ಸೆ.15ರಂದು ಜಿಲ್ಲಾ ಮಟ್ಟದ ಜ್ಞಾನ ವಿಜ್ಞಾನ ಮೇಳ
ಚಿಕ್ಕಮಗಳೂರು, ಸೆ.14: ವಿದ್ಯಾ ಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ಸಂಬಂಧಿತ ವಿದ್ಯಾ ಭಾರತಿಯ ವತಿಯಿಂದ ಜಿಲ್ಲಾ ಮಟ್ಟದ ಜ್ಞಾನ ವಿಜ್ಞಾನ ಮೇಳವನ್ನು ಸೆ.15ರಂದು ನಗರದ ಬಸವನಹಳ್ಳಿ ಮುಖ್ಯರಸ್ತೆಯಲ್ಲಿರುವ ಮಹಿಳಾಶ್ರಮ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿದ್ಯಾಭಾರತಿ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೇಳದಲ್ಲಿ ಜಿಲ್ಲೆಯ ಸುಮಾರು 100ಕ್ಕೂ ಅಧಿಕ ವಿದ್ಯಾರ್ಥಿಗಳು ಆಗಮಿಸಲಿದ್ದಾರೆ. ಬಾಲ, ಶಿಶು ಹಾಗೂ ಕಿಶೋರ ಎಂಬ ಮೂರು ವರ್ಗಗಳಲ್ಲಿ ಸ್ಪರ್ಧೆಯು ನಡೆಯಲಿದೆ. ವಿಜ್ಞಾನ, ಗಣಿತ, ಕಂಪ್ಯೂಟರ್ ಹಾಗೂ ಸಂಸ್ಕೃತಿ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಯೋಗಗಳು, ಪ್ರದರ್ಶನ, ರಸಪ್ರಶ್ನೆ ಹಾಗೂ ಪತ್ರವಾಚನ ಸ್ಪರ್ಧೆಗಳು ನಡೆಯಲಿದೆ. ಅಂದು ಬೆಳಗ್ಗೆ 11ಕ್ಕೆ ಮೇಳವನ್ನು ಶಾಸಕರಾದ ಶ್ರೀ ಸಿ ಟಿ ರವಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಹಿಳಾಶ್ರಮದ ಅಧ್ಯಕ್ಷೆ ಶ್ರೀಮತಿ ಗಿರಿಜಮ್ಮ ರಾಮಸ್ವಾಮಿ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ತಾಪಂ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್, ವಿದ್ಯಾಭಾರತಿಯ ಪ್ರಾಂತ ವಿಜ್ಞಾನ ಪ್ರಮುಖರಾದ ಪ್ರೊ. ಎಸ್. ವಿ. ಹೊನ್ನುಂಗರ ಹಾಗೂ ವಿದ್ಯಾಭಾರತಿಯ ಜಿಲ್ಲಾ ಅಧ್ಯಕ್ಷ ಸತೀಶ್ ಗೋಚುವಳ್ಳಿ ಭಾಗವಹಿಸಲಿದ್ದಾರೆ. ಮದ್ಯಾಹ್ನ 3ಕ್ಕೆ ಐಡಿಎಸ್‍ಜಿ ಕಾಲೇಜಿನ ಉಪನ್ಯಾಸಕ ಹನುಮಂತಪ್ಪ ಮಕರಿ ಅವರೊಂದಿಗೆ ವಿದ್ಯಾರ್ಥಿಗಳು ‘ವಿಜ್ಞಾನಿಯೊಂದಿಗೆ ಸಂವಾದ’ದಲ್ಲಿ ಪಾಳ್ಗೊಳ್ಳಲಿದ್ದಾರೆ.
3.45ರಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿದ್ಯಾಭಾರತಿಯ ಪ್ರಾಂತ ವಿಜ್ಞಾನ ಪ್ರಮುಖರಾದ ಶ್ರೀ ಎಸ್. ವ್ಹಿ. ಹೊನ್ನುಂಗರ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.