ಲಿಂಗಾಯತ ಸ್ವತಂತ್ರ ಧರ್ಮ : ತಜ್ಞರ ಸಮಿತಿ ರಚನೆಗೆ ಮುಖಂಡರ ನಿರ್ಧಾರ
ಬೆಂಗಳೂರು, ಸೆ.13: ಲಿಂಗಾಯತ ಸ್ವತಂತ್ರ ಧರ್ಮ ಸ್ಥಾಪನೆಗೆ ಎದುರಾಗಿರುವ ಗೊಂದಲಗಳ ನಿವಾರಣೆಗೆ ತಜ್ಞರ ಸಮಿತಿಯನ್ನು ರಚಿಸಲು ವೀರಶೈವ ಲಿಂಗಾಯತ ಸಮು ದಾಯದ ಮುಖಂಡರು ನಿರ್ಧರಿಸಿದ್ದಾರೆ.
ಬುಧವಾರ ನಗರದ ಸಚಿವ ಶರಣ ಪ್ರಕಾಶ್ ಪಾಟೀಲ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಸೌಹಾರ್ದ ಸಭೆಯಲ್ಲಿ ವೀರಶೈವ ಲಿಂಗಾಯತ ಮುಖಂಡರು ಪಾಲ್ಗೊಂಡು ಸಮಿತಿ ರಚಿಸಲು ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ.
ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಸೈದ್ಧಾಂತಿಕ, ಸಂವಿಧಾನಿಕ ಕಾನೂನಾತ್ಮಕ ಆಧಾರವಾಗಿ ಅಧ್ಯಯನ ಮಾಡಲು ಸಮಿತಿ ರಚಿಸಿ, ಸಮಿತಿ ನೀಡುವ ವರದಿ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲು ಸಭೆಯಲ್ಲಿ ಚರ್ಚಿಸಲಾಗಿದೆ.
ಸಭೆ ಬಳಿಕ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮಾತನಾಡಿ, ಸ್ವತಂತ್ರ ಧರ್ಮದ ಕುರಿತು ಎದುರಾಗಿರುವ ಗೊಂದಲಗಳ ನಿವಾರಣೆಗೆ ತಜ್ಞರ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಮುಂದಿನ ನಿರ್ಧಾರಗಳನ್ನು ಸಮಿತಿ ಸಲ್ಲಿಸುವ ವರದಿ ಬಳಿಕ ಮುಂದಿನ ಸಭೆಯಲ್ಲಿ ಆ ಬಗ್ಗೆ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್ತಿನ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಸಭೆ ಸೌಹಾರ್ದಯುತವಾಗಿ ನಡೆದಿದೆ. ಎರಡು ಬಣಗಳ ಮುಖಂಡರಿಗೂ ಮಾಧ್ಯಮದ ಮುಂದೆ ಹೋಗದಂತೆ ಸಲಹೆ ನೀಡಲಾಗಿದೆ. ಸಭೆ ಅಪೂರ್ಣವಾಗಿರುವದರಿಂದ ಮುಂದಿನ ದಿನಗಳಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಸಚಿವ ಬಸವರಾಜ ರಾಯರೆಡ್ಡಿ ಮಾತನಾಡಿ, ನಾವೆಲ್ಲರೂ ಒಟ್ಟಾಗಿ ಮುಂದಿನ ದಿನಗಳಲ್ಲಿ ಪ್ರತ್ಯೇಕ ಧರ್ಮದ ಬೇಡಿಕೆ ಸಲ್ಲಿಸುತ್ತೇವೆ. ಈ ಕುರಿತು ಇಂದಿನ ಸಭೆಯಲ್ಲಿ ಯಾವುದೇ ಅಂತಿಮ ನಿರ್ಧಾರವಾಗಿಲ್ಲ ಎಂದರು.