ಸಿದ್ದಗಂಗಾ ಸ್ವಾಮೀಜಿಗಳನ್ನು ರಾಜಕೀಯಗೊಳಿಸದಿರಿ

Update: 2017-09-13 18:52 GMT

ಸ್ವತಂತ್ರ ಲಿಂಗಾಯತ ಧರ್ಮ ಹೋರಾಟ ರಾಜ್ಯಾದ್ಯಂತ ತನ್ನ ಧ್ವನಿಯನ್ನು ತೀವ್ರವಾಗಿ ವಿಸ್ತರಿಸಿಕೊಳ್ಳುತ್ತಿದೆ. ಬಹುಶಃ ಇತ್ತೀಚಿನ ದಿನಗಳಲ್ಲಿ ರಾಜ್ಯ ಕಂಡ ಅತ್ಯಂತ ಮಹತ್ತರ ಚಳವಳಿ ಮತ್ತು ಈ ದೇಶದ ವೈದಿಕ ಹಿತಾಸಕ್ತಿಗಳನ್ನು ಕಂಗೆಡಿಸಿರುವ ಚಳವಳಿ ಇದಾಗಿದೆ. ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ ಮತ್ತು ರಾಜಕೀಯವಾಗಿ ಏಕಕಾಲದಲ್ಲಿ ರಾಜ್ಯದೊಳಗೆ ಮಹತ್ತರ ಬದಲಾವಣೆಗಳನ್ನು ತರಬಲ್ಲ ಒಂದು ಕ್ರಾಂತಿಕಾರಿ ಬೆಳವಣಿಗೆಯಾಗಿದೆ ಲಿಂಗಾಯತ ಸ್ವತಂತ್ರ ಧರ್ಮ ಎಂಬ ಆಂದೋಲನ. ಇದು ಕೇವಲ ರಾಜ್ಯಕ್ಕಷ್ಟೇ ಸೀಮಿತವಾದ ಚಳವಳಿಯಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಲಿಂಗಾಯತ ಧರ್ಮ ಸ್ವತಂತ್ರಧರ್ಮವೆಂದು ಘೋಷಣೆಯಾದರೆ, ಆ ಧರ್ಮ ಪ್ರತಿಪಾದಿಸುವ ಕ್ರಾಂತಿಕಾರಿ ಚಿಂತನೆಗಳು ದೇಶಾದ್ಯಂತ ಮುನ್ನೆಲೆಗೆ ಬರುತ್ತವೆೆ.

ಹಾಗಾದಲ್ಲಿ ಅದು ಯಾರಿಗೆ ಹಿನ್ನಡೆಯಾಗಲಿದೆ ಎನ್ನುವುಟದನ್ನು ಇಲ್ಲಿ ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಲಿಂಗಾಯತ ಧರ್ಮ ಹುಟ್ಟಿದ್ದು ಬಸವಣ್ಣರ ಮೂಲಕ. ವರ್ಣಾಶ್ರಮ ವ್ಯವಸ್ಥೆ ಮತ್ತು ಪುರೋಹಿತಶಾಹಿ ವ್ಯವಸ್ಥೆಯ ವಿರುದ್ಧ ಸಿಡಿದು ತಳಸ್ತರದ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಅವರು ಲಿಂಗಾಯತ ಧರ್ಮವನ್ನು ಕಟ್ಟಿದರು. ವಿಗ್ರಹಾರಾಧನೆ, ವೌಢ್ಯಗಳು, ಕಂದಾಚಾರಗಳು, ಪೀಠಗಳ ವಿರುದ್ಧ ಲಿಂಗಾಯತ ಧರ್ಮ ಮಾತನಾಡುತ್ತದೆ. ಲಿಂಗಾಯತ ಧರ್ಮ ಸ್ವತಂತ್ರವಾಗುವುದೆಂದಾಗ ಅದು ಕೆಲವರಿಗೆ ಅಪಥ್ಯವಾಗುವುದು ಇದೇ ಕಾರಣಕ್ಕೆ. ಮುಖ್ಯವಾಗಿ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಎಂಬ ಕೂಗು ಇಂದು ನಿನ್ನೆಯದಲ್ಲ. ಲಿಂಗಾಯತ ಧರ್ಮ ಹೇಗೆ ಹಿಂದೂ ಧರ್ಮಕ್ಕಿಂತ ಭಿನ್ನ ಎನ್ನುವುದನ್ನು ವಿವಿಧ ಸ್ವಾಮೀಜಿಗಳು, ಚಿಂತಕರು ಎಪ್ಪತ್ತರ ದಶಕದಲ್ಲೇ ಚರ್ಚಿಸಿದ್ದರು. ಆಗ ಸಣ್ಣಗಿದ್ದ ಧ್ವನಿ ನಿಧಾನಕ್ಕೆ ಹಂತಹಂತವಾಗಿ ಎತ್ತರಿಸುತ್ತಾ ಬಂತು.

ಎಂ.ಎಂ. ಕಲಬುರ್ಗಿಯವರ ಹತ್ಯೆ, ಅವರು ಲಿಂಗಾಯತ ಧರ್ಮದ ಕುರಿತಂತೆ ನಡೆಸಿದ ಅಪಾರ ಸಂಶೋಧನೆಯೇ ಕಾರಣ ಎನ್ನುವ ದಟ್ಟ ಭಾವನೆ ರಾಜ್ಯಾದ್ಯಂತ ಇದೆ. ಲಿಂಗಾಯತಧರ್ಮ ಹೇಗೆ ಹಿಂದೂಧರ್ಮ ಅಥವಾ ವೀರಶೈವ ಧರ್ಮ ಅಲ್ಲ ಎನ್ನುವುದನ್ನು ಹಲವು ಲೇಖನಗಳಲ್ಲಿ ಅವರು ಬರೆದಿದ್ದಾರೆ ಮತ್ತು ಹಲವು ಸಂದರ್ಭಗಳಲ್ಲಿ ಇದನ್ನು ಮಾತನಾಡಿದ್ದಾರೆ. ಈ ಸಂಶೋಧನೆ ಆರೆಸ್ಸೆಸ್ ಪ್ರತಿಪಾದಿಸುವ ಹಿಂದುತ್ವಕ್ಕೂ, ಹಿಂದೂ ಧರ್ಮದ ಹೆಸರಲ್ಲಿ ಪ್ರತಿಪಾದಿಸುವ ವೈದಿಕ ಧರ್ಮಕ್ಕೂ ಕೊಡಲಿ ಏಟು ನೀಡುವ ಭಯ ಕೆಲವರಲ್ಲಿತ್ತು. ಆದುದರಿಂದಲೇ ಕಲಬುರ್ಗಿಯನ್ನು ಕೊಂದು ಅವರ ಬಾಯಿ ಮುಚ್ಚಿಸುವ ಪ್ರಯತ್ನ ನಡೆಯಿತು ಎಂದು ಕೆಲವು ಚಿಂತಕರು ಭಾವಿಸುತ್ತಾರೆ. ಕಲಬುರ್ಗಿಯ ಸಾವು ಲಿಂಗಾಯತರ ಒಳಗೆ ಹೊಸ ಜಾಗೃತಿಯನ್ನು ಮೂಡಿಸಿದ್ದು ಸುಳ್ಳಲ್ಲ.

ಗೌರಿ ಲಂಕೇಶ್ ಸಾವಿನ ಹಿಂದೆಯೂ ಲಿಂಗಾಯತ ಧರ್ಮದ ವಿರೋಧಿಗಳಿದ್ದಾರೆ ಎನ್ನುವ ಮಾತುಗಳಿವೆ. ಲಿಂಗಾಯತ ಸಮುದಾಯದಿಂದ ಬಂದಿರುವ ಗೌರಿ, ಹಲವು ಬಾರಿ, ಲಿಂಗಾಯತ ಧರ್ಮವನ್ನು ಹೇಗೆ ವೈದಿಕ ಶಕ್ತಿಗಳು ವಿರೂಪಗೊಳಿಸಿವೆ ಎನ್ನುವುದನ್ನು ಬರೆದಿದ್ದರು ಮತ್ತು ಬಸವಣ್ಣನ ತತ್ವವನ್ನು ಎತ್ತಿ ಹಿಡಿದಿದ್ದರು. ಇತ್ತೀಚೆಗೆ ಬೆಳಗಾವಿಯೂ ಸೇರಿದಂತೆ ಹಲವೆಡೆ ನಡೆದ ಲಿಂಗಾಯತ ಸ್ವತಂತ್ರ ಧರ್ಮ ಆಂದೋಲನಕ್ಕೆ ಸೇರಿದ ಜನರ ಸಂಖ್ಯೆ ನೋಡಿ, ಕೇಂದ್ರ ಸರಕಾರ ಬೆಚ್ಚಿ ಬಿದ್ದಿತ್ತು. ಈ ಚಳವಳಿಗೆ ಹಿನ್ನಡೆಯಾಗಿಸುವ ಉದ್ದೇಶದಿಂದಲೇ ಗೌರಿಯ ಕೊಲೆ ನಡೆಸಲು ಹಿತಾಸಕ್ತಿಯನ್ನು ಸಂಚು ರೂಪಿಸಿರಬಹುದು ಎಂದೂ ಹಲವರು ಆರೋಪಿಸುತ್ತಿದ್ದಾರೆ. ಲಿಂಗಾಯತ ಆಂದೋಲನ ಉಳಿದೆಲ್ಲಾ ಆಂದೋಲನಕ್ಕಿಂತ ಆರೆಸ್ಸೆಸ್‌ನ್ನು ಹೆಚ್ಚು ಭಯ ಬೀಳಿಸಿದೆ. ಈ ಆಂದೋಲನ ಯಾವುದೇ ಪ್ರಗತಿಪರ ಚಿಂತಕರು ಅಥವಾ ರಾಜಕೀಯ ಪಕ್ಷಗಳಿಂದ ಸಂಘಟಿತವಾದುದಲ್ಲ. ತಳಸ್ತರದಿಂದ ಈ ಹೋರಾಟ ಹುಟ್ಟಿದೆ.

ಲಿಂಗಾಯತ ಸ್ವಾಮೀಜಿಗಳು ಅದರ ಹಿಂದಿದ್ದಾರೆ. ಆಧ್ಯಾತ್ಮಿಕತೆಯ ಬಲ ಈ ಹೋರಾಟಕ್ಕಿದೆ. ಜನಸಾಮಾನ್ಯರು ಸ್ವಯಂ ಒಂದಾಗಿ ಈ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಲಿಂಗಾಯತ ಧರ್ಮದ ಹೋರಾಟದ ವಿರುದ್ಧ ಆರೆಸ್ಸೆಸ್‌ನಂತಹ ಸಂಘಟನೆಗಳು ವೀರಶೈವರನ್ನು ಬಳಸಿಕೊಳ್ಳುತ್ತಿರುವುದು ಇದೇ ಕಾರಣಕ್ಕೆ. ನೇರವಾಗಿ ಆಂದೋಲನದ ವಿರುದ್ಧ ಮಾತನಾಡುವ ಯಾವ ಧೈರ್ಯವೂ ಇಲ್ಲದ ಹಿತಾಸಕ್ತಿಗಳು ವೀರಶೈವರ ಮೂಲಕ ಹೋರಾಟದೊಳಗೆ ಬಿರುಕು ಉಂಟು ಮಾಡಲು ಯತ್ನಿಸುತ್ತಿದ್ದಾರೆ. ಈಗಾಗಲೇ ಸಂಶೋಧಕರು ಹೇಳುವಂತೆ, ವೀರಶೈವ ಧರ್ಮ ಹುಟ್ಟಿದ್ದು ಶೈವ ಪಂಥದಿಂದ. ಅದರ ಮೂಲಬೇರು ಕರ್ನಾಟಕ ಅಲ್ಲ. ಈ ಪಂಥೀಯರು ವೈದಿಕರ ದಟ್ಟ ಪ್ರಭಾವವನ್ನು ಹೊಂದಿದ್ದಾರೆ. ಆದುದರಿಂದ ವೀರಶೈವರು ತಮ್ಮನ್ನು ತಾವು ‘ಹಿಂದೂಗಳು’ ಎಂದು ಗುರುತಿಸುವುದರಲ್ಲಿ ಅರ್ಥವಿದೆ.

ಇದೇ ಸಂದರ್ಭದಲ್ಲಿ ವೀರಶೈವರ ಯಾವ ಆಚರಣೆಗಳನ್ನೂ ಅನುಸರಿಸದ ಲಿಂಗಾಯತರ ಬಗ್ಗೆ ಯಾವ ನಿರ್ಧಾರವನ್ನೂ ತಳೆಯುವ ಅಧಿಕಾರ ಅದರ ಮುಖಂಡರಿಗಿಲ್ಲ ಎನ್ನುವುದು ಲಿಂಗಾಯತ ಧರ್ಮ ಹೋರಾಟದ ಮುನ್ನೆಲೆಯಲ್ಲಿರುವ ಸ್ವಾಮೀಜಿಗಳ ವಾದ. ವೈದಿಕ ಶೋಷಣೆಯ ವಿರುದ್ಧ ಬಂಡೆದ್ದ ಧರ್ಮ ಲಿಂಗಾಯತ. ಆದರೆ ವೈದಿಕರ ಆಚರಣೆಗಳಿಗೆ ಅವಲಂಬಿತವಾಗಿರುವ ಪಂಥ ವೀರಶೈವರದು. ಹೀಗಿರುವಾಗ ವೀರಶೈವರು ಲಿಂಗಾಯತರು ಒಂದಾಗುವುದು ಹೇಗೆ ಸಾಧ್ಯ? ಎನ್ನುವ ಸ್ವಾಮೀಜಿಗಳ ವಾದಗಳಿಗೆ ವಾದಗಳಿಗೆ ಸಮರ್ಥವಾಗಿ ಉತ್ತರಿಸುವ ಮೂಲಕವಷ್ಟೇ ಈ ಆಂದೋಲನವನ್ನು ವೀರಶೈವರು ತಡೆಯಬಹುದಾಗಿದೆ. ಇದೀಗ ವೀರಶೈವರ ಮೂಲಕ ಗೊಂದಲ ಹುಟ್ಟಿಸಲು ವಿಫಲವಾಗಿರುವ ಹಿತಾಸಕ್ತಿಗಳು ಲಿಂಗಾಯತ ನೈತಿಕ ಶಕ್ತಿಯನ್ನು ಉಡುಗಿಸಲು ಇದೀಗ ಸ್ವತಃ ಸಿದ್ದಗಂಗಾ ಸ್ವಾಮೀಜಿಗಳನ್ನು ಎಳೆದು ತಂದಿರುವುದು ವಿಷಾದನೀಯ ಸಂಗತಿಯಾಗಿದೆ.

ಸಿದ್ದಗಂಗಾ ಸ್ವಾಮೀಜಿಗಳು ಈಗಾಗಲೇ ತನ್ನ ಸಾಮಾಜಿಕ ಸೇವೆಯ ಮೂಲಕ ದೇಶಾದ್ಯಂತ ಗುರುತಿಸಲ್ಪಟ್ಟವರು. ಶತಾಯುಷಿಗಳು. ಅವರಿಗೆ ಸಮಾಜದಲ್ಲಿ ಅವರದ್ದೇ ಆದ ಘನತೆ ಗೌರವವಿದೆ. ತಮ್ಮ ನಿಷ್ಕಲ್ಮಷ ಸೇವೆಯಿಂದಾಗಿ ಆ ಘನತೆಯನ್ನು ತನ್ನದಾಗಿಸಿಕೊಂಡವರು. ನೂರು ದಾಟಿರುವ ಸ್ವಾಮೀಜಿಗಳು ಎಲ್ಲ ರಾಜಕೀಯಗಳಿಂದ ದೂರವಿದ್ದವರು. ಇದೀಗ ಅಂತಹ ಸ್ವಾಮೀಜಿಗಳನ್ನು ಮುಂದಿಟ್ಟುಕೊಂಡು ಕೆಲವು ಶಕ್ತಿಗಳು ಲಿಂಗಾಯತ ಧರ್ಮದ ಹೋರಾಟವನ್ನು ಬಗ್ಗು ಬಡಿಯಲು ಯತ್ನಿಸುತ್ತಿವೆ. ಈ ಸ್ವಾಮೀಜಿಯ ಜೊತೆಗಿರುವ ಕೆಲವರನ್ನು ಖರೀದಿಸಿ, ಬಸವಣ್ಣರ ಚಿಂತನೆಯ ವಿರುದ್ಧ ಮಾತನಾಡಿಸಲು ಹೊರಟಿವೆ. ಇದು ಅಕ್ಷಮ್ಯ ಅಪರಾಧವಾಗಿದೆ. ಲಿಂಗಾಯತ ಧರ್ಮ ಯಾಕೆ ಬೇಡ ಎನ್ನುವವರು ಮೊತ್ತ ಮೊದಲು ಲಿಂಗಾಯತ ಧರ್ಮ ಯಾಕೆ ಸ್ವತಂತ್ರವಾಗಬೇಕು ಎಂದು ವಾದಿಸುವವರ ಪ್ರಶ್ನೆಗಳಿಗೆ ಉತ್ತರಿಸಲಿ. ಅವರ ಸಂಶಯವನ್ನು ನಿವಾರಿಸಲಿ. ಬಸವಣ್ಣ ಮತ್ತು ಅವರ ಶರಣರು ಯಾವುದನ್ನೆಲ್ಲ ವಿರೋಧಿಸಿದರೋ ಅವುಗಳನ್ನು ಒಪ್ಪುವವರು ಹೇಗೆ ಲಿಂಗಾಯತರಾಗುತ್ತಾರೆ? ಒಂದು ಧರ್ಮ ತನ್ನನ್ನು ತಾನು ಸ್ವತಂತ್ರ ಎಂದು ಘೋಷಿಸಬೇಕಾದರೆ ಅದು ತನ್ನದೇ ಆದ ಸ್ವತಂತ್ರ ಚಿಂತನೆಯನ್ನು ಹೊಂದಿರಬೇಕಾಗುತ್ತದೆ. ವೀರಶೈವ ಅಂತಹ ಯಾವುದೇ ಸ್ವತಂತ್ರ ಚಿಂತನೆಯನ್ನು ಹೊಂದಿಲ್ಲ. ಆದರೆ ಶರಣರ ವಚನಗಳನ್ನಷ್ಟೇ ನೆಚ್ಚಿಕೊಂಡಿರುವ ಲಿಂಗಾಯತ ಧರ್ಮ ಅಂತಹ ಸ್ವತಂತ್ರ ಚಿಂತನೆಯನ್ನು ಹೊಂದಿದೆ.

ಆದುದರಿಂದ, ಸಿದ್ದಗಂಗ ಸ್ವಾಮೀಜಿಯನ್ನು ಮುಂದಿಟ್ಟು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಪ್ರಯತ್ನದಿಂದ ರಾಜಕೀಯ ನಾಯಕರು ಹಿಂದೆ ಸರಿಯಬೇಕು. ಬಸವ ಧರ್ಮ ಈ ಎಲ್ಲ ಸ್ವಾಮೀಜಿಗಳು ಹುಟ್ಟುವ ಮೊದಲು ತಳಸ್ತರ ಸಮುದಾಯದ ಒಂದು ಆಂದೋಲನವಾಗಿ ಹುಟ್ಟಿರುವಂತಹದು. ಆ ಆಂದೋಲನ ಸಾಕಷ್ಟು ಬಲಿದಾನಗಳನ್ನು ಬೇಡಿದೆ. ಸ್ವತಃ ಬಸವಣ್ಣ ಸೇರಿದಂತೆ ನೂರಾರು ಶರಣರ ತ್ಯಾಗಗಳಿವೆ. ಅವರ ವಚನಗಳೇ ಲಿಂಗಾಯತ ಧರ್ಮ ಸ್ವತಂತ್ರ ಹೌದೋ, ಅಲ್ಲವೋ ಎನ್ನುವುದನ್ನು ಹೇಳುತ್ತದೆ. ಆದುದರಿಂದ ಇಂದು ನಾವು ವಚನಗಳ ಆಧಾರದಲ್ಲಿ ಲಿಂಗಾಯತ ಧರ್ಮದ ಕುರಿತಂತೆ ಒಂದು ನಿರ್ಧಾರಕ್ಕೆ ಬರಬೇಕು. ಈ ಸಂಘರ್ಷಕ್ಕೆ ಸಿದ್ದಗಂಗಾ ಸ್ವಾಮೀಜಿಗಳನ್ನು ಬಲಿಪಶು ಮಾಡುವುದು ಎಲ್ಲ ರೀತಿಯಲ್ಲೂ ಖಂಡನೀಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News