ಆಂಬ್ಯುಲೆನ್ಸ್ ಸೇವೆ ಒದಗಿಸುವ ಓಮ್ನಿ ವಾಹನಗಳನ್ನು ನೋಂದಣಿ ಮಾಡಿಕೊಳ್ಳದಂತೆ ಹೊರಡಿಸಿದ್ದ ಆದೇಶಕ್ಕೆ ಮಧ್ಯಂತರ ತಡೆ
ಬೆಂಗಳೂರು, ಆ.13: ಆಂಬ್ಯುಲೆನ್ಸ್ ಸೇವೆ ಒದಗಿಸುವ ಓಮ್ನಿ ವಾಹನಗಳನ್ನು ನೋಂದಣಿ ಮಾಡಿಕೊಳ್ಳದಂತೆ ಸಾರಿಗೆ ಇಲಾಖೆ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಬುಧವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಸಾರಿಗೆ ಇಲಾಖೆಯ ಆದೇಶ ಪ್ರಶ್ನಿಸಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್ ಅವರಿದ್ದ ಪೀಠ, ಮಾರುತಿ ಓಮ್ನಿ ವಾಹನಗಳನ್ನು ಆಂಬ್ಯುಲೆನ್ಸ್ ಸೇವೆಗೆ ನೋಂದಣಿ ಮಾಡಿಕೊಳ್ಳದಂತೆ ಸರಕಾರ ಹೊರಡಿಸಿರುವ ಆದೇಶ 2018ರ ಎಪ್ರಿಲ್ 1ರಿಂದ ಜಾರಿಗೆ ಬರಲಿರುವ ಕಾರಣ, ಅಲ್ಲಿಯವರೆಗೆ ನೋಂದಣಿ ಮಾಡಿಕೊಳ್ಳಲು ಅನುಮತಿ ನೀಡಿ ಮಧ್ಯಂತರ ಆದೇಶ ನೀಡಿತು. ಇದೇ ವೇಳೆ, ಅರ್ಜಿಯ ಸಂಬಂಧ ರಾಜ್ಯ ಹಾಗೂ ಕೇಂದ್ರ ಸರಕಾರ, ಸಾರಿಗೆ ಇಲಾಖೆಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಅ.4ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ವಾದಿಸಿದ ಅರ್ಜಿದಾರರ ಪರ ವಕೀಲರು, ಆಂಬ್ಯುಲೆನ್ಸ್ ಸೇವೆಗೆ ಓಮ್ನಿ ವಾಹನಗಳನ್ನು ಬಳಸುವುದನ್ನು ನಿಷೇಧಿಸುವ ಕುರಿತು ಸರಕಾರ ಕಳೆದ ಮೇ 10 ಮತ್ತು ಜೂ.5ರಂದು ಆದೇಶ ಹೊರಡಿಸಿದೆ. ಈ ಆದೇಶದ ಪ್ರಕಾರ 2018ರ ಎ.1ರಿಂದ ನಿಷೇಧ ಜಾರಿಗೆ ಬರಲಿದೆ. ಆದರೆ ಸಾರಿಗೆ ಇಲಾಖೆ ಈಗಲೇ ಎಲ್ಲ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಪತ್ರ ಬರೆದು ಆಂಬ್ಯುಲೆನ್ಸ್‌ಗೆ ಆಗಿ ಬಳಸುವ ಓಮ್ನಿ ವಾಹನಗಳನ್ನು ನೋಂದಣಿಯನ್ನು ನಿಲ್ಲಿಸುವಂತೆ ಆದೇಶಿಸಿದೆ. ಇದು ಕಾನೂನು ಬಾಹಿರ ಕ್ರಮವಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ರೋಗಿಗಳ ಸುರಕ್ಷತೆ ದೃಷ್ಟಿಯಿಂದ ಓಮ್ನಿ ವಾಹನಗಳನ್ನು ಆಂಬ್ಯುಲೆನ್ಸ್‌ಗೆ ಬಳಸುವುದು ಸರಿಯಲ್ಲ. ಹೀಗಾಗಿ ಅವುಗಳ ಬಳಕೆ ನಿರ್ಬಂಧಿಸಬೇಕೆಂದು ಸಾರಿಗೆ ಇಲಾಖೆಗೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಿಾರಸು ಮಾಡಿತ್ತು. ಅದರಂತೆ ಸಾರಿಗೆ ಇಲಾಖೆ ಮಾರುತಿ ಓಮ್ನಿ ವಾಹನಗಳನ್ನು ಆಂಬ್ಯುಲೆನ್ಸ್ ಸೇವೆಗಳಿಗೆ ಬಳಸುವುದನ್ನು ನಿಷೇಧಿಸಿತ್ತು.