×
Ad

ಅ.1 ರಂದು ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ

Update: 2017-09-13 23:06 IST

ಮಡಿಕೇರಿ,ಸೆ.13 ದುಬಾರೆಯಲ್ಲಿ ಅಕ್ಟೋಬರ್ 1 ರಂದು ಅಂತರರಾಷ್ಟ್ರೀಯ ಕಾಫಿ ದಿನಾಚರಣೆ ಮೂಲಕ ಕಾಫಿಯ ಸ್ವಾದಿಷ್ಟವನ್ನು ಪ್ರವಾಸಿಗರಿಗೆ ಪರಿಚಯಿಸಲು ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘ ತೀರ್ಮಾನಿಸಿದೆ.

ಗುಡ್ಡೆಹೊಸೂರಿನಲ್ಲಿ ಜರುಗಿದ ಕೊಡಗು ಮಹಿಳಾ ಜಾಗೃತಿ ಸಂಘದ  15 ನೇ ವಾರ್ಷಿಕ ಸಭೆಯಲ್ಲಿ ಈ ತೀರ್ಮಾನವನ್ನು ಸರ್ವ ಸದಸ್ಯೆಯರು ಕೈಗೊಂಡರು.

ಕಳೆದ ವರ್ಷ ಸಂಘವು ಆಯೋಜಿಸಿದ್ದ ಅಂತರರಾಷ್ಟ್ರೀಯ ಕಾಫಿ ದಿನಾಚರಣೆ ಅತ್ಯಂತ ಯಶಸ್ವಿಯಾಗಿದ್ದು ಈ ವರ್ಷ ಅ.1 ರಂದು  ದಸರಾ ಮುಗಿದ ಮರುದಿನವೇ ಭಾನುವಾರ ದುಬಾರೆಯಲ್ಲಿ ಕಾಫಿ ಮಾರಾಟ, ಕಾಫಿ ಉತ್ಪನ್ನಗಳ ಪ್ರದರ್ಶನ ಮಳಿಗೆಯನ್ನು ತೆರೆಯಲು ನಿರ್ಧರಿಸಲಾಯಿತು. 
ಮಹಾಸಭೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷೆ ಚಿತ್ರಾ ಸುಬ್ಬಯ್ಯ, ಪ್ರಸ್ತುತ ಸಂಘದಲ್ಲಿ 400 ಕ್ಕೂ ಅಧಿಕ ಮಹಿಳಾ ಸದಸ್ಯೆಯರಿದ್ದಾರೆ. ಹೊಸದ್ದಾಗಿ ಹಲವಾರು ಮಹಿಳೆಯರು ಸಂಘ ಸೇರುತ್ತಿರುವ ಮೂಲಕ ಸಂಘವನ್ನು ಮತ್ತಷ್ಟು ಪ್ರಬಲಗೊಳಿಸಿದ್ದಾರೆ. ಈ ಮೂಲಕ ಕಾಫಿಯ ಮಹತ್ವವನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಸಂಘ ದಾಪುಗಾಲಿಡುತ್ತಿದೆ ಎಂದು ಹಷ9 ವ್ಯಕ್ತಪಡಿಸಿದರು.

 ಸಂಘದ ಪ್ರಧಾನ ಕಾರ್ಯದರ್ಶಿ ಅನಿತಾ ನಂದ ಮಾತನಾಡಿ ಸುಸ್ಥಿರ ಕೃಷಿಯ ಬಗ್ಗೆ ಹೊರ ಜಿಲ್ಲೆಗಳಲ್ಲಿ ಮುಖ್ಯವಾಗಿ ಸಾಗರ, ಶಿರಸಿ  ವ್ಯಾಪ್ತಿಯಲ್ಲಿ ಗಮನಾಹ9 ಸಾಧನೆಯಾಗಿದೆ. ಈ ನಿಟ್ಟಿನಲ್ಲಿ ಕೊಡಗಿನ ಕಾಫಿ ಬೆಳೆಗಾರ ಮಹಿಳೆಯರು ಇಂಥ ಕೃಷಿ ಪ್ರದೇಶಗಳಿಗೆ ಅಧ್ಯಯನ ಭೇಟಿ ನೀಡುವಂತೆ ಸಲಹೆ ನೀಡಿದರು. 

10 ವರ್ಷಗಳಿಂದ ಕಾಫಿ ದರ ಒಂದೇ ರೀತಿಯಿದೆಯಾದರೂ ಕಾಫಿ ತೋಟಗಳ ನಿರ್ವಹಣೆ, ರಾಸಾಯನಿಕಗಳ ದರ, ಕಾರ್ಮಿಕರ ವೇತನ ಮಾತ್ರ ಹೆಚ್ಚುತ್ತಲೇ ಇದೆ. ಈ ಪರಿಸ್ಥಿತಿಯಲ್ಲಿ ಕಾಫಿಯ ಉತ್ಪಾದನೆ ಹೆಚ್ಚುವುದು ಅನಿವಾರ್ಯವಾಗಿದೆ. ಇಲ್ಲದಿದ್ದಲ್ಲಿ ಭವಿಷ್ಯದಲ್ಲಿ ಕಾಫಿ ಕೃಷಿಗೆ ಗಂಡಾಂತರ ಖಂಡಿತಾ ಎಂದು ಅನಿತಾ ನಂದ ಎಚ್ಚರಿಸಿದರು. 

ಸಂಘದ ಮಾಜಿ ಅಧ್ಯಕ್ಷೆ ಚಂದ್ರಮತಿ ಗಣೇಶ್ ಮಾತನಾಡಿ, ಸಂಘದ ಈ ಹಿಂದಿನ ಬೇಡಿಕೆಯಂತೆ ಇದೀಗ ಕಾಫಿ ಮಂಡಳಿಗೆ ಬೆಳೆಗಾರರೇ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಆದರೆ, ಕಾಫಿ ಮಂಡಳಿಯಲ್ಲಿ ಅಧ್ಯಕ್ಷರಿಗೆ ಗುರುತರ ಜವಬ್ದಾರಿಕೆಯನ್ನೇ ನೀಡದೇ ಕಾರ್ಯದರ್ಶಿಗೇ ಎಲ್ಲಾ ಹೊಣೆ ನೀಡಲಾಗಿದೆ. ಇಂಥ ಪರಿಸ್ಥಿತಿ ಬದಲಾಗಿ ಕಾಫಿ ಮಂಡಳಿಯಲ್ಲಿನ ಬೆಳೆಗಾರರೇ ಆಗಿರುವ ಅಧ್ಯಕ್ಷರಿಗೇ ಹೆಚ್ಚಿನ ಅಧಿಕಾರ ದೊರಕುವಂತಾಗಬೇಕೆಂದು ಒತ್ತಾಯಿಸಿದರು. 
ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ಖಚಾಂಚಿ ಭಾವನಾ ಪ್ರವೀಣ್ ಸಂಘದ ಲೆಕ್ಕಪತ್ರ ಮಂಡಿಸಿದರು. ಸಂಘವು ಆಥಿ9ಕ ಸಾಲಿನಲ್ಲಿ 1.81 ಲಕ್ಷ ವಹಿವಾಟು ಕೈಗೊಂಡು 67 ಸಾವಿರ ರು. ಲಾಭ ಗಳಿಸಿದ್ದಾಗಿ ಅವರು ಮಾಹಿತಿ ನೀಡಿದರು. 

ಕಳೆದ ವರ್ಷದ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆಯ ಯಶಸ್ಸಿಗೆ  ಸಹಕರಿಸಿದ ಹಿರಿಯ ಪತ್ರಕರ್ತ ಅನಿಲ್ ಎಚ್.ಟಿ. ಅವರನ್ನು  ಸಂಘದ ವಾರ್ಷಿಕ ಮಹಾಸಭೆಯಲ್ಲಿ  ಗೌರವಿಸಲಾಯಿತು.

 ಈ ಸಂದರ್ಭ ಮಾತನಾಡಿದ ಅನಿಲ್ ಎಚ್.ಟಿ., ಜಿಲ್ಲೆಯ ಹೊಟೇಲ್, ರೆಸಾರ್ಟ್, ಹೋಂಸ್ಟೇಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಸಂಘದ ಸದಸ್ಯೆಯರು ಉತ್ತಮ ಕಾಫಿ ತಯಾರಿಕಾ ಕಾರ್ಯಾಗಾರ ಆಯೋಜಿಸುವಂತೆ ಸಲಹೆ ನೀಡಿದರು. ಕಾಫಿ ಜಿಲ್ಲೆ ಎನಿಸಿದ ಕೊಡಗಿನಲ್ಲಿಯೇ ಕಾಫಿ ಬಳಕೆ ಕಡಮೆಯಿದ್ದು, ಜಿಲ್ಲೆಯ ಜನತೆ ಮೊದಲು ಕಾಫಿ ಕುಡಿಯುವ ಮೂಲಕ ತಾವೇ ಉತ್ಪಾದಿಸುವ ಬೆಳೆಗೆ ಸೂಕ್ತ ವ್ಯಾಪಾರ ಮಾರುಕಟ್ಟೆ ಕಂಡುಕೊಳ್ಳುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಪಾಲೆಕಂಡ ಅನಿತಾ  ಅಯ್ಯಣ್ಣ, ನೂತನ ಜಂಟಿ ಕಾರ್ಯದರ್ಶಿ ಜ್ಯುತಿಕ  ಬೋಪಣ್ಣ  ಹಾಜರಿದ್ದರು.

ಚಿತ್ರಾಸುಬ್ಬಯ್ಯ ಅಧ್ಯಕ್ಷೆ,  ಅನಿತಾ ನಂದಾ ಪ್ರಧಾನ ಕಾರ್ಯದರ್ಶಿಯಾಗಿ ಮರು ಆಯ್ಕೆ

 ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ಮೂರು ವಷ9ಗಳ  ನೂತನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ  ಪಂದಿಕುಟ್ಟೀರ ಚಿತ್ರಾಸುಬ್ಬಯ್ಯ ಅಧ್ಯಕ್ಷೆಯಾಗಿ,  ಅಪ್ಪನೆರವಂಡ ಅನಿತಾ ನಂದಾ ಪ್ರಧಾನ ಕಾರ್ಯದರ್ಶಿಯಾಗಿ, ಭಾವನಾ ಪ್ರವೀಣ್ ಖಚಾಂಚಿಯಾಗಿ ಮರು ಆಯ್ಕೆಯಾಗಿದ್ದು, ಮುಕ್ಕಾಟೀರ ಜ್ಯುತಿಕ ಬೋಪಣ್ಣ ಜಂಟಿ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸುಂಟಿಕೊಪ್ಪ, ಚೆಟ್ಟಳ್ಳಿ ವಲಯ ಘಟಕದ ಮುಖ್ಯಸ್ಥೆಯಾಗಿ ಸುಮಾತಿಮ್ಮಯ್ಯ, ಪಾಲಿಬೆಟ್ಟ ವಲಯ ಘಟಕದ ಮುಖ್ಯಸ್ಥೆಯಾಗಿ ಅನಿತಾ ಸುರೇಶ್ ನೇಮಕಗೊಂಡರು. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿನ ಸದಸ್ಯೆಯರನ್ನು ಸಂಘಟಿಸಿ ಕಾಫಿ ಸಂಬಂಧಿತ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಆಯೋಜಿಸಲಾಗುತ್ತದೆ ಎಂದು  ಅಧ್ಯಕ್ಷೆಯಾಗಿ ಮರು ಆಯ್ಕೆಯಾದ ಚಿತ್ರಾಸುಬ್ಬಯ್ಯ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News