆದರೆ ಈ ಪ್ರಕರಣದಲ್ಲಿ ಜಮೀನಿನ ಮಾಲಕರೆ ಭೂಮಿಯನ್ನು ಕೈಬಿಡುವಂತೆ ಕಾನೂನುಬದ್ಧವಾಗಿಯೇ ಅರ್ಜಿ ಸಲ್ಲಿಸಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಯಡಿಯೂರಪ್ಪ ಅವರು 257 ಎಕರೆ ಜಮೀನು ಕೈಬಿಡುವಂತೆ ಬಿಡಿಎಗೆ ಪತ್ರ ಬರೆದಿದ್ದರಾದರೂ, ಜಮೀನು ಕೈಬಿಡಲು ಸಾಧ್ಯವಿಲ್ಲವೆಂದು ಬಿಡಿಎ ತಿಳಿಸಿತ್ತು. ಡಿನೋಟಿಫಿಕೇಶನ್ ಆದೇಶವೇ ಜಾರಿಯಾಗದಿರುವಾಗ ಅಕ್ರಮ ನಡೆಯಲು ಹೇಗೆ ಸಾಧ್ಯ? ಅರ್ಜಿದಾರರಿಗೆ ಕಿರುಕುಳ ನೀಡುವ ಉದ್ದೇಶದಿಂದಲೇ ಸಾಕ್ಷಾಧಾರಗಳಿಲ್ಲದಿದ್ದರೂ ಅವರ ವಿರುದ್ಧದ ಒಂದೇ ದೂರಿನ ಆಧಾರದ ಮೇಲೆ ಹಲವು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಆರೋಪಿಸಿದರು.

ವಾದ ಆಲಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News