ನಗರಸಭೆಗೆ ಸರಕಾರ ಅನುದಾನ ನೀಡಿದೆ : ಅಬ್ದುಲ್ ರಝಾಕ್ ಸ್ಪಷ್ಟನೆ

Update: 2017-09-13 16:11 GMT

ಮಡಿಕೇರಿ, ಸೆ. 13 : ಮಡಿಕೇರಿ ನಗರಸಭಾ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ 2017-18ನೇ ಸಾಲಿನಲ್ಲಿ ಸರಕಾರ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿದ್ದು, ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗಿದೆ. ಆದರೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲವೆಂದು ಬಿಜೆಪಿ ಸದಸ್ಯರು ವಿನಾಕಾರಣ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಯು.ಅಬ್ದುಲ್ ರಝಾಕ್ ಆರೋಪಿಸಿದ್ದಾರೆ. 

ಪತ್ರಿಕಾ ಹೇಳಿಕೆ ನೀಡಿರುವ ಅವರು ಮಳೆಯ ಕಾರಣದಿಂದ ಕಾಮಗಾರಿಗಳು ಆರಂಭಗೊಳ್ಳಲು ವಿಳಂಬವಾಗಿದೆ. ಜಿಲ್ಲಾಧಿಕಾರಿಗಳ ಕಾರ್ಯಾಲಯದ ಜಿಲ್ಲಾ ನಗರಾಭಿವೃದ್ಧಿ ಕೋಶ ಎಲ್ಲಾ ಕಾಮಗಾರಿಗಳಿಗೆ ಅನುಮತಿ ನೀಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ನಗರಸಭೆಯ ವಿಪಕ್ಷ ಸದಸ್ಯರಿಗೆ ಮಡಿಕೇರಿ ನಗರದ ಅಭಿವೃದ್ಧಿ ಕಾರ್ಯಗಳು ಬೇಕಾಗಿಲ್ಲ. ಬದಲಿಗೆ ಆಡಳಿತ ಪಕ್ಷದವರನ್ನು ಟೀಕಿಸುವುದೇ  ಮಹತ್ಕಾರ್ಯ ಎನ್ನುವ ಭ್ರಮೆಯಲ್ಲಿದ್ದಾರೆ ಎಂದು ಕೆ.ಯು.ಅಬ್ದುಲ್ ರಝಾಕ್ ಟೀಕಿಸಿದ್ದಾರೆ.

 2017-18 ನೇ ಸಾಲಿನ 14ನೇ ಹಣಕಾಸು ಆಯೋಗದ ಸಾಮಾನ್ಯ ಮೂಲದ ಅನುದಾನ ರೂ.138 ಲಕ್ಷ ಟೆಂಡರ್ ಆಗಿದೆ. ಎಸ್.ಎಫ್.ಸಿ ಮುಕ್ತನಿಧಿ ಮತ್ತು ನಗರಸಭಾ ನಿಧಿಯ ಕ್ರಿಯಾಯೋಜನೆಗೆ ರೂ. 149 ಲಕ್ಷ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಹೈಟೆಕ್ ಮಾರುಕಟ್ಟೆ ನವೀಕರಣಕ್ಕೆ ನಗರೋತ್ಥಾನ ಕಾರ್ಯ ಒಂದನೇ ಹಂತದಲ್ಲಿ ರೂ. 300 ಲಕ್ಷ ಮಂಜೂರಾತಿಯಾಗಿದ್ದು, ಕಾಮಾಗಾರಿ ಪ್ರಗತಿಯಲ್ಲಿದೆ. ಈಗಾಗಲೇ ರೂ. 237 ಲಕ್ಷ ಖರ್ಚಾಗಿದೆ. ನೂತನ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ರೂ. 499 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಈಗಾಗಲೇ ಕಾಮಗಾರಿಗೆ 38 ಲಕ್ಷ ರೂ. ವಿಯೋಗವಾಗಿದೆ.

 ಡಲ್ಟ್ ಮೂಲಕ ರೂ.375 ಹಾಗೂ ನಗರಸಭಾ ಅನುದಾನ ರೂ. 124 ಲಕ್ಷ ಆಗಿದೆ. ನಗರೋತ್ಥಾನದ 3ನೇ ಹಂತದ ಕಾಮಗಾರಿಯಡಿ ರೂ.2975 ಲಕ್ಷರೂ ಮಂಜೂರಾಗಿದ್ದು, ಕ್ರಿಯಾ ಯೋಜನೆ ಪ್ರಗತಿಯಲ್ಲಿದೆ. ನಾಡಹಬ್ಬ ಮಡಿಕೇರಿ ದಸರಾ ಹಿನ್ನೆಲೆಯಲ್ಲಿ ವಿವಿಧ ಕಾಮಗಾರಿಗಳಿಗೆ ನಗರಸಭೆಯಿಂದ ರೂ.12 ಲಕ್ಷ ಮಂಜೂರಾತಿ ನೀಡಲಾಗಿದೆ ಎಂದು ಕೆ.ಯು.ಅಬ್ದುಲ್ ರಝಾಕ್ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್.ಸೀತಾರಾಂ, ವಿಧಾನ ಪರಿಷತ್ ಸದಸ್ಯರಾದ ವೀಣಾಅಚ್ಚಯ್ಯ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಶಿವು ಮಾದಪ್ಪ ಅವರುಗಳು ಅನುದಾನ ಬಿಡುಗಡೆಗೆ ಸಾಕಷ್ಟು ಸಹಕಾರ ನೀಡಿದ್ದು, ಇನ್ನು ಮುಂದೆಯೂ ರಾಜ್ಯ ಸರಕಾರ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಹಣ ನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News